ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ರೈಲಿನ ಮೇಲೆ ಯಾತ್ರಾರ್ಥಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ರಾತ್ರಿ ಘಟನೆ ನಡೆದಿದೆ ಛತ್ರರ್‌ಪುರ ಜಿಲ್ಲೆಯಲ್ಲಿರುವ ಛತ್ತರ್‌ಪುರ ಮತ್ತು ಹರ್ಪಾಲ್‌ಪುರ ರೈಲು ನಿಲ್ದಾಣಗಳಲ್ಲಿ ಪ್ರಯಾಗ್‌ರಾಜ್ ನಗರಕ್ಕೆ ತೆರಳುತ್ತಿದ್ದ ರೈಲು ಹತ್ತಲು ಕೆಲವರು ಯತ್ನಿಸಿದ್ದಾರೆ. ಆದರೆ, ರೈಲು ತುಂಬಿದ್ದರಿಂದ, ರೈಲಿನಲ್ಲಿದ್ದವರು ಬಾಗಿಲು ತೆರೆದಿಲ್ಲ. ಪರಿಣಾಮ, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ, ಮೌನಿ ಅಮವಾಸ್ಯೆ ಇರುವ ಕಾರಣ ಹೆಚ್ಚಿನ ಜನರು ಕುಂಭಮೇಳದಲ್ಲಿ ಭಾಗಿಯಾಗಲು ತೆರಳುತ್ತಿದ್ದಾರೆ. ಹೀಗಾಗಿ, ರೈಲುಗಳು ಜನರಿಂದ ತುಂಬಿ ಹೋಗುತ್ತಿವೆ. ಇಂತಹ ಘಟನೆಗಳನ್ನು ತಪ್ಪಿಸಲು ಕಠಿಣ ಭದ್ರತಾ ವ್ಯವಸ್ಥೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಪ್ರಯಾಗ್‌ರಾಜ್‌ಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲವರು ಕಲ್ಲು ತೂರಾಟ ನಡೆಸಿ ರೈಲಿನ ಬಾಗಿಲುಗಳಿಗೆ ಹೊಡೆಯುತ್ತಿರುವುದು, ಬಲವಂತವಾಗಿ ಬಾಗಿಲೆ ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
Vandalism and stone pelting in Maha Kumbh Special train going from Jhansi to Prayagraj. Live video surfaced. The reason for this is not known yet. pic.twitter.com/MizAwOaxJw
— amrish morajkar (@mogambokhushua) January 28, 2025
“ಮಹಾ ಕುಂಭದ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಹೊರಟಿದ್ದೆ. ಆದರೆ, ಪ್ರಯಾಗ್‌ರಾಜ್‌ಗೆ ಹೋಗುವ ರೈಲಿನ ಎಲ್ಲ ಬಾಗಿಲುಗಳು ಮತ್ತು ಕಿಟಕಿಗಳು ಮುಚ್ಚಿದ್ದರಿಂದ ರೈಲು ಹತ್ತಲು ಸಾಧ್ಯವಾಗಲಿಲ್ಲ. ಗದ್ದಲವಾದ ಬಳಿಕ ರೈಲ್ವೇ ಸಿಬ್ಬಂದಿಗಳು ರೈಲಿನ ಬಾಗಿಲುಗಳನ್ನು ತೆರೆದರು. ಆದರೂ, ರೈಲಿನಲ್ಲಿ ಜನರು ತುಂಬಿದ್ದರಿಂದ ಹಲವಾರು ಮಂದಿ ಹತ್ತಲು ಸಾಧ್ಯವಾಗಲಿಲ್ಲ” ಎಂದು ಛತ್ತರ್‌ಪುರದ ಪ್ರಯಾಣಿಕ ಆರ್‌ಕೆ ಸಿಂಗ್ ಹೇಳಿದ್ದಾರೆ.
ಛತ್ತರ್‌ಪುರ ಮತ್ತು ಹರ್ಪಾಲ್‌ಪುರ ರೈಲು ನಿಲ್ದಾಣಗಳಲ್ಲಿ ರೈಲು ಹತ್ತುವ ವಿಚಾರಕ್ಕಾಗಿ ಗದ್ದಲ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಕಠಿಣ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಝಾನ್ಸಿ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.