ನರಭಕ್ಷಕ ಹುಲಿಯ ಕಳೇಬರದ ಪರೀಕ್ಷೆಯ ವೇಳೆ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆಯ ತುಂಡು ಹಾಗೂ ಕಿವಿ ಓಲೆಗಳು ಕಂಡುಬಂದಿವೆ.
ಇತ್ತೀಚೆಗೆ ವಯನಾಡ್‌ನ ಕಾಫಿ ತೋಟವೊಂದರ ಕಾರ್ಮಿಕ ಮಹಿಳೆ ರಾಧಾ ಅವರನ್ನು ಬಲಿ ತೆಗೆದುಕೊಂಡಿದ್ದ ಹುಲಿ ಇದಾಗಿದ್ದು, ಕಳೇಬರ ಸೋಮವಾರ ಬೆಳಗಿನ ಜಾವ ವಯನಾಡ್‌ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಕಳೇಬರದ ಪರೀಕ್ಷೆಯ ವೇಳೆ ಹುಲಿಯ ಹೊಟ್ಟೆಯಲ್ಲಿ ರಾಧಾ ಅವರ ಕೂದಲು, ಬಟ್ಟೆಯ ತುಂಡು ಹಾಗೂ ಕಿವಿ ಓಲೆಗಳು ಕಂಡುಬಂದಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
45 ವರ್ಷದ ಬುಡಕಟ್ಟು ಮಹಿಳೆಯ ಸಾವಿಗೆ ಈ ಹುಲಿಯೇ ಕಾರಣ ಎಂದು ರವಿವಾರ ಘೋಷಿಸಿದ್ದ ಕೇರಳ ಅರಣ್ಯ ಸಚಿವ ಎ.ಕೆ.ಶಶೀಂದ್ರನ್, ಅದನ್ನು ಗುಂಡಿಟ್ಟು ಹತ್ಯೆಗೈಯ್ಯಬೇಕು ಎಂದು ಆದೇಶಿಸಿದ್ದರು.
ಆದರೆ, ನರಭಕ್ಷಕ ಹುಲಿ ಕೇರಳದ ವಯನಾಡ್‌ನ ಮನೆಯೊಂದರ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾನತವಾಡಿ ಪ್ರದೇಶದಲ್ಲಿ ಅದು ಪತ್ತೆಯಾದಾಗ, ಅದರ ದೇಹದ ಮೇಲೆ ಕಾದಾಡಿದ ಗುರುತುಗಳಿದ್ದವು. ಮತ್ತೊಂದು ಹುಲಿಯೊಂದಿಗೆ ಗಲಾಟೆಯಾಗಿರುವುದೇ ಈ ಹುಲಿಯ ಸಾವಿಗೆ ಕಾರಣ ಇರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.