ರಾಜ್ಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ, ಸ್ವಾರ್ಥ ರಾಜಕಾರಣ, ಲಾಭದ ರಾಜಕಾರಣ ಹೆಚ್ಚಾಗಿದ್ದು, ಪರ್ಯಾಯ ಪಕ್ಷದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರಮ ಸಮಾಜ ಪಕ್ಷವನ್ನು ಘೋಷಣೆ ಮಾಡುತ್ತಿದ್ದೇನೆ ಎಂದು ಎ.ಟಿ ಕೃಷ್ಣನ್ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಸಂಸದೀಯ ಭಾಷೆಯನ್ನು ಬಿಟ್ಟು ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಶ್ರಮ ಜೀವಿಗಳನ್ನು ಮರೆತು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಇರುವ ರೈತರು, ಕೂಲಿ ಕಾರ್ಮಿಕರಿಗೆ ನೆಮ್ಮದಿ, ಶಾಂತಿ ಇಲ್ಲದೆ ಜೀವನ ನಿರ್ವಹಣೆ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ನಾಯಕರು ಹಳ್ಳಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳ ಪೈಕಿ ಆದರ್ಶ ರಾಜಕಾರಣ ಕೊಟ್ಟವರು ಇದ್ದಾರೆ. ಆದರೆ ಇತ್ತೀಚೆಗೆ ರೈತರ ಮೇಲೆ ಲಾಠಿ ಚಾರ್ಜ್ ಮಾಡುವುದು, ದಬ್ಬಾಳಿಕೆ ಮಾಡುವಂತ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ. ರೈತರ ಸಮಸ್ಯೆಗಳ ಕುರಿತು ರಾಜಕೀಯ ನಾಯಕರು ಆಲೋಚನೆ ಮಾಡುತ್ತಿಲ್ಲ ಎಂದು ದೂರಿದರು.
ದೇಶದಲ್ಲಿ ಎಲ್ಲಾ ರೀತಿಯ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ಗ್ರಾಮ ಸೃಷ್ಟಿ ಆಗಿದೆಯೇ ಎಂಬುದನ್ನು ನೋಡಿದಾಗ ಎಲ್ಲೂ ಸಹ ನವ ಗ್ರಾಮಗಳು ಸೃಷ್ಟಿ ಆಗಿಲ್ಲ. ಶಿಕ್ಷಕರು ಸಹ ಇಂದು ಕಷ್ಟದಲ್ಲಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಜೀವನ ನಿರ್ವಹಣೆಗೂ ಒದ್ದಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ. ಹಾಗಾಗಿ ಇದೆಲ್ಲವನ್ನೂ ಒಳಗೊಂಡಂತೆ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರವಾಸ ಕೈಗೊಂಡು ದೇಶದ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸಂಸದರು ಮಾನಸಿಕ ಅಸ್ವಸ್ಥರಾಗಿರಬೇಕು : ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ತಿರುಗೇಟು
ರಾಜ್ಯ ಹಳ್ಳಿ ಮಕ್ಕಳ ಸಂಘದ ವೆಂಕಟರಮಣ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಸಂಚಾಲಕರಾದ ಉದಯ ಶಂಕರ, ಟಿ.ಕೆ.ಮಂಜುನಾಥ್, ಗಂಗಾಧರ್ ಹಾಗೂ ಇತರರಿದ್ದರು.