ದೆಹಲಿ ಗದ್ದುಗೆ | ಈ ಬಾರಿ ಕೇಜ್ರಿವಾಲ್ ಕೋಟೆ ಕೆಡವಲು ಸಾಧ್ಯವೆ?

Date:

Advertisements
ಕೇಜ್ರಿವಾಲ್ ರಾಷ್ಟ್ರರಾಜಕಾರಣದಲ್ಲಿ ಪ್ರಧಾನಿ ಮೋದಿಗೆ ಸವಾಲೆಸೆಯುವುದು ಮಾತ್ರವಲ್ಲ, ಕಾಂಗ್ರೆಸ್‌ನ ಪರಮೋಚ್ಚ ನಾಯಕರನ್ನು ಪ್ರಶ್ನಿಸುತ್ತಾರೆ. ದೆಹಲಿಯಲ್ಲಿ ಮೋದಿ ಆಗಲಿ, ರಾಹುಲ್ ಗಾಂಧಿಯವರಾಗಲಿ ಅರವಿಂದ್ ಕೇಜ್ರಿವಾಲ್‌ಗೆ ಸವಾಲು ಹಾಕಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ

ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ನಿಮ್ಮನ್ನಾಳುವ ನಾಯಕ ಯಾರು ಎಂದು ಪ್ರತಿಪಕ್ಷಗಳಿಗೆ ಪದೇಪದೆ ಪ್ರಶ್ನೆ ಕೇಳುತ್ತಿದ್ದರು. ಸ್ಥಳೀಯ ನಾಯಕರಿಲ್ಲದೆ ಕೇಂದ್ರದ ನಾಯಕರ ಮುಖವನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌, ಬಿಜೆಪಿಗೆ ಕೇಜ್ರಿವಾಲ್‌ ಪ್ರಶ್ನೆ ಸದ್ಯದ ಮಟ್ಟಿಗೆ ಅನ್ವಯವಾಗುತ್ತಿತ್ತು. ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿರುವುದು ಎರಡೂ ರಾಜಕೀಯ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಇವೆರಡು ಪಕ್ಷಗಳು ಸಿಎಂ ಅಭ್ಯರ್ಥಿಯನ್ನು ಹೆಸರಿಸದಿದ್ದರೂ ಫೆ.5 ರಂದು ನಡೆಯಲಿರುವ ಮತದಾನದಲ್ಲಿ ಎಎಪಿ ಪಕ್ಷಕ್ಕೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನವದೆಹಲಿ ವಿಧಾನಸಭೆ ಕ್ಷೇತ್ರದ ಸ್ಪರ್ಧೆ ಕೂಡ ಇದೇ ರೀತಿ ಕಂಡುಬರುತ್ತಿದೆ. ಈ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್ ಸಂದೀಪ್ ದೀಕ್ಷಿತ್ ಅವರಿಗೆ ಟಿಕೆಟ್ ನೀಡಿದೆ. ಇವರಿಬ್ಬರೂ ದೆಹಲಿಯ ಸಂಸದರಾಗಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿಗಳ ಪುತ್ರರು. ಸಂದೀಪ್‌ ದೀಕ್ಷಿತ್ 15 ವರ್ಷ ಸಿಎಂ ಆಗಿದ್ದ ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಅವರ ಪುತ್ರ. ಹಾಗೆಯೇ ಪರ್ವೇಶ್ ವರ್ಮಾ 1996 ರಿಂದ ಎರಡು ವರ್ಷಗಳ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಸಾಹೀಬ್‌ ಸಿಂಗ್‌ ವರ್ಮಾ ಅವರ ಮಗ. ನವದೆಹಲಿ ಕೇಂದ್ರಾಡಳಿತ ಪ್ರದೇಶವಲ್ಲದೆ, ಕ್ಷೇತ್ರದಲ್ಲೂ ಕೇಜ್ರಿವಾಲ್‌ ಅವರಿಗೆ ಪೈಪೋಟಿಯಿದ್ದರೂ ತಮ್ಮದೆ ಕೋಟೆಯನ್ನು ಈಗಾಗಲೇ ಸುಭದ್ರವಾಗಿ ಕಟ್ಟಿಕೊಂಡಿದ್ದಾರೆ.

ಕೇಜ್ರಿ ಅವರಿಗೆ ಪರ್ಯಾಯವಾದ ನಾಯಕ ನವದೆಹಲಿಯಲ್ಲಿ ಕಳೆದ 11 ವರ್ಷಗಳಿಂದ ಮತ್ಯಾರು ಬೆಳೆದುಬಂದಿಲ್ಲ. 2013ರಲ್ಲಿ ಶೀಲಾ ದೀಕ್ಷಿತ್‌ ನೇತೃತ್ವದ ಕಾಂಗ್ರೆಸ್‌ ಪರಾಭವಗೊಂಡು ಎಎಪಿ ಉದಯಿಸಿತು. ಎಎಪಿಯ ಪರಮೋಚ್ಛ ನಾಯಕನಿಗೆ ಎದುರಾಗಿ ಬೇರೆ ಪಕ್ಷಗಳಿಂದ ಬೇರೆ ನಾಯಕರು ವಿಜೃಂಭಿಸುತ್ತಾರೆಯೆ ಎಂದು ದೆಹಲಿಯ ಜನತೆ ಸಣ್ಣ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ ಕಳೆದ ಹನ್ನೊಂದು ವರ್ಷಗಳಿಂದ ಪರಿಸ್ಥಿತಿ ಒಂಚೂರು ಬದಲಾಗಿಲ್ಲ. ಇಲ್ಲಿಯವರೆಗೆ ಅರವಿಂದ್ ಕೇಜ್ರಿವಾಲ್‌ಗೆ ಸ್ಪರ್ಧಿಸುವ ನಾಯಕನನ್ನು ಕಾಂಗ್ರೆಸ್ ಅಥವಾ ಬಿಜೆಪಿಗೆ ಹುಡುಕಲು ಸಾಧ್ಯವಾಗಿಲ್ಲ. ಪ್ರಚೋದನಕಾರಿ ಹೇಳಿಕೆ ನೀಡುವ, ವಿವಾದಾತ್ಮಕವಾಗಿ ಮಾತನಾಡುವ ಎರಡೂ ಪಕ್ಷಗಳ ನಾಯಕರು ಆಗಾಗ ಸುದ್ದಿಯಲ್ಲಿದ್ದರೂ ಕೇಜ್ರಿವಾಲ್‌ಗೆ ಸವಾಲೆಸೆಯುವ ಸ್ಥಿತಿ ರಾಷ್ಟ್ರೀಯ ಪಕ್ಷಗಳಲ್ಲಿ ಕಾಣಿಸುತ್ತಿಲ್ಲ.

Advertisements

ರಾಷ್ಟ್ರೀಯ ಪಕ್ಷಗಳಲ್ಲಿ ನಾಯಕನಿಲ್ಲವೆ ಎಂದು ಕೇಳಬಹುದು? ಖಂಡಿತವಾಗಿಯೂ ಒಂದಷ್ಟು ಮಂದಿ ಇದ್ದಾರೆ. ಆದರೆ ಇತ್ತೀಚೆಗೆ ಯಾವುದೇ ಸ್ಥಳೀಯ ನಾಯಕರನ್ನು ಮುಂಚೂಣಿಗೆ ತರುವ ಹಾಗೂ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಮಾಡಲಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ಒಂದೆರಡು ಅವಧಿಯಿಂದ ಆಳ್ವಿಕೆ ನಡೆಸುತ್ತಿರುವ ಕೆಲವು ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿಯ ಮುಖ್ಯಮಂತ್ರಿಗಳ ಹಾಗೆ ಅರವಿಂದ್‌ ಕೇಜ್ರಿವಾಲ್‌ ಕೂಡ ದೆಹಲಿಯಲ್ಲಿ ತಮ್ಮದೆಯಾದ ಪ್ರಬಾವ ಸೃಷ್ಟಿಸಿಕೊಂಡಿದ್ದಾರೆ. ಅವರ ಹೇಳಿಕೆಗಳು ರಾಷ್ಟ್ರರಾಜಕಾರಣದಲ್ಲಿ ಪ್ರಧಾನಿ ಮೋದಿಗೆ ಸವಾಲೆಸೆಯುವುದು ಮಾತ್ರವಲ್ಲ, ಕಾಂಗ್ರೆಸ್‌ನ ಪರಮೋಚ್ಚ ನಾಯಕರನ್ನು ಪ್ರಶ್ನಿಸುತ್ತಾರೆ. ದೆಹಲಿಯಲ್ಲಿ ಮೋದಿ ಆಗಲಿ, ರಾಹುಲ್ ಗಾಂಧಿಯವರಾಗಲಿ ಅರವಿಂದ್ ಕೇಜ್ರಿವಾಲ್‌ಗೆ ಸವಾಲು ಹಾಕಲು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಸ್‌ಸಿಎಸ್‌ಪಿ / ಟಿಎಸ್‌ಪಿ ಅನುದಾನ ಬಳಕೆಯಾಗುತ್ತಿಲ್ಲವೇಕೆ?

2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯು ಹೆಸರು ಗಳಿಸಿದ್ದ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಕಣಕ್ಕಿಳಿಸಿತ್ತು. ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗಿತ್ತು. ಆದರೆ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತು. ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲಿಲ್ಲ. ಇದೇ ಪರಿಸ್ಥಿತಿ 2020 ರ ಚುನಾವಣೆಯಲ್ಲಿ ಮುಂದುವರೆಯಿತು. 

ಹಾಗೆ ನೋಡಿದರೆ 2013 ರ ತಮ್ಮ ಮೊದಲ ಚುನಾವಣೆಯಲ್ಲಿ ಎಎಪಿ ಗೆದ್ದಿದ್ದು ಕೇವಲ 28 ಸ್ಥಾನಗಳನ್ನು ಮಾತ್ರ. 8 ಕ್ಷೇತ್ರಗಳನ್ನು ಜಯಿಸಿದ್ದ ಕಾಂಗ್ರೆಸ್‌ ಬೆಂಬಲದೊಂದಿಗೆ ಕೇಜ್ರಿವಾಲ್‌ ಮೊದಲ ಬಾರಿಗೆ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದರು. ಡಾ. ಹರ್ಷವರ್ಧನ್ ಅವರ ನಾಯಕತ್ವದಲ್ಲಿ ಬಿಜೆಪಿ 31 ಕ್ಷೇತ್ರಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿತ್ತು. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಗೆ 3 ರಿಂದ 8 ಸ್ಥಾನಗಳನ್ನು ಮಾತ್ರ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. 2020 ರ ಚುನಾವಣೆಯಲ್ಲಿ ಭೋಜ್‌ಪುರಿ ಸಿನಿಮಾ ಸ್ಟಾರ್ ಮನೋಜ್ ತಿವಾರಿ ಬಿಜೆಪಿಯನ್ನು ಮುನ್ನಡೆಸಿದ್ದರು. ಶೇಕಡಾವಾರು ಮತಗಳಿಗೆ ಏರಿಕೆಯಾದರೂ ಗೆಲುವು 10 ಸ್ಥಾನಗಳನ್ನು ಸಮೀಪಿಸಲಿಲ್ಲ.

ಈಗ ದೆಹಲಿಯ ಮಾಜಿ ಮುಖ್ಯಮಂತ್ರಿಯ ಪುತ್ರ ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್‌ ಅವರಿಗೆ ಸವಾಲು ಹಾಕಲು ಬಂದಿದ್ದಾರೆ. ಆದರೆ ಎಲ್ಲವೂ ಮೋದಿ ನೇತೃತ್ವದಲ್ಲಿ ನಡೆಯಬೇಕು ಎನ್ನುವುದು ಕೇಸರಿ ಪಕ್ಷದ ಅಲಿಖಿತ ಕಟ್ಟಾಜ್ಞೆಯಾಗಿರುವ ಕಾರಣ  2020ರಂತೆಯೇ ಈ ಬಾರಿಯೂ ಬಿಜೆಪಿ ಮೋದಿ ಮುಖದಲ್ಲಿಯೇ ಚುನಾವಣೆ ಎದುರಿಸುತ್ತಿದೆ. ಕಳೆದ ಚುನಾವಣೆಯ ಸೋಲಿನ ನಂತರ, ಆರ್‌ಎಸ್‌ಎಸ್ ಮುಖವಾಣಿ ದೆಹಲಿಯಲ್ಲಿ ಬಿಜೆಪಿ ಸ್ಥಳೀಯ ನಾಯಕತ್ವವನ್ನು ಮುಂಚೂಣಿಗೆ ತರಬೇಕು ಮತ್ತು ಮೋದಿ-ಶಾರನ್ನು ಅವಲಂಬಿಸಬಾರದು ಎಂದು ಸಲಹೆ ನೀಡಿತು. ಆದರೆ ಇವರಿಬ್ಬರನ್ನು ಎದುರು ಹಾಕಿಕೊಂಡು ಮಾತನಾಡುವ ಧೈರ್ಯ ದೆಹಲಿಯ ಸ್ಥಳೀಯ ನಾಯಕರಿಗೆ ಇಲ್ಲದಿರುವ ಕಾರಣ ಪ್ರತಿ ಚುನಾವಣೆಯಂತೆ 2025ರ ವಿಧಾನಸಭೆ ಚುನಾವಣೆಯಲ್ಲಿಯೂ ಮೋದಿ – ಶಾ ಅವರನ್ನೆ ಪ್ರಚಾರದ ಸಂದರ್ಭದಲ್ಲಿ ದೆಹಲಿ ಜನತೆಗೆ ತೋರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆರಂಭದಲ್ಲಿ ಎಎಪಿಯ ಉಚಿತ ಕೊಡುಗೆಗಳ ಬಗ್ಗೆ ಟೀಕಿಸುತ್ತಿದ್ದ ಬಿಜೆಪಿ ನಾಯಕರು ಈಗ ತಾವೆ ತಮ್ಮ ಪ್ರಣಾಳಿಕೆಯಲ್ಲಿ ಅದೇ ರೀತಿಯ ಭರವಸೆಗಳನ್ನು ನೀಡಿದ್ದಾರೆ.

ಕಾಂಗ್ರೆಸ್ ಪರಿಸ್ಥಿತಿ ಕೂಡ ಅಷ್ಟೇನು ಭಿನ್ನವಾಗಿಲ್ಲ. ದಶಕ ಕಳೆದರೂ ಇಂದಿಗೂ ಕೈ ಪಕ್ಷದ ಹೈಕಮಾಂಡ್‌ ಶೀಲಾ ದೀಕ್ಷಿತ್‌ ಹಾಗೂ ಯುಪಿಎ ಆಡಳಿತದ ಬಗ್ಗೆಯೆ ಮಾತನಾಡಲಾಗುತ್ತಿದೆ. ರಾಹುಲ್‌ ಗಾಂಧಿಯೆ ಬಂದು ಪ್ರಚಾರ ನಡೆಸಬೇಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಥಳೀಯ ಮತದಾರರಿಗೆ ಹೆಚ್ಚು ಪರಿಚಿತವಿಲ್ಲ. 1998 ರಿಂದ 2013ರವರೆಗೆ ಮೂರು ಅವಧಿಯವರೆಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಕಳೆದ ಎರಡು ಚುನಾವಣೆಗಳಲ್ಲಿ ಒಂದೂ ಸ್ಥಾನವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಅರವಿಂದ್ ಕೇಜ್ರಿವಾಲ್ ಅವರಿಗೂ ಈ ಬಾರಿಯ ಚುನಾವಣೆಯಲ್ಲಿ ಅವರ ಕೋಟೆ ಒಂದಿಷ್ಟು ಅಲುಗಾಡುತ್ತದೆ ಎಂಬುದು ತಿಳಿದಿರುವಂತಿದೆ. ದೆಹಲಿ ಅಬಕಾರಿ ಹಗರಣ ನೀತಿ ಸೇರಿದಂತೆ ಒಂದಿಷ್ಟು ಹಗರಣಗಳು ಬಯಲಿಗೆ ಬಂದು ಕೇಜ್ರಿ ಅವರು ಜೈಲಿಗೆ ಹೋಗಿ ಬಂದಿದ್ದರೂ ಎಎಪಿಗೆ ಇದರಿಂದ ಅನುಕೂಲ, ಅನಾನುಕೂಲ ಎರಡೂ ಉಂಟಾಗುವ ಸಂಭವವಿದೆ. ಆಮ್ಆದ್ಮಿ ಪಕ್ಷವು ತನ್ನ ರಾಜಕೀಯವನ್ನು ಪ್ರಾರಂಭಿಸಿದಾಗಿನಿಂದ, ಅದರ ಗಮನವು ಆರೋಗ್ಯ , ಶಿಕ್ಷಣ ಮತ್ತು ಇತರ ಮೂಲಭೂತ ಸಮಸ್ಯೆಗಳ ಮೇಲೆ ಹೆಚ್ಚು ಹರಿಸಿದೆ. ಆಮ್ಆದ್ಮಿ ಪಕ್ಷವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೆಲಸ ಮಾಡುತ್ತಿದೆ ಎಂದು ಜನರು ನಂಬಿದ್ದಾರೆ. ಈಗ ಮತ್ತೊಮ್ಮೆ ಆಮ್ಆದ್ಮಿ ಪಕ್ಷವು ಈ ದಾಟಿಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿದೆ. ದೆಹಲಿಯ ಮಧ್ಯಮ ವರ್ಗದ ಮತದಾರರು ಎಎಪಿಗೆ ಆಕರ್ಷಿತರಾದರೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ನೀಡಿರುವ ಕೆಲವು ಯೋಜನೆಗಳು ಮತಗಳಿಕೆಯಲ್ಲಿ ಅನುಕೂಲವುಂಟುಮಾಡಬಹುದು.

ಸಹಜವಾಗಿಯೇ ಈ ಬಾರಿ ಸ್ಪರ್ಧೆಯು ಕಠಿಣವಾಗಿದೆ. ಕೆಲವು ಪ್ರಮುಖ ಪ್ರಶ್ನೆಗಳಿಗೆ ಕಾಂಗ್ರೆಸ್, ಬಿಜೆಪಿ ಬಳಿ ಉತ್ತರವಿಲ್ಲ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಇಲ್ಲದಿದ್ದರೆ ನಂತರ ಯಾರು ಎಂಬುದಕ್ಕೆ ಆತಿಶಿ ಈಗಾಗಲೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮನೀಶ್‌ ಸಿಸೋಡಿಯಾ ಕೂಡ ಮುಂದಿನ ಸಂಪುಟದಲ್ಲಿ ಡಿಸಿಎಂ ಆಗಿರುತ್ತಾರೆ ಎಂದು ಕೇಜ್ರಿವಾಲ್‌ ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಪರ ಒಲವು ತೋರಿದರೂ ಎಎಪಿಯೆ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ. ಹಾಗಂತ ಕಾಂಗ್ರೆಸನ್ನು ಕಡೆಗಣಿಸಲು ಸಾಧ್ಯವಿಲ್ಲ.

ಇದಕ್ಕೆ ಒಂದು ಉದಾಹರಣೆ ಹೇಳುವುದಾದರೆ, 2004ರ ಲೋಕಸಭೆ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವೈಭವಿಕರಿಸಲಾಗಿತ್ತು. ಅಟಲ್ ನಂತರ ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು? ಆದರೆ ದೇಶದ ಮತದಾರರು ಯಾರನ್ನೂ ಆಯ್ಕೆ ಮಾಡಲಿಲ್ಲ, ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ನೇತೃತ್ವದ ಯುಪಿಎಗೆ ಅಧಿಕಾರ ನೀಡಿದರು. ಮತದಾರನ ನಡೆ ಒಮ್ಮೆಮ್ಮೆ ಅರ್ಥವಾಗುವುದಿಲ್ಲ. ಹೀಗಾಗಿ ಈ ಬಾರಿಯ ದೆಹಲಿ ಚುನಾವಣೆ ಎಲ್ಲ ರೀತಿಯಲ್ಲೂ ಕುತೂಹಲ ಮೂಡಿಸಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X