ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಯೊಬ್ಬ ಭಾರತೀಯ ಪ್ರಜೆಗಳಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಹಾಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ತಮ್ಮ ಸ್ವಾರ್ಥಪೂರಿತ ಉದ್ದೇಶಗಳಿಗೆ ಹೊಸ ಸಂವಿಧಾನ ರಚನೆಯ ಆಶಯಗಳನ್ನು ವ್ಯಕ್ತಪಡಿಸುತ್ತಿದ್ದು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಯುನಿಟಿ ಮೂಮೆಂಟ್ ಸಂಸ್ಥಾಪಕ ವಿನೋದ ರತ್ನಾಕರ್ ಒತ್ತಾಯಿಸಿದ್ದಾರೆ.
ʼಹೊಸ ಸಂವಿಧಾನ ರಚನೆಯ ಉದ್ದೇಶವು ದೇಶದ ಏಕತೆ, ಅಖಂಡತೆ ಮತ್ತು ಪ್ರಜಾಪ್ರಭುತ್ವ ವಿರುದ್ಧದ ಒಂದು ಕೃತ್ಯ. ಈ ರೀತಿಯ ಚಟುವಟಿಕೆಗಳು ಸಂವಿಧಾನದ ಮೂಲಭೂತ ತತ್ವಗಳನ್ನು ಘಾಸಿಗೊಳಿಸಲು ಯತ್ನಿಸುತ್ತವೆ. ಇದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಭಾರತದ ಸಂವಿಧಾನವು ಎಲ್ಲ ಧರ್ಮಗಳಿಗೂ ಸಮಾನ ಮಹತ್ವವನ್ನು ಒದಗಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಲಿಂಗ, ಜಾತಿ, ಧರ್ಮ, ಭಾಷೆ ಎಂಬ ಭೇದವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೆ ಸಮಾನ ಅವಕಾಶವನ್ನು ನೀಡುತ್ತದೆ. ಸಮಾಜದಲ್ಲಿ ಇರುವ ಅಸಮಾನತೆಗಳನ್ನು ಪರಿಹರಿಸಲು ಕಾನೂನು ಮತ್ತು ಆಡಳಿತ ಕ್ರಮಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತದೆ. ಹೀಗಾಗಿ ದೇಶದ ಸಂವಿಧಾನದ ಶ್ರೇಷ್ಠತೆಯನ್ನು ಯಾವ ಕಾರಣಕ್ಕೂ ಬದಲಿಸುವ ಅಗತ್ಯವಿಲ್ಲ. ಅದರ ಪ್ರತಿಯೊಂದು ಪ್ರಕರಣವು ಭಾರತದ ಪ್ರಗತಿಯನ್ನು ದೃಢಪಡಿಸಲು ರೂಪಿತವಾಗಿದೆʼ ಎಂದು ವಿಶ್ಲೇಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕೋಗಿಲೆ ಕಂಠದ ಪ್ರಕೃತಿಗೆ ಬೇಕಿದೆ ಪ್ರೋತ್ಸಾಹ
ʼಸಂವಿಧಾನ ವಿರೋಧಿ ಕೃತ್ಯಗಳಿಗೆ ಜವಾಬ್ದಾರಿ ಆಗಿರುವವರನ್ನು ಗುರುತಿಸಿ, ಅವರ ವಿರುದ್ಧ ಸರ್ಕಾರ ಹಾಗೂ ಪೊಲೀಸ್ ಇಲಾಖೆಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವವನ್ನು ವಿವರಿಸುವ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಬೇಕು. ದೇಶದ ಸಂವಿಧಾನ ವಿರೋಧಿ ಚಟುವಟಿಕೆಗಳ ಕುರಿತು ತಕ್ಷಣವೇ ಗಂಭೀರ ತನಿಖೆ ನಡೆಸಿ, ಸಂವಿಧಾನಕ್ಕೆ ಹಾನಿಯಾಗುವುದು ತಪ್ಪಿಸಬೇಕು. ಭಾರತದ ಸಂವಿಧಾನ ಬದಲಾಯಿಸಲು ಯತ್ನಿಸುವಂತಹ ಅಪ್ರಜಾಪ್ರಭುತ್ವ ಶಕ್ತಿಗಳ ವಿರುದ್ಧ ಕಠಿಣ ಕಾನೂನುಬದ್ಧ ಕ್ರಮ ಜರುಗಿಸಲು ಹೊಸ ಕಾನೂನುಗಳ ಪ್ರಸ್ತಾಪ ಮಾಡಬೇಕುʼ ಎಂದು ಆಗ್ರಹಿಸಿದ್ದಾರೆ.