ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ಡಾ. ಬಿ ಆರ್ ಅಂಬೇಡ್ಕರ್ ಅವರ ಶ್ರೇಷ್ಠ ಸಂವಿಧಾನವೇ ಆಧಾರ ಎಂದು ವಿಜಯನಗರದ ಹರಪನಹಳ್ಳಿ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಹರಪನಹಳ್ಳಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, “ವಿಭಿನ್ನ ಜನ, ಭಾಷೆ, ಧರ್ಮ, ಸಂಸ್ಕೃತಿ ಹೊಂದಿರುವ ದೇಶ ಭಾರತ. ವಿವಿಧತೆಗಳಲ್ಲಿ ಏಕತೆ ಸಾರಲು ಸರ್ದಾರ ವಲ್ಲಭಾಯಿ ಪಟೇಲ್ ಅವರ ಶ್ರಮ, ಸಂವಿಧಾನಗಳು ಇಂದು ಎಲ್ಲರೂ ಒಂದೇ ಕಾನೂನಿಡಿಯಲ್ಲಿ ಸಾಗಲು ಕಾರಣವಾಗಿವೆ. ಅಂಬೇಡ್ಕರ್ ಅಧ್ಯಕ್ಷತೆ ಯಲ್ಲಿ ಭಾರತದ ಸಂಸ್ಕೃತಿಗೆ ತಕ್ಕಂತೆ ಸಂವಿಧಾನವನ್ನು ರಚಿಸಲು ವಿಶ್ವದ ಅನೇಕ ಸಂವಿಧಾನಗಳನ್ನು ಅಭ್ಯಾಸ ಮಾಡಿ ರಚಿಸಿರುವ ಪರಿಣಾಮ ಎಲ್ಲರೂ ನೆಮ್ಮದಿಯಿಂದ ತಮ್ಮ ಹಕ್ಕು ಹಾಗೂ ಕರ್ತವ್ಯಗಳನ್ನು ನಿಭಾಯಿಸಲು ಸುಲಭವಾಗಿದೆ” ಎಂದು ಸ್ಮರಿಸಿದರು.
ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, “ಆಂಗ್ಲರ ದಬ್ಬಾಳಿಕೆಯಿಂದ ನಲುಗಿದ್ದ ಭಾರತವನ್ನು ಸ್ವತಂತ್ರವಾಗಿಸಲು ಹಲವಾರು ಮಹಾತ್ಮರು ತ್ಯಾಗ, ಬಲಿದಾನ ಮಾಡಿದ್ದಾರೆ. ಸ್ವತಂತ್ರ ನಂತರ ಬಲಿಷ್ಠ ಭಾರತವನ್ನು ಕಟ್ಟಲು ಬಾಬಾ ಸಾಹೇಬರು ಕೊಡುಗೆಯಾಗಿ ನೀಡಿದ ಸಂವಿಧಾನ ಎಂಬ ಮಹಾಗ್ರಂಥ ಅಡಿಪಾಯವಾಗಿದೆ. ನಮ್ಮ ಅಕ್ಕ ಪಕ್ಕದ ಪ್ರಜಾಪ್ರಭುತ್ವ ದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದಲ್ಲದೇ ದೊಂಬಿ ಧಂಗೆಗಳಿಗೆ ಗುರಿಯಾಗಿವೆ. ಆದರೆ ಭಾರತ, ಯುವಕರಿಂದ ಸಮೃದ್ಧವಾದ ದೇಶವಾಗಿ ವಿಶ್ವದಲ್ಲೇ ಅಸಾಧಾರಣ ಸಾಧನೆಗಳನ್ನು ಮಾಡುತ್ತಿದೆ. ಎಲ್ಲಾ ರಂಗಳಲ್ಲಿ ಅಪ್ರತಿಮ ಅಭಿವೃದ್ಧಿ ಸಾಧಿಸಲು ನಮ್ಮ ಗಟ್ಟಿ ಸಂವಿಧಾನವೇ ಕಾರಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಮಳೆಯಿಲ್ಲದ ಬೆಳೆಯಿಲ್ಲ, ಹೆಣ್ಣು ಇಲ್ಲದ ಮನೆಯಿಲ್ಲ: ಡಾ. ನಾಗರಾಜ್
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಫಾತೀಮಾಬೀ, ಉಪಾಧ್ಯಕ್ಷ ಕೊಟ್ರೇಶ್, ಪುರಸಭೆ ಸದಸ್ಯ ಡಿ ರೆಹಮಾನ್‌ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಆಂಜಿನಪ್ಪ, ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ವೆಂಕಟೇಶ್ ಟಿ, ವಕೀಲ ಉದ್ದರ್ ಗಣೇಶ್, ಮಂಜುನಾಥ ಇಜಂತಕರ್, ಲಾಟಿ ದಾದಾಪೀರ, ಜಾಕೀರ್ ಸರಖಾವಸ್, ತಹಶೀಲ್ದಾರ ಬಿ ವಿ ಗಿರೀಶ್ ಬಾಬು, ಇಓ ಚಂದ್ರಶೇಖರ, ಬಿಇಓ ಹೆಚ್ ಲೇಪಾಕ್ಷಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಪ್ಪ ಆರೋಗ್ಯಾಧಿಕಾರಿ ಪೃಥ್ವಿ, ಡಿವೈಎಸ್‌ಪಿ ವೆಂಕಟಪ್ಪನಾಯಕ, ಸಿಪಿಐ ನಾಗರಾಜ್ ಕಮ್ಮಾರ್ ಎಇಇ ಪ್ರಕಾಶ ಪಾಟೀಲ್ ಹಾಗೂ ಇತರರು ಭಾಗವಹಿಸಿದ್ದರು.

