ಭದ್ರಾವತಿ ತಾಲೂಕು ಅರಳಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಗುಲ್ತಾಜ್ ಖಾನಂ ಎರಡು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಗ್ರಾಮದ ಸಾಮಾನ್ಯ ಆಟೋ ಚಾಲಕ ರಫೀಕ್ ಖಾನ್ ಹಾಗೂ ಜಹೀದಾ ಬಾನು ದಂಪತಿಯ ಮಗಳು ಗುಲ್ತಾಜ್ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರಿಂದ 2 ಚಿನ್ನದ ಪದಕ ಹಾಗೂ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಕುವೆಂಪು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗುಲ್ತಾಜ್ ಶಿಕ್ಷಣ (ಎಜುಕೇಶನ್) ವಿಭಾಗದಲ್ಲಿ ಪ್ರಥಮ ರಾಂಕ್ ಪಡೆದಿದ್ದಾರೆ.
ಗುಲ್ತಾಜ್ ಖಾನಂ ಈದಿನ ಡಾಟ್ ಕಾಂನೊಂದಿಗೆ ತಮ್ಮ ಸಂತೋಷ ಹಂಚಿಕೊಂಡರು. “ತಂದೆ ಆಟೋ ಚಾಲಕ ಹಾಗೂ ತಾಯಿ ಗೃಹಿಣಿ, ಇಬ್ಬರು ಸಹೋದರ ಹಾಗೂ ಒಬ್ಬರು ಸಹೋದರಿಯಿದ್ದಾರೆ. ಇವರೆಲ್ಲರ ಸಹಕಾರದಿಂದ ಎರಡು ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ಕುಟುಂಬದ ಸಹಕಾರ ಎಷ್ಟು ಮುಖ್ಯವೋ ವೈಯಕ್ತಿಕ ಪರಿಶ್ರಮ ಕೂಡ ಅಷ್ಟೇ ಮುಖ್ಯವಾಗುತ್ತದೆ. ಓದಿನಲ್ಲಿ ಗುರಿ, ಶ್ರದ್ಧೆ, ಕಠಿಣ ಪರಿಶ್ರಮ ಇರುವ ಪ್ರತಿಯೊಬ್ಬರೂ ಈ ಸಾಧನೆ ಮಾಡಬಹುದು. ನಾನು ಪ್ರಸ್ತುತ ಪಿ ಎಚ್ ಡಿ ವ್ಯಾಸಂಗ ಮಾಡುತ್ತಿದ್ದೇನೆ. ಮತ್ತಷ್ಟು ಸಾಧಿಸುವ ಗುರಿ ಇದೆ” ಎಂದರು.

“ಚಿನ್ನದ ಪದಕ ಪಡೆದಿರುವುದು ಕುಟುಂಬದಲ್ಲಿ, ಸ್ನೇಹಿತರ ಬಳಗದಲ್ಲಿ ಸಂತಸ ಉಂಟುಮಾಡಿದೆ. ನನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕುಲಪತಿ ಶರತ್ ಅನಂತ್ ಮೂರ್ತಿ, ಹಿರಿಯ ಉಪನ್ಯಾಸಕ ಡಾ. ಎಸ್ ಎಸ್ ಪಾಟೀಲ್, ಡಾ. ಗೀತಾ ಸಿ, ಡಾ. ಸತ್ತಾರ ಖಾನ್, ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಜೀವ್ ಗಾಂಧಿ ಮಹಾವಿದ್ಯಾಲಯದ ಪ್ರಾಚಾರ್ಯರು ಮತ್ತು ಅರಳಿಹಳ್ಳಿ ಗ್ರಾಮದ ಸರ್ಕಾರಿ ಶಾಲೆ ವತಿಯಿಂದ ಹೀಗೆ ಎಲ್ಲರೂ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಇವರೆಲ್ಲ ಪ್ರೋತ್ಸಾಹ ನನ್ನಲ್ಲಿ ಮತ್ತಷ್ಟು ಸ್ಪೂರ್ತಿ ತುಂಬಿದೆ” ಎಂದು ಸಂತೋಷ್ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಈದಿನ ಇಂಪ್ಯಾಕ್ಟ್; ಬಡ ಕುಟುಂಬದ ನೆರವಿಗೆ ಧಾವಿಸಿದ ಕರವೇ

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.