ಗುಬ್ಬಿ ತಾಲೂಕಿನ ಕಸಬ ಹೋಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಡಿ.ಸುರೇಶ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಜಿ.ಆರ್.ಚನ್ನಬಸವಣ್ಣ ಅವಿರೋಧ ಆಯ್ಕೆಯಾದರು.
ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ವಿಎಸ್ಎಸ್ಎನ್ ಸೊಸೈಟಿ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಇಬ್ಬರು ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಡಿ.ಸುರೇಶ್ ಗೌಡ ಮಾತನಾಡಿ ಕಸಬ ವಿಎಸ್ಎಸ್ಎನ್ ಚುನಾವಣೆ ನಿಲ್ಲಿಸಲು ಕೆಲ ದುಷ್ಟ ಶಕ್ತಿಗಳು ಪ್ರಯತ್ನ ಮಾಡಿದ್ದವು. ಆದರೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸಹಕಾರದಿಂದ ಚುನಾವಣೆ ಸುಸೂತ್ರವಾಗಿ ನಡೆದಿದೆ. ಎಲ್ಲಾ ನಿರ್ದೇಶಕರು ಅವಿರೋಧ ಆಯ್ಕೆ ನಡೆದು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಮರು ಆಯ್ಕೆ ಮಾಡಿದ್ದಾರೆ. ಎಲ್ಲಾ ನಿರ್ದೇಶಕರ ವಿಶ್ವಾಸ ಹಾಗೂ ಕೆ.ಎನ್.ರಾಜಣ್ಣ ಅವರ ಆಶೀರ್ವಾದದಿಂದ ಮತ್ತೇ ಅಧ್ಯಕ್ಷನಾಗಿ ಅಯ್ಕೆಯಾಗಿದ್ದೇನೆ.
ರೈತರ ಕೃಷಿ ಅನುಕೂಲಕ್ಕೆ ತಕ್ಕಂತೆ ಸೊಸೈಟಿ ಕೆಲಸ ಮಾಡಲಿದೆ. ಈಗಾಗಲೇ ಬಡ್ಡಿ ರಹಿತ ಸಾಲವನ್ನು ಮೂರು ಕೋಟಿ ನೀಡಿದ್ದೇವೆ. ಮತ್ತೊಮ್ಮೆ ಮೂರು ಕೋಟಿ ಸಾಲ ನೀಡಲು ರಾಜಣ್ಣನವರ ಸಹಕಾರ ಕೋರಿದ್ದೇವೆ. ಬಡ್ಡಿ ರಹಿತ ಸಾಲ ನೀಡಿ ಕೃಷಿಕರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ನೂತನ ಉಪಾಧ್ಯಕ್ಷ ಜಿ.ಆರ್.ಚನ್ನಬಸವಣ್ಣ ಮಾತನಾಡಿ ರೈತರ ಅಭಿವೃದ್ಧಿಗೆ ಪೂರಕ ಯೋಜನೆ ಹಾಗೂ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದು ಆರ್ಥಿಕ ವಹಿವಾಟು ಸಹ ನಡೆಸಿದ್ದೇವೆ. ಕೃಷಿ ಪರಿಕರ ಖರೀದಿ ಹಾಗೂ ಕೃಷಿ ಸಾಲ ನೀಡುತ್ತಾ ಈ ರೈತರ ನೆರವಿಗೆ ನಿಂತ ಈ ಸಂಘವನ್ನು ಉತ್ತಮ ಬ್ಯಾಂಕ್ ಆಗಿ ಮೇಲ್ದರ್ಜೆಗೇರಿಸುವ ಆಲೋಚನೆ ಇದೆ. ಎಲ್ಲಾ ಸದಸ್ಯರ ಒಮ್ಮತದಲ್ಲಿ ಸಹಕಾರ ಸಚಿವ ರಾಜಣ್ಣ ಅವರ ಸಹಕಾರದಲ್ಲಿ ಸಂಘ ಅಭಿವೃದ್ದಿ ಪಡಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸಂಘದ ಸದಸ್ಯರಾದ ನರಸಿಂಹಮೂರ್ತಿ, ಜಗದೀಶ್, ಡಿ.ರಘು, ಗೋವಿಂದರಾಜು, ಕುಂಭಣ್ಣ, ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ, ಪಪಂ ಸದಸ್ಯ ರಂಗಸ್ವಾಮಿ ಸೇರಿದಂತೆ ಹಲವು ಮುಖಂಡರು ಇದ್ದರು.
