ಅಲಹಾಬಾದ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ “ಮನುಸ್ಮೃತಿ” ಆಧಾರಿತ ಸಂವಿಧಾನ ಅಳವಡಿಕೆಗೆ ಸನಾತನಿಗಳಿಂದ ಎದ್ದ ಕೂಗು ಭಾರತವನ್ನು ಛಿದ್ರಗೊಳಿಸುವ ಹುನ್ನಾರದ ಭಾಗವಾಗಿದೆ. ಆ ಕುರಿತು ಡಾ ಬಿ ಆರ್ ಅಂಬೇಡ್ಕರ್ ರಚಿತ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ದೇಶದ್ರೋಹಿಗಳ ಕುರಿತು ಭಾರತೀಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿರಕ್ತ ಮಠದ ವೀರತೀಶಾನಂದ ಸ್ವಾಮೀಜಿ ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟಲ್ ಒಂದರಲ್ಲಿ ನಡೆದ ಶರಣ ಸಂಸ್ಕೃತಿ ರಕ್ಷಣಾ ವೇದಿಕೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸನಾತನಿಗಳು ಈಗಿರುವ ಸಂವಿಧಾನವನ್ನು ಎಂದೂ ಗೌರವಿಸಲಿಲ್ಲ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ” ಎಂದರು.
“ಅಂಬೇಡ್ಕರ್ ರಚಿಸಿದ ಸಂವಿಧಾನವು ಸನಾತನ ಭಾರತೀಯತೆ ಮತ್ತು ಮನುಸ್ಮೃತಿಯ ಆಶಯಗಳನ್ನು ಹೊಂದಿಲ್ಲ. ಅದು ಭಾರತದ ಸಂವಿಧಾನ ಆಗಕೂಡದು(ಸಂವಿಧಾನ ಜಾರಿಯಾಗುವಾಗ ಸನಾತನ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವ್ಯಕ್ತಪಡಿಸಿದ ಅಭಿಪ್ರಾಯ). ತ್ರೀವರ್ಣ ಧ್ವಜವು ಭಾರತದ ರಾಷ್ಟ್ರಧ್ವಜ ಆಗಬಾರದಿತ್ತು. ಮೂರು ವರ್ಣಗಳು ಅಪಶಕುನದ ಸಂಕೇತ(ತ್ರೀವರ್ಣ ಧ್ವಜ ಅಂಗೀಕರಿಸಿದಾಗ ಸನಾತನ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವ್ಯಕ್ತಪಡಿಸಿದ ಅಭಿಪ್ರಾಯ). ಭಾರತದ ರಾಷ್ಟ್ರಗೀತೆ ಬ್ರಿಟಿಷರ ಹೊಗಳಿಕೆಯಾಗಿದೆ. ವಂದೇಮಾತರಂ ಭಾರತದ ರಾಷ್ಟ್ರಗೀತೆಯಾಗಬೇಕು(ರಾಷ್ಟ್ರಗೀತೆ ಅಂಗೀಕರಿಸಿದಾಗ ಸನಾತನ ಬ್ರಾಹ್ಮಣವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ ವ್ಯಕ್ತಪಡಿಸಿದ ಅಭಿಪ್ರಾಯ). ಗಾಂಧಿ ಈ ದೇಶವನ್ನು ವಿಭಜಿಸಿದ್ದಾರೆ. ಗಾಂಧಿ ಒಬ್ಬರಿಂದಲೆ ದೇಶಕ್ಕೆ ಸ್ವಾತಂತ್ರ ಸಿಕ್ಕಿಲ್ಲ(ಗಾಂಧಿ ಹಂತಕರ ಹಿಂದಿದ್ದ ಸನಾತನವಾದಿಗಳ ಸಾಮೂಹಿಕ ಅಭಿಪ್ರಾಯ)ವೆಂದು ಸನಾತನಿಗಳು ಪೂರ್ವದಿಂದಲೂ ರಾಷ್ಟ್ರದ ಸಂವಿಧಾನˌ ರಾಷ್ಟ್ರಧ್ವಜˌ ರಾಷ್ಟ್ರಗೀತೆ ಬಗ್ಗೆ ಅಗೌರವ ಹೊಂದಿದ್ದಾರೆ” ಎಂದು ತಿಳಿಸಿದರು.
ರಾಷ್ಟೀಯ ಬಸವ ಸೇನೆ ಜಿಲ್ಲಾ ಮುಖಂಡ ಡಾ. ರವಿ ಬಿರಾದಾರ್ ಮಾತನಾಡಿ, “ಕುಂಭಮೇಳದಲ್ಲಿ ಸನಾತನಿಗಳು ಪ್ರಸ್ತಾಪಿಸಿದ ಸನಾತನವಾದಿ ಸಂವಿಧಾನವು ಸನಾತನಿಗಳು ಭಾರತದ ಈಗಿನ ಸಂವಿಧಾನನ್ನು ದ್ವೇಷಿಸುವುದು ಸ್ಪಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಬ್ರಾಹ್ಮಣವಾದಿ ಮನುಸ್ಮೃತಿಯನ್ನು ಸಂವಿಧಾನವಾಗಿ ಅಂಗೀಕರಿಸಲು ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಹುನ್ನಾರವಾಗಿ ಈ ತರಹದ ಸಂವಿಧಾನ ವಿರೋಧಿ ಹಾಗೂ ದೇಶದ್ರೋಹಿ ಹೇಳಿಕೆಗಳು ಹೊರಬೀಳುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ಪ್ರಭುಗೌಡ ಪಾಟೀಲ ಮಾತನಾಡಿ, “ಈಗಾಗಲೆ ಕಳೆದ ಹತ್ತು ವರ್ಷಗಳಲ್ಲಿ ಫ್ಯಾಸಿಸ್ಟ್ ಆಡಳಿತದಲ್ಲಿ ಸಂವಿಧಾನನ್ನು ದುರ್ಬಲ ಹಾಗೂ ಅಪ್ರಸ್ತುತಗೊಳಿಸುವ ಅನೇಕ ಪ್ರಯತ್ನಗಳು ನಡೆದಿವೆ. ಗಾಂಧೀಜಿಗೆ ನಮಿಸಿ ಗುಂಡಿಟ್ಟ ಗೋಡ್ಸೆಯನ್ನು ಮಾದರಿಯಾಗಿ ಇಟ್ಟುಕೊಂಡವರು ʼಸಂವಿಧಾನ್ ಸನ್ಮಾನ್ʼ ಅಭಿಯಾನ ಮಾಡುವ ಮೂಲಕ ಸಂವಿಧಾನವನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಅಮಿತ್ ಶಾ ಗಡಿಪಾರಿಗೆ ಡಿಎಸ್ಎಸ್ ಆಗ್ರಹ
“ಈ ದೇಶದ ಸಂವಿಧಾನ ಪ್ರಿಯರುˌ ಬುದ್ಧˌ ಬಸವˌ ಅಂಬೇಡ್ಕರ್ ವಾದಿಗಳು ಹಾಗೂ ಈ ದೇಶದ ಬಹುತ್ವವಾದಿಗಳು ಸನಾತನಿ ಬ್ರಾಹ್ಮಣವಾದಿಗಳ ಈ ದೇಶದ್ರೋಹದ ಹುನ್ನಾರದ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ಹಮ್ಮಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಮುಂದೊಂದು ದಿನ ದೇಶ ಪಾಕಿಸ್ತಾನದಂತೆ ಮತಾಂಧರ ಅಟ್ಟಹಾಸಕ್ಕೆ ಸಿಲುಕಿ ಕುಸಿಯಲಿದೆ” ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಚಂದ್ರಶೇಖರ ಘಂಟೆಪ್ಪಗೋಳ, ಮಹಾದೇವಿ ಗೋಕಾಕ್, ಶೋಭಾ ಬಿರಾದಾರ್, ಮೀನಾಕ್ಷಿ ಪಾಟೀಲ, ಶಿವಲಿಂಗಪ್ಪ ಕಲಬುರಗಿ ಹಾಗೂ ಕಲ್ಲಪ್ಪ ಕಡೆಚೂರು ಇದ್ದರು.