ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಉಪವಾಸವನ್ನು ಮುಂದುವರಿಸುವುದಾಗಿ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಪುನರುಚ್ಚರಿಸಿದ್ದಾರೆ. ದಲ್ಲೇವಾಲ್ ತಮ್ಮ ಆಮರಣಾಂತ ಉಪವಾಸದ 64ನೇ ದಿನದಂದು ಈ ಹೇಳಿಕೆಯನ್ನು ನೀಡಿದ್ದಾರೆ.
ರೈತರ ಪ್ರತಿಭಟನೆ 2.0 ಆರಂಭವಾಗಿ ಫೆಬ್ರವರಿ 12ರಂದು ಒಂದು ವರ್ಷ ಆಗುತ್ತದೆ. ಈ ದಿನದಂದು ದೇಶಾದ್ಯಂತ ರೈತರು ಖಾನೌರಿ ಗಡಿಗೆ (ಪಂಜಾಬ್ ಮತ್ತು ಹರಿಯಾಣ ಗಡಿ) ಬರಬೇಕು ಎಂದು ದಲ್ಲೇವಾಲ್ ಕರೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದಲ್ಲೇವಾಲ್ ಉಪವಾಸ – ದೆಹಲಿ ಚಲೋಗೆ ಮಂಡಿಯೂರಿದ ಪ್ರಧಾನಿ ಮೋದಿ; ರೈತರಿಗೆ ಪ್ರಸ್ತಾವನೆ ಸಲ್ಲಿಸಿದ ಕೇಂದ್ರ ಸರ್ಕಾರ
ಜನವರಿ 4ರಂದು ನಡೆದ ಕಿಸಾನ್ ಮಹಾಪಂಚಾಯತ್ ನಂತರ ಇಂದು ಮೊದಲ ಬಾರಿಗೆ ಖಾನೌರಿ ಗಡಿಯಲ್ಲಿ ಸಭೆಯನ್ನು ಉದ್ದೇಶಿಸಿ ದಲ್ಲೇವಾಲ್ ಮಾತನಾಡಿದರು. “ನಮ್ಮ ಪ್ರತಿಭಟನೆಯ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದರಿಂದ ಫೆಬ್ರವರಿ 12ರಂದು ದೇಶಾದ್ಯಂತದ ರೈತ ಸಮುದಾಯವು ಖಾನೌರಿ ಗಡಿಗೆ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದರು.
“ಈ ಬೃಹತ್ ಸಭೆಯು ನನಗೆ ಪುನರುಜ್ಜೀವನ ನೀಡುತ್ತದೆ. ಮಾತುಕತೆಗಾಗಿ ಕೇಂದ್ರ ಸರ್ಕಾರದ ನಿಯೋಗದೊಂದಿಗೆ ಸಭೆಯಲ್ಲಿ ಹಾಜರಾಗಲು ನನಗೆ ಶಕ್ತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು.
“ಫೆಬ್ರವರಿ 14ರಂದು ಸರ್ಕಾರ ಮಾತುಕತೆ ಒಪ್ಪಿಗೆ ನೀಡಿದ ನಂತರ ವೈದ್ಯಕೀಯ ನೆರವು ಪಡೆಯಲು ಮಾತ್ರ ಒಪ್ಪಿಕೊಂಡಿದ್ದೇನೆ. ಉಪವಾಸ ಮುಂದುವರೆಸಿದ್ದೇನೆ. ಪ್ರಸ್ತುತ ನನ್ನ ಆರೋಗ್ಯವು ಮಾತುಕತೆಗಾಗಿ ವೈಯಕ್ತಿಕವಾಗಿ ಭೇಟಿ ಮಾಡಲು ಅವಕಾಶ ನೀಡುವುದಿಲ್ಲ” ಎಂದು ದಲ್ಲೇವಾಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!
“ನಾನು ಸಾಕಷ್ಟು ಸದೃಢನಾಗಿದ್ದರೆ, ನಾನು ಚಂಡೀಗಢದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುತ್ತೇನೆ. ಇಲ್ಲದಿದ್ದರೆ, ನಾನು ವೀಡಿಯೊ-ಕಾನ್ಫರೆನ್ಸಿಂಗ್ ಮೂಲಕ ಸಮಿತಿಯ ಮುಂದೆ ಹಾಜರಾಗುತ್ತೇನೆ. ಮೋರ್ಚಾದ ಯಶಸ್ಸಿಗಾಗಿ ಮತ್ತು ರೈತರ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರೈತ ಸಂಘವು ಅಖಂಡ್ ಪಥ್ ನಡೆಸುತ್ತಿದೆ” ಎಂದು ಹೇಳಿದರು.
“ಒಂದು ವೇಳೆ ಜನರು ನಿರ್ಣಯ ಅಂಗೀಕರಿಸಿ ಬೆಂಬಲಿಸಿದರೆ, ನಮಗಿರುವ ಅಡಚಣೆ ಏನು? ನಾವು ಗೆಲುವಿನತ್ತ ಸಾಗುತ್ತಿದ್ದೇವೆ ಎಂದರ್ಥ. ಒಗ್ಗಟ್ಟಿನ ರಂಗ ರಚನೆಗೆ ಇಷ್ಟು ಸಮಯ ಏಕೆ ತೆಗೆದುಕೊಳ್ಳುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಹಲವಾರು ಸುತ್ತಿನ ಸಭೆಗಳು ನಡೆಯುತ್ತಿವೆ. ನಾನು ಸಭೆಗಳಿಗೆ ಹೋಗಿಲ್ಲ, ಆದ್ದರಿಂದ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ನಿಯೋಗವು ಎಸ್‌ಕೆಎಂ ನಾಯಕರೊಂದಿಗೆ ಮಾತುಕತೆ ನಡೆಸಿದೆ. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಹೇಳಿಲ್ಲ. ಪ್ರತ್ಯೇಕ ಸಭೆಗಳು ಸರಿಯಲ್ಲ. ನಾವು ಒಟ್ಟಾಗಿ ಹೋರಾಡಬೇಕು ಎಂಬುದು ಸಾರ್ವಜನಿಕರ ಭಾವನೆಯಾಗಿದೆ” ಎಂದು ಹೇಳಿದರು.
