ಫೈನಾನ್ಸ್ ಕಂಪನಿ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೆ ಕಾಣೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಟಲತಾ ಎಂ.ಟಿ ಅವರ ಮೃತದೇಹ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದುರ್ಗಿಗುಡಿ ಪ್ರದೇಶದ ನಿವಾಸಿಯಾಗಿದ್ದ ಪುಷ್ಟಲತಾ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ತುಮ್ಮಿನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅವರು ಭಾನುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಅವರು ರಾಘವೇಂದ್ರ ಮಠದ ಬಳಿ ತುಂಗಭದ್ರಾ ನದಿಗೆ ಇಳಿದಿರುವುದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಪುಷ್ಟಲತಾ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆಯ ಮೇಲೆ ಸೋಮವಾರ ಬೆಳಗ್ಗೆಯಿಂದಲೇ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದರು.
ಇದೀಗ, ಮಂಗಳವಾರ ಬೆಳಗ್ಗೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.
ಮನೆ ಕಟ್ಟಿಸುವುದಕ್ಕಾಗಿ ಫೈನಾನ್ಸ್ ಕಂಪನಿಯಿಂದ ಪುಷ್ಪಲತಾ 40 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಗಾಗಿ ಫೈನಾನ್ಸ್ ಕಂಪನಿಯ ಅಧಿಕಾರಿಗಳು ಮನೆ ಮತ್ತು ಶಾಲೆಯ ಬಳಿ ಬಂದು ಜಗಳ ಮಾಡುತ್ತಿದ್ದರು. ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡುತ್ತಿದ್ದರು. ಆದ್ದರಿಂದಲೇ ಪುಷ್ಟಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಫೈನಾನ್ಸ್ ಕಂಪನಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪುಷ್ಪಲತಾ ದೂರು ದಾಖಲಿಸಿದ್ದರು. ಅವರ ವಿರುದ್ಧ ಫೈನಾನ್ಸ್ ಕಂಪನಿಯೂ ಪ್ರತಿ ದೂರು ದಾಖಲಿಸಿತ್ತು. ಇಬ್ಬರನ್ನು ಠಾಣೆಗೆ ಕರೆಸಿ, ಮಾತುಕತೆ ನಡೆಸಿದ ಬಳಿಕ, ಇಬ್ಬರೂ ದೂರನ್ನು ವಾಪಸ್ ಪಡೆದುಕೊಂಡಿದ್ದರು. ಅಲ್ಲದೆ, ಸಾಲದಿಂದ ಮುಕ್ತರಾಗಲು ಪುಷ್ಟಲತಾ ತಮ್ಮ ಮನೆಯನ್ನೂ ಮಾರಾಟಕ್ಕಿಟ್ಟಿದ್ದರು ಎಂದು ವರದಿಯಾಗಿದೆ.