ನಮ್ಮ ಊರು, ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಪ್ರದೀಪ್ ಈಶ್ವರ್ ಮುನ್ನುಡಿ | ಶಾಸಕರ ಬಳಿ ಸಮಸ್ಯೆಗಳನ್ನು ಒತ್ತು ತರುತ್ತಿರುವ ಜನ | ಕೂಡಲೇ ಪರಿಶೀಲನೆ, ಸ್ಥಳದಲ್ಲೇ ಪರಿಹಾರ
“ಅಮ್ಮಾ ಗೃಹಲಕ್ಷ್ಮೀ ಹಣ ಬರ್ತಿದ್ಯಾ… ನಿಮ್ಮ ಸಮಸ್ಯೆ ಏನು ತಾಯಿ?” ಈ ರೀತಿಯಾಗಿ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೆ ತೆರಳಿ ಟಾರ್ಪಲ್ ಮತ್ತು ಚಾಪೆಗಳ ಮೇಲೆ ಜನರ ಮಧ್ಯೆ ಕುಳಿತುಕೊಂಡು ಚಿಕ್ಕಬಳ್ಳಾಪುರ ನಗರ ಶಾಸಕ ಪ್ರದೀಪ್ ಈಶ್ವರ್ ಜನರ ಸಮಸ್ಯೆಗಳನ್ನು ಆಲಿಸಿದ ಪರಿ ಇದು.
ಹೌದು, ಶಾಸಕ ಪ್ರದೀಪ್ ಈಶ್ವರ್ ʼನಮ್ಮ ಊರು ನಮ್ಮ ಶಾಸಕರುʼ ವಿನೂತನ ಕಾರ್ಯಕ್ರಮದ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಹಳ್ಳಿಗೂ ತೆರಳಿ ಜನರ ಸಮಸ್ಯೆಗಳನ್ನು ಕೇಳುವ ನೂತನ ಪ್ರಯತ್ನಕ್ಕೆ ಮುಂದಡಿ ಇಟ್ಟಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಿರುವ ಪ್ರದೀಪ್ ಈಶ್ವರ್, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ, ಬೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಜನರ ಮನೆ ಬಾಗಿಲಿಗೆ ಕರೆದೊಯ್ಯುತ್ತಿದ್ದಾರೆ.
ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಾರಕ್ಕೊಮ್ಮೆ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಜನರ ಸಮಸ್ಯೆಗಳನ್ನು ಖುದ್ದಾಗಿ ಶಾಸಕರೇ ಕುಳಿತು ಮಾತನಾಡಿ ಸೂಕ್ತ ರೀತಿಯಲ್ಲಿ ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ. ರಸ್ತೆ, ಚರಂಡಿ, ಶೌಚಾಲಯ, ವಿದ್ಯುತ್ ಸಮಸ್ಯೆ, ಸಾರಿಗೆ ಸಮಸ್ಯೆ, ಭೂ ವ್ಯಾಜ್ಯ ಇತ್ಯಾದಿ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ಕೊಡುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 113ನೇ ಹಳ್ಳಿಯಾದ ತಾಲೂಕಿನ ಚಿಕ್ಕನಾರಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಯತಾಸ್ಥಿತಿ ಟಾರ್ಪಲ್ ಮತ್ತು ಚಾಪೆಗಳ ಮೇಲೆ ಜನರೊಂದಿಗೆ ಕುಳಿತು ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಮೊದಲಿಗೆ ಸಮಸ್ಯೆಯೊಂದನ್ನು ಒತ್ತು ತಂದ ಕಾಲು ಕಳೆದುಕೊಂಡ ವ್ಯಕ್ತಿ, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದೇನೆ, ಮನೆಯ ನಿರ್ವಹಣೆ ಕಷ್ಟವಾಗಿದೆ, ಹೆಂಡತಿ, ಮಗುವೊಂದಿದೆ. ಯಾವುದೇ ಪರಿಹಾರ ಬಂದಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಾಸಕರು, ತಾಲೂಕು ಆರೋಗ್ಯ ಅಧಿಕಾರಿಗೆ ಕೃತಕ ಕಾಲು ಜೋಡಣೆ ಹಾಗೂ ಇತರೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಖಾಸಗಿಯವರ ಜಾಗದಲ್ಲಿ 22 ಮನೆಗಳನ್ನು ಕಟ್ಟಿಕೊಂಡಿದ್ದ ಸಮಸ್ಯೆಗೆ ಸ್ಪಂದಿಸಿದ ಶಾಸಕರು, ಜಮೀನು ಮಾಲೀಕರಿಗೆ ಸ್ವಂತ ಹಣದಲ್ಲಿ 2 ಲಕ್ಷ ರೂ. ಕೊಡುವುದಾಗಿ ತಿಳಿಸಿದರು.

ಬಳಿಕ ಜನರೊಂದಿಗೆ ನಿಂತುಕೊಂಡು ಸಮಸ್ಯೆಗಳನ್ನು ಚರ್ಚಿಸುತ್ತಲೇ ಫಲಾವ್ ಮತ್ತು ಮೊಸರು ಬಜ್ಜಿಯನ್ನು ಸವಿದರು.
ಬಳಿಕ ವಿದ್ಯಾರ್ಥಿನಿಯೊಬ್ಬಳು ನಮ್ಮೂರಿಗೆ ಬಸ್ಸು ಇಲ್ಲ. ಎರಡು ಮೂರು ಕಿಲೋ ಮೀಟರ್ ದೂರ ನಡೆದೇ ಶಾಲೆ, ಕಾಲೇಜಿಗೆ ತೆರಳಬೇಕು. ನಮಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿದಳು. ಇದಕ್ಕೆ ಸ್ಪಂದಿಸಿದ ಶಾಸಕರು ಎರಡು ಅಥವಾ ಮೂರು ದಿನಗಳಲ್ಲಿ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಊರಿನ ಮಧ್ಯೆ ರಸ್ತೆ ನಿರ್ಮಾಣಕ್ಕೆ ಹಳೆಯ ಮನೆಯೊಂದು ಅಡ್ಡವಾಗಿದೆ. ಅದನ್ನ ತೆರವುಗೊಳಿಸಿದರೆ ಸೂಕ್ತ ರಸ್ತೆ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅಡ್ಡವಾಗಿರುವ ಮನೆಯ ಯಜಮಾನನನ್ನು ಕರೆದ ಶಾಸಕರು ಅಲ್ಲಿಯೇ ಪಂಚಾಯಿತಿ ನಡೆಸಿದರು. ಮನೆಯ ಯಜಮಾನನಿಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಟ್ಟ ಶಾಸಕರು ಶೀಘ್ರವೇ ರಸ್ತೆ ನಿರ್ಮಿಸಬೇಕು, ಜನರಿಗೆ ತೊಂದರೆಯಾಗದಂತೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗೆ ತಿಳಿಸಿದರು.

9.30ರ ಸುಮಾರಿಗೆ ಮೊದಲೇ ನಿಗದಿಯಾಗಿದ್ದ ಕೊಮ್ಮಲಮರಿ ಗ್ರಾಮಕ್ಕೆ ತೆರಳಿದ ಶಾಸಕರು, ಅಲ್ಲಿನ ಜನರೊಂದಿಗೆ ಕುಳಿತು ಸಮಸ್ಯೆಗಳನ್ನು ಚರ್ಚೆ ಮಾಡಿದರು. ಕೊಮ್ಮಲಿಮರಿ ಗ್ರಾಮದ ಮಹಿಳೆಯೊಬ್ಬರು ನಮ್ಮೂರಲ್ಲಿ ಸ್ಮಶಾನ ಇಲ್ಲ, ಓಡಾಡಲು ಸರಿಯಾದ ರಸ್ತೆ ಇಲ್ಲ, ಬಸ್ ವ್ಯವಸ್ಥೆಯೂ ಇಲ್ಲ, ಸರಕಾರಿ ಶಾಲೆ ಇಲ್ಲ ಎಂದು ಸಮಸ್ಯೆಗಳ ಸುರಿಮಳೆಗೈದರು. ವ್ಯಕ್ತಿಯೊಬ್ಬರು ಹೊಲಕ್ಕೆ ಹೋಗಲು ಕಾಲುದಾರಿ ಬಿಡುತ್ತಿಲ್ಲ ಎಂಬ ಸಮಸ್ಯೆ ಚರ್ಚೆಗೆ ಬಂತು. ಇದಕ್ಕೆ ಸ್ಪಂದಿಸಿದ ಶಾಸಕರು ನಕಾಶೆಯಲ್ಲಿರುವಂತೆ ಕಾಲುದಾರಿಗೆ ರಸ್ತೆ ಬಿಡಲೇಬೇಕು. ಜನರಿಗೆ ತೊಂದರೆ ಕೊಡಬೇಡಿ, 3 ಅಡಿ ಜಾಗ ಕಾಲುದಾರಿಗೆ ಬಿಟ್ಟುಕೊಡಿ ಎಂದು ಮನವಿ ಮಾಡಿದರು. ವ್ಯಕ್ತಿ ಇದಕ್ಕೆ ಒಪ್ಪಿಗೆ ಸೂಚಿಸಿದರು. ನಿವೇಶನ ಇಲ್ಲದವರ ಪಟ್ಟಿ ಮಾಡಿ, 4 ಎಕರೆ ಜಾಗದಲ್ಲಿ ನಿವೇಶನ ಕೊಡುವಂತೆ ಪಿಡಿಒಗೆ ಶಾಸಕರು ಸೂಚಿಸಿದರು.
ವಿದ್ಯುತ್ ಸಮಸ್ಯೆಯಿದೆ ಎಂದು ಕೆಲ ಮಹಿಳೆಯರು ಅಲವತ್ತುಕೊಂಡರು, ಬೆಸ್ಕಾಂ ಅಧಿಕಾರಿಯೊಂದಿಗೆ ಚರ್ಚಿಸಿದ ಶಾಸಕರು, ಸಾಧ್ಯಸಾಧ್ಯತೆಗಳನ್ನು ಜನರಿಗೆ ತಿಳಿಸಿ, ಕೂಡಲೇ ಬಗೆಹರಿಸುವಂತೆ ಸೂಚಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ದಲಿತರನ್ನು ಎದುರು ಹಾಕಿಕೊಂಡರೆ ಸರಕಾರಗಳಿಗೆ ಉಳಿಗಾಲವಿಲ್ಲ : ಆರ್ ಆಂಜನೇಯ ರೆಡ್ಡಿ ಎಚ್ಚರಿಕೆ
ಸ್ಮಶಾನ ಜಾಗ ನಮಗೆ ಗೊತ್ತೇ ಇಲ್ಲ :
ಸ್ಮಶಾನ ಜಾಗ ಎಲ್ಲಿದೆ ಎಂಬುದೇ ನಮಗೆ ಗೊತ್ತಿಲ್ಲ. ನಮ್ಮ ಹೊಲಗಳಲ್ಲೇ ಶವಸಂಸ್ಕಾರ ಮಾಡಿಕೊಳ್ಳುತ್ತಿದ್ದೇವೆ ಎಂದು ಕೊಮ್ಮಲಮರಿ ಗ್ರಾಮಸ್ಥರು ತಿಳಿಸಿದರು. ಶಾಸಕರ ಪಕ್ಕದಲ್ಲೇ ಕುಳಿತಿದ್ದ ಕಂದಾಯ ಅಧಿಕಾರಿ, ಎರಡು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಎರಡು ಎಕರೆ ಸ್ಮಶಾನ ಜಾಗ ಗುರುತಿಸುವುದಾಗಿ ಉತ್ತರಿಸಿದರು.
ಬಳಿಕ ಮೂರನೇ ಗ್ರಾಮವಾದ ದಿನ್ನಹಳ್ಳಿಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರು. ಈ ಮೂಲಕ ಶಾಸಕರ ವಿನೂತನ ಮಾದರಿಯ ನಮ್ಮ ಊರು, ನಮ್ಮ ಶಾಸಕರು ಕಾರ್ಯಕ್ರಮ ಅಂತ್ಯಗೊಂಡಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಿಲ್, ಟಿಎಚ್‌ಒ ಮಂಜುಳಾ, ತಾಪಂ ಇಒ ಮಂಜುನಾಥ್, ಸಮಾಜ ಕಲ್ಯಾಣ ಅಧಿಕಾರಿ ಶೇಷಾದ್ರಿ, ಕಂದಾಯ ಅಧಿಕಾರಿ, ಕಮ್ಮಗುಟ್ಟಹಳ್ಳಿ ಗ್ರಾಪಂ ಪಿಡಿಒ ಮದ್ದರೆಡ್ಡಿ, ಬೆಸ್ಕಾಂ ಎಇ, ಆಶಾ ಕಾರ್ಯಕರ್ತೆಯರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.