“ರಾಜ್ಯದ ಕಾಂಗ್ರೆಸ್ ಸರ್ಕಾರವು ‘ ಹಬ್ ಅಂಡ್ ಸ್ಪೋಕ್ ‘ ಹೆಸರಿನಲ್ಲಿ ಸರಕಾರ ಶಾಲೆಗಳನ್ನು ಮುಚ್ಚಲು ಹೊರಟಿದೆ” ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ್ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಕಾಂಗ್ರೆಸ್ ಸರ್ಕಾರ 4,200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಸಂಯೋಜನೆ ಹೆಸರಿನಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಪ್ರತಿಭಟಿಸಿ ಮಾತನಾಡಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಸರಕಾರ ಕಡಿಮೆ ಹಾಜರಾತಿ ಇರುವ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜನೆಗೊಳಿಸುವುದಾಗಿ ಸರ್ಕಾರವು ತಿಳಿಸಿದೆ. ಈ ಮೂಲಕ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಹಿಂದಿನ ಬಿಜೆಪಿ ರಾಜ್ಯ ಸರ್ಕಾರವು ಇದೇ ನೆಪವೊಡ್ಡಿ ಎನ್ಈಪಿ-2020ರ ಅಡಿಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಅದರ ವಿರುದ್ಧ ರಾಜ್ಯದ ವಿದ್ಯಾರ್ಥಿಗಳು ಎಐಡಿಎಸ್ಓ ನೇತೃತ್ವದಲ್ಲಿ ಬೃಹತ್ ಆಂದೋಲನ ನಡೆಸಿ 35 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸುವುದರ ಮೂಲಕ ಶಾಲೆಗಳನ್ನ ರಕ್ಷಿಸಿದ್ದರು” ಈಗ ಮತ್ತೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಕಾವೇರಿ ರಜಪೂತ ಹೇಳಿದರು.
ಎಐಡಿಎಸ್ಓ ಮುಖಂಡ ಶರತ್ ತುಪ್ಪದ ಮಾತನಾಡಿ, “ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ. ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಮುಚ್ಚುವುದು, ‘ನೆಗಡಿ ಬಂದರೆ ಮೂಗು ಕತ್ತರಿಸಿದಂತೆ’! ಸರ್ಕಾರವು ತನ್ನ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನವಿರೋಧಿ ನಿರ್ಧಾರವನ್ನು ಕೈಬಿಡಬೇಕು. ಕೂಡಲೇ ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯಗಳನ್ನು ನೀಡಿ ರಕ್ಷಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಶಾಲಾ ವಿಧ್ಯಾರ್ಥಿಗಳಿಂದ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ
ಈ ಪ್ರತಿಭಟನೆಯಲ್ಲಿ ಎಐಡಿಎಸ್ಓ ಸಂಘಟನಾಕಾರ ನಿತಿನ್ಕುಮಾರ್, ಶರತ್ ತುಪ್ಪದ, ಅಜೀತ್, ಚಿದಾನಂದ, ಕುಮಾರ, ವಿಠ್ಠಲ ನಾಯಕೋಡಿ ಹಾಗೂ ಇನ್ನೀತರ ವಿದ್ಯಾರ್ಥಿಗಳು ಭಾಗವಹಿಸಿದ್ದರು..
