ಬ್ರಿಮ್ಸ್ ವೈದ್ಯರ ಎಡವಟ್ಟಿನಿಂದ ನನ್ನ ಬಲಗೈ ಬೆರಳಿನ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು, ನಿರ್ಲಕ್ಷ್ಯ ತೋರಿದ ಸಂಬಂಧಪಟ್ಟ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವೆಚ್ಚ ಭರಿಸಬೇಕೆಂದು ನರಸಿಂಗ್ ಎಂಬುವರು ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ʼಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ ಗ್ರಾಮದ ನಿವಾಸಿಯಾಗಿದ್ದು, ನನ್ನ ಬಲಗೈ ಬೆರಳಿನ ಮೂಳೆ ಮುರಿದ ಕಾರಣ 2024ರ ನ.21 ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದೆ. ನ.26 ರಂದು ಕೈ ಬೆರಳಿನ ಶಸ್ತ್ರಚಿಕಿತ್ಸೆ ನಡೆಸಿ ನ.30 ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದರು. ವೈದ್ಯರ ಸಲಹೆಯಂತೆ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದೇನೆ. ಬಳಿಕ 2025ರ ಜ.4 ರಂದು ಮತ್ತೊಮ್ಮೆ ಕೈ ಬೆರಳಿನ ಎಕ್ಸ್-ರೇ ತೆಗೆದರೆ ಮತ್ತೆ ನನ್ನ ಕೈ ಬೆರಳಿನ ಮೂಳೆ ಮೊದಲಿನಂತೆ ತುಂಡಾಗಿದ್ದು ಕಂಡು ಬಂದಿದೆʼ ಎಂದು ನರಸಿಂಗ್ ಆರೋಪಿಸಿದ್ದಾರೆ.
ʼವೈದ್ಯರ ನಿರ್ಲಕ್ಷತನದಿಂದಲೇ ನನ್ನ ಕೈಬೆರಳಿನ ಶಸ್ತ್ರಚಿಕಿತ್ಸೆ ಫಲಕಾರಿಯಾಗಿಲ್ಲ. ಇದಕ್ಕೆ ಕಾರಣರಾದ ವೈದ್ಯರನ್ನು ಕೂಡಲೇ ಅಮಾನತುಗೊಳಿಸಿ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕುʼ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಗುರುದಾಸ್ ಅಮದಾಲಪಾಡ್, ಆನಂದ್ ರೆಡ್ಡಿ, ಗಣೇಶ್, ರವಿ, ನಿತೀನ್, ಸುನಿಲ್ ಇದ್ದರು.