ಮಧ್ಯಮವರ್ಗವನ್ನು ಬಳಸಿಕೊಂಡು ಬೆಳೆದ ಬಿಜೆಪಿ ಮತ್ತು ಮೋದಿ, ಮಧ್ಯಮವರ್ಗಕ್ಕೆ ಮೊದಲ ಆದ್ಯತೆ ಎಂದು ಹೇಳುತ್ತಲೇ ಮಧ್ಯಮವರ್ಗವನ್ನು ಮೇಲೇಳದಂತೆ ಮಾಡಿದ್ದಾರೆ. ಮಾಧ್ಯಮಗಳನ್ನು ಖರೀದಿಸಿ ಅವುಗಳ ಮೌಲ್ಯ ಮತ್ತು ನೈತಿಕತೆಯನ್ನು ಕಳೆದಿದ್ದಾರೆ. ಮೋದಿಯ ಈ ವಿಕಾರಕ್ಕೆ ಅವರನ್ನು ಬೆಂಬಲಿಸಿದ ಮಧ್ಯಮವರ್ಗವೇ ಮದ್ದರೆಯಬೇಕಿದೆ.
ಕಳೆದ ಜೂನ್‌ನಲ್ಲಿ, ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನರೇಂದ್ರ ಮೋದಿಯವರು, ಮಧ್ಯಮ ವರ್ಗ ಮತ್ತು ಮನೆಯ ಉಳಿತಾಯದತ್ತ ನಮ್ಮ ಸರ್ಕಾರದ ಗಮನ ಎಂದರು. ಮಧ್ಯಮ ವರ್ಗವನ್ನು ಬೆಳವಣಿಗೆಯ ಪ್ರೇರಕಶಕ್ತಿ ಎಂದು ಬಣ್ಣಿಸಿದರು. ಮಹಿಳೆಯರು ಮತ್ತು ಬಡವರು; ಶಿಕ್ಷಣ ಮತ್ತು ಕೌಶಲ್ಯಕ್ಕೆ ಎನ್‌ಡಿಎ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದರು.
ಭಾರೀ ಭರವಸೆಗಳೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ, ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ ದೇಶದ ಮಧ್ಯಮವರ್ಗ; ನಮ್ಮ ದೇಶದ ಬಹುದೊಡ್ಡ ವರ್ಗ. ಧರ್ಮ ಮತ್ತು ಜಾತಿಗಳಿಂದ ಹೊರತಾದ ವರ್ಗ. ದೇಶದ ದುಡಿಯುವ ವರ್ಗ, ಅತಿ ಹೆಚ್ಚು ತೆರಿಗೆ ಪಾವತಿಸುವ ವರ್ಗ, ಅರ್ಥವ್ಯವಸ್ಥೆಗೆ ಭಾರೀ ಕೊಡುಗೆ ನೀಡುವ ವರ್ಗ.
ಇಂತಹ ಮಧ್ಯಮವರ್ಗದ ಬಲದಿಂದ-ಬೆಂಬಲದಿಂದ ಗೆದ್ದ ಮೋದಿಯವರು ಮಧ್ಯಮವರ್ಗಕ್ಕಾಗಿ ಮಾಡಿದ್ದೇನು?
ಮೋದಿಯವರು ಮೊದಲ ಆದ್ಯತೆ ಎಂದು ಹೇಳಿ ಮೂರನೇ ಬಾರಿಗೆ ಪ್ರಧಾನಿಯಾಗಿ ಏಳು ತಿಂಗಳು ಕಳೆಯಿತು. ಮತ್ತೊಂದು ಬಜೆಟ್ ಕುರಿತ ಚರ್ಚೆ ಮುನ್ನೆಲೆಗೆ ಬಂದಿತು. ಮಧ್ಯಮವರ್ಗವನ್ನು ಬೆಳವಣಿಗೆಯ ಪ್ರೇರಕಶಕ್ತಿ ಎಂದ ಮೋದಿಯವರು, ಮಧ್ಯಮವರ್ಗವೇ ಬಿಜೆಪಿ ಬೆಳವಣಿಗೆಯ ಪ್ರೇರಕಶಕ್ತಿ ಎಂಬ ಸತ್ಯವನ್ನು ಕಂಡುಕೊಂಡರು. ಬಿಜೆಪಿಯನ್ನು ಭದ್ರವಾಗಿ ಬೇರೂರಿಸಿದರು. ಮೂರನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರಿ ಪಟ್ಟಾಗಿ ಕೂತರು.
ಆದರೆ, ಮೋದಿ ಮತ್ತು ಬಿಜೆಪಿ ಬೆಳವಣಿಗೆಗೆ ಪ್ರೇರಕಶಕ್ತಿಯಾದ ಮಧ್ಯಮವರ್ಗವನ್ನು ಬಳಸಿಕೊಂಡು ಬಿಸಾಡಿದರು. ಮಧ್ಯಮವರ್ಗವನ್ನು ಮೇಲೆತ್ತುವ ನೆಪದಲ್ಲಿ ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಅಂಕಿ-ಸಂಖ್ಯೆಗಳಲ್ಲಿ ತೋರಿಸಿದರು. ಭಾಷಣಗಳಲ್ಲಿ ಬಣ್ಣಿಸಿದರು. ಆದರೆ, ಇವತ್ತಿಗೂ ಸರ್ಕಾರಿ ಶಾಲೆಗಳ, ಆಸ್ಪತ್ರೆಗಳ ಗುಣಮಟ್ಟ ಮೇಲ್ದರ್ಜೆಗೇರಿಲ್ಲ. ಎಷ್ಟೋ ಹಳ್ಳಿಗಳಿಗೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ರಸ್ತೆಗಳಿವೆ ಟೋಲ್ ಕಟ್ಟಲಾಗುತ್ತಿಲ್ಲ. ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ತಲೆಯ ಹಾಕುವ ಎಣ್ಣೆ-ಶಾಂಪುವರೆಗೆ- ಅಡಿಯಿಂದ ಮುಡಿಯವರೆಗೆ ತೆರಿಗೆ ಕಟ್ಟಿದರೂ ಸರ್ಕಾರಕ್ಕೆ ಸಮಾಧಾನವಾಗುತ್ತಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಎಸ್‌ಸಿಎಸ್‌ಪಿ / ಟಿಎಸ್‌ಪಿ ಅನುದಾನ ಬಳಕೆಯಾಗುತ್ತಿಲ್ಲವೇಕೆ?
ಇದಕ್ಕೆ ವ್ಯತಿರಿಕ್ತವಾಗಿ, ಪಕ್ಷದ ಆರ್ಥಿಕಶಕ್ತಿ ವೃದ್ಧಿಸಿಕೊಳ್ಳುವತ್ತ ಗಮನ ಹರಿಸಿ, ಕಾರ್ಪೊರೇಟ್ ಕುಳಗಳತ್ತ ಒಲವು ತೋರಿದರು. ಅವರಿಂದ ಚುನಾವಣಾ ಬಾಂಡ್ ನೆಪದಲ್ಲಿ ಕೋಟ್ಯಂತರ ರೂಪಾಯಿಗಳ ದೇಣಿಗೆ ಪಡೆದರು. ಅವರಿಗೆ ಅನುಕೂಲವಾಗುವ ಕಾಯ್ದೆ ಕಾನೂನುಗಳನ್ನು ರೂಪಿಸಿದರು. ಸರ್ಕಾರಿ ಸ್ವತ್ತುಗಳನ್ನು ಅವರ ಸುಪರ್ದಿಗೊಪ್ಪಿಸಿದರು. ಸಾಲ ಕಟ್ಟಲಾಗದೆ ಸ್ಥಗಿತಗೊಂಡ ಉದ್ದಿಮೆಗಳ ಸುಮಾರು 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ‘ಉದ್ದಿಮೆಗಳ ಉತ್ತೇಜನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದು ಸುಳ್ಳು ಹೇಳಿದರು. ಇದು ನೇರವಾಗಿ ಶ್ರೀಮಂತರಿಗೆ ನೆರವಾಗುವ, ಪಕ್ಷಕ್ಕೆ ದೇಣಿಗೆ ಪಡೆಯುವ ಉದ್ದೇಶವಾಗಿತ್ತೇ ಹೊರತು, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವ ಇರಾದೆ ಇರಲಿಲ್ಲ. ಅದು ಸಾಧ್ಯವಾಗಲೂ ಇಲ್ಲ. ಇದು ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಅಸಮಾನತೆಯ ಅಂತರವನ್ನು ಹೆಚ್ಚು ಮಾಡಿತು.
ಏತನ್ಮಧ್ಯೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಿತು. ಅದು ನೇರವಾಗಿ ಆಮದು-ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರಿತು. ಮೇಕ್ ಇನ್ ಇಂಡಿಯಾ ಬರಿ ಮಾತಿನ ಬೊಗಳೆಯಾಯಿತು. ರೂಪಾಯಿ ಮೌಲ್ಯ ಕುಸಿತದಿಂದಾಗಿ ಕಚ್ಚಾ ತೈಲ(ಪೆಟ್ರೋಲ್-ಡೀಸೆಲ್)ದಂತಹ ಅತ್ಯಂತ ಅವಶ್ಯಕವಾದ ಸರಕುಗಳ ಆಮದು ವೆಚ್ಚ ಹೆಚ್ಚಾಯಿತು. ಆಮದು ಶುಲ್ಕ ಅತಿಯಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು. ದೇಶೀಯವಾಗಿ ಹಣದುಬ್ಬರ ಹೆಚ್ಚಳವಾಗಿ, ನಿಯಂತ್ರಿಸಲು ಬಡ್ಡಿದರ ಏರಿಕೆಗೆ ಕಾರಣವಾಯಿತು. ಸಾಲದಲ್ಲಿಯೇ ಹುಟ್ಟಿ, ಸಾಲದಲ್ಲಿಯೇ ಸಾಯುವ ಮಧ್ಯಮವರ್ಗ, ಸಾಲದ ಕಂತು ಕಟ್ಟಲಾಗದೆ, ಅವಮಾನ-ಹಸಿವುಗಳನ್ನು ಸಹಿಸಿಕೊಂಡೇ ಸಂಸಾರ ನೂಕುತ್ತಿದೆ. ಬದುಕಿದ್ದೂ ಸತ್ತಂತಿದೆ.
ಮೋದಿಯವರು ದೇಶವನ್ನು ಮುನ್ನಡೆಸಲು ಶುರುವಾಗಿ 10 ವರ್ಷಗಳು ಉರುಳಿಹೋದವು. ಆದರೆ ದುಡಿಯುವ ಕೈಗಳಿಗೆ ಕೆಲಸ ಕೊಡಲಿಲ್ಲ. ಬದುಕಲು ಬೇಕಾದ ಅಗತ್ಯ ವಸ್ತುಗಳ ಬೆಲೆಏರಿಕೆಯನ್ನು ನಿಯಂತ್ರಿಸಲಾಗಲಿಲ್ಲ. ಒಂದು ಸರ್ವೇ ಪ್ರಕಾರ, ಒಂದು ಲೀಟರ್ ಅಡುಗೆ ಎಣ್ಣೆ ಖರೀದಿಸುತ್ತಿದ್ದ ಮಧ್ಯಮವರ್ಗ, ಇತ್ತೀಚಿನ ದಿನಗಳಲ್ಲಿ 100-200 ಗ್ರಾಂ ಸ್ಯಾಚೆ ಖರೀದಿಸುತ್ತಿದೆ. ಮಾರುಕಟ್ಟೆಗಳಲ್ಲಿ ಐದು ಮತ್ತು ಹತ್ತು ರೂ.ಗಳ ಸಣ್ಣ ಸರಕುಗಳ ಪ್ಯಾಕೆಟ್ ಹೆಚ್ಚಾಗಿವೆ. ಗಾತ್ರ ಕಿರಿದಾಗಿದೆ. ತೂಕ ಕಡಿಮೆಯಾಗಿದೆ. ಅಂದರೆ ಜನರ ಬಳಿ ಹಣವಿಲ್ಲ, ಕೊಳ್ಳುವ ಶಕ್ತಿ ಇಲ್ಲ. ಬಳಕೆ ಮತ್ತು ಬೇಡಿಕೆ ಕಡಿಮೆಯಾಗಿದೆ. ಉತ್ಪಾದನೆ ಕುಸಿದಿದೆ. ಅದು ಸಹಜವಾಗಿಯೇ ದೇಶದ ಆರ್ಥಿಕತೆಯ ಮೇಲೆ ಹೊಡೆತ ಬಿದ್ದಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್‌ಗೆ ಬಲಿಯಾಗುತ್ತಿರುವ ಬಡವರು; ಸತ್ತಂತಿರುವ ಸರ್ಕಾರ
ಇವುಗಳ ನಡುವೆಯೇ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಏಳು ಸಾವಿರ ಕೋಟಿ ಖರ್ಚು ಮಾಡಿ, ದೇಶದ ಜನರನ್ನು ಕುಂಭಮೇಳದ ಕುರಿಗಳನ್ನಾಗಿಸಿದ್ದಾರೆ. ಧರ್ಮದ ಅಮಲಿನಲ್ಲಿ, ಪಾಪ ಪರಿಹಾರದ ನೆಪದಲ್ಲಿ ತ್ರಿವೇಣಿ ಸಂಗಮದಲ್ಲಿ ಮುಳುಗಿಸುತ್ತಿದ್ದಾರೆ. ದೇಶದ ಸುದ್ದಿ ಮಾಧ್ಯಮಗಳು ಕೂಡ ಮೋದಿಯ ವೈಫಲ್ಯಗಳನ್ನು ಮರೆಮಾಚಿ, ಸುಳ್ಳಿನ ಸೌಧ ಸೃಷ್ಟಿಸುತ್ತಿವೆ. ಮೋದಿಯನ್ನು ಮೆರೆಸುತ್ತಿವೆ.
ದುರದೃಷ್ಟಕರ ಸಂಗತಿ ಎಂದರೆ, ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗದಿಂದ ತತ್ತರಿಸುತ್ತಿರುವ ಮಧ್ಯಮವರ್ಗ, ಈಗಲೂ ಮೋದಿ ಮತ್ತು ಬಿಜೆಪಿ ಪರ ಬಹುಪರಾಕ್ ಹಾಕುತ್ತಿದೆ. ‘ನಮಗೆ ನಮ್ಮ ದೇಶದ ಆರ್ಥಿಕತೆಗಿಂತ ಸಂಸ್ಕೃತಿ ಮತ್ತು ಹಿಂದುತ್ವವೇ ಮುಖ್ಯ. ನಾವು ಇನ್ನುಮುಂದಕ್ಕೂ ಬಿಜೆಪಿ ಮತ್ತು ಮೋದಿಗೇ ಮತ ನೀಡುವುದು’ ಎಂದು ಹೇಳುತ್ತಿದೆ.
ಮಧ್ಯಮವರ್ಗವನ್ನು ಬಳಸಿಕೊಂಡು ಬೆಳೆದ ಬಿಜೆಪಿ ಮತ್ತು ಮೋದಿ, ಮಹಿಳೆಯರು ಮತ್ತು ಬಡವರು; ಶಿಕ್ಷಣ ಮತ್ತು ಕೌಶಲ್ಯಕ್ಕೆ ನಮ್ಮ ಮೊದಲ ಆದ್ಯತೆ ಎಂದು ಹೇಳುತ್ತಲೇ ಮಧ್ಯಮವರ್ಗ ಮೇಲೇಳದಂತೆ ಮಟ್ಟ ಹಾಕಿದ್ದಾರೆ. ಮಾಧ್ಯಮಗಳನ್ನು ಖರೀದಿಸಿ ಅವುಗಳ ಮೌಲ್ಯ ಮತ್ತು ನೈತಿಕತೆಯನ್ನು ಕಳೆದಿದ್ದಾರೆ.
ಮೋದಿಯ ಈ ವಿಕಾರಕ್ಕೆ ಅವರನ್ನು ಬೆಂಬಲಿಸಿದ ಮಧ್ಯಮವರ್ಗವೇ ಮದ್ದರೆಯಬೇಕಿದೆ.
