ಸಾಲಗಾರರಿಗೆ ಸಾಲಕೊಟ್ಟು, ಸಾಲದ ಹಣಕ್ಕೆ ಮೀಟರ್ ಬಡ್ಡಿ ಹಾಕುತ್ತಿದ್ದ ದಂಧೆಕೋರನನ್ನು ಗುಂಪೊಂದು ಅಪಹರಿಸಿದ್ದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಬೆಳಕಿಗೆ ಬಂದಿದೆ.
ಸಾಲ ಕೊಟ್ಟು, ಮೀಟರ್ ಬಡ್ಡಿ ಹಾಕಿ ಸಾಲಗಾರರನ್ನು ಸುಲಿಗೆ ಮಾಡುತ್ತಿದ್ದ ಮುಂಡಗೋಡದ ಜಮೀರ್ ದರ್ಗಾವಲೆ ಎಂಬವರನ್ನು ಗುಂಪೊಂದು ಅಪರಿಸಿತ್ತು. ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಜಮೀರ್‌ನನ್ನು ರಕ್ಷಿಸಿದ್ದಾರೆ. ಈವರೆಗೆ 13 ಮಂದಿ ಆರೋಪಿಗಳನ್ನು ಬಂಧಸಿದ್ದಾರೆ.
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಜಮೀರ್, 1 ಲಕ್ಷ ರೂ. ಸಾಲ ಕೊಟ್ಟು, ತಿಂಗಳಿಗೆ 30,000 ರೂ. ಬಡ್ಡಿಯನ್ನೇ ಪಡೆಯುತ್ತಿದ್ದರು. ಇದು, ಬರೋಬ್ಬರಿ ತಿಂಗಳಿಗೆ 30% ಬಡ್ಡಿಯ ಲೆಕ್ಕವಾಗಿತ್ತು. ಸಾಲ ಕೊಡಲು ಸಾಲಗಾರರಿಂದ ಖಾಲಿ ಚೆಕ್ ಪಡೆಯುತ್ತಿದ್ದರು. ಬಡ್ಡಿ ಪಾವತಿಸದಿದ್ದರೆ, ಚೆಕ್ ಬೌನ್ಸ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.
ಮೀಟರ್ ಬಡ್ಡಿ ವಸೂಲಿಗಾಗಿಯೇ ಜಮೀರ್ ಸುಮಾರು 150 ಮಂದಿ ಕೆಲಸಗಾರರನ್ನು ಇಟ್ಟುಕೊಂಡಿದ್ದರು. 30%ನಂತೆ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಜಮೀರ್, ಬಡ್ಡಿಯ ಹಣದಲ್ಲಿ 15% ತಾನು ಇಟ್ಟುಕೊಂಡು, ಉಳಿದ 15%ಅನ್ನು ವಸೂಲಿ ಮಾಡುತ್ತಿದ್ದ ಕೆಲಸಗಾರರಿಗೆ ಹಂಚುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗೆ, ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ನೇತೃತ್ವದಲ್ಲಿ ಪೊಲೀಸರು ಜಮೀರ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ವೇಳೆ, 250ಕ್ಕೂ ಹೆಚ್ಚು ಖಾಲಿ ಚೆಕ್‌ಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ.
ಜಮೀರ್ ಅವರ ಮೀಟರ್ ಬಡ್ಡಿ ಸುಲಿಗೆಯಿಂದ ಬೇಸತ್ತಿದ್ದ ಗುಂಪೊಂದು ಜನವರಿ 9ರ ರಾತ್ರಿ ಜಮೀರ್ ಅವರನ್ನು ಅಪಹರಿಸಿತ್ತು. ಆತನ ಕುಟುಂಬಸ್ಥರಿಗೆ ಕರೆ ಮಾಡಿ, 32 ಲಕ್ಷ ರೂ.ಗೆ ಬೇಡಿಕೆ ಇಟ್ಟಿತ್ತು. ಆದಾಗ್ಯೂ, ಕುಟುಂಬಸ್ಥರು 18 ಲಕ್ಷ ರೂ.ಗಳನ್ನು ನೀಡಿದ್ದರು. ಬಳಿಕ, ಜಮೀರ್ ಅವರನ್ನು ಹಾವೇರಿಯಲ್ಲಿ ಬಿಟ್ಟು, ಗುಂಪು ಪರಾರಿಯಾಗಿತ್ತು.
ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.