ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ 100 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ, ವಿದೇಶಿ ಸಹಾಯಕ್ಕಾಗಿ ಕೆಲಸ ಮಾಡುತ್ತಿದ್ದ ‘ಯುಎಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವೆಲಪ್‌ಟೆಂಪ್’ (ಯುಎಸ್‌ಎಐಡಿ)ಗೆ ತಮ್ಮ ಕೆಲಸವನ್ನು ನಿಲ್ಲಿಸುವಂತೆಯೇ ಟ್ರಂಪ್ ಆದೇಶಿಸಿದ್ದಾರೆ. ಅವರ ಆದೇಶದ ಬೆನ್ನಲ್ಲೇ ನೂರಾರು ನೌಕರರನ್ನು ಯುಎಸ್‌ಎಐಡಿ ವಜಾಗೊಳಿಸಿದೆ.
ನೌಕರರನ್ನು ವಜಾಗೊಳಿಸಿರುವ ಬಗ್ಗೆ ಮಾಹಿತಿ ನೀಡಿರುವ ಹೆಸರು ಹೇಳಲಿಚ್ಚಿಸದ ಯುಎಸ್‌ಎಐಡಿ ಅಧಿಕಾರಿಯೊಬ್ಬರು, “390 ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ” ಎಂದು ತಿಳಿಸಿರುವುದಾಗಿ NPR ವರದಿ ಮಾಡಿದೆ.
ಯುಎಸ್‌ಎಐಡಿ ಸುಮಾರು 10,000 ಜನರ ಕಾರ್ಯಪಡೆಯನ್ನು ಹೊಂದಿದೆ. ಆ ಕಾರ್ಯಪಡೆಯ ಭಾಗವಾಗಿದ್ದ 400 ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
“ಈ ವಜಾಗೊಳಿಸುವಿಕೆಯು ನೂರಾರು ಸಿಬ್ಬಂದಿಗಳಿಗೆ ಅಸಹನೀಯವಾಗಿದೆ. ಯುಎಸ್‌ಎಐಡಿಯಲ್ಲಿ ಈವರೆಗೆ ಸೇವೆ ಸಲ್ಲಿಸಿದವರನ್ನು ಏಕಾಏಕಿ ವಜಾಗೊಳಿಸಲಾಗಿದ್ದು, ಎಲ್ಲರ ಬದುಕು ಅತಂತ್ರವಾಗಿದೆ. ಒಟ್ಟಾರೆ ಚಿತ್ರಣವು ಭಯಾನಕವಾಗಿ ಕಾಣಿಸುತ್ತಿದೆ” ಎಂದು ವಜಾಗೊಂಡಿರುವ ಉದ್ಯೋಗಿಯೊಬ್ಬರು ಹೇಳಿಕೊಂಡಿದ್ದಾರೆ.
“ಅವ್ಯವಸ್ಥೆಯನ್ನು ಉಂಟುಮಾಡುವ ಉದ್ದೇಶದಿಂದ ದೀರ್ಘಕಾಲದವರೆಗೆ ಅಸ್ತಿತ್ವದಲ್ಲಿದ್ದ ಏಜೆನ್ಸಿಯನ್ನು ವ್ಯವಸ್ಥಿತವಾಗಿ ಮುಚ್ಚುತ್ತಿರುವ ಹುನ್ನಾರದಂತೆ ಕಾಣುತ್ತದೆ” ಎಂದು ಅವರು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?; ಟ್ರಂಪ್ ಟೀಮ್‌ನಿಂದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಔಟ್ ಆಗಿದ್ದೇಕೆ?
ಟ್ರಂಪ್ ಅವರು 90 ದಿನಗಳವರೆಗೆ ಯಾವುದೇ ದೇಶಕ್ಕೆ ಸಹಾಯ ಮಾಡಬಾರದೆಂದು ಆದೇಶಿಸಿದ್ದಾರೆ. ಈ ಬೆನ್ನಲ್ಲೇ, ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಬಾಂಗ್ಲಾದೇಶ ಸರ್ಕಾರಕ್ಕೆ ಹಣ ಸಹಾಯ ನೀಡುವುದನ್ನು ಯುಎಸ್‌ಎಐಡಿ ಸ್ಥಗಿತಗೊಳಿಸಿದೆ.
ಆದಾಗ್ಯೂ, ಬಾಂಗ್ಲಾದೇಶದಲ್ಲಿ ವಾಸಿಸುವ ರೋಹಿಂಗ್ಯಾ ಜನರಿಗೆ USAIDಯಿಂದ ಬೆಂಬಲ ಮುಂದುವರಿಯುತ್ತದೆ ಎಂದು ಬಾಂಗ್ಲಾದೇಶದ ಮುಖ್ಯ ಸಲಹೆಗಾರರ ಪತ್ರಿಕಾ ಕಾರ್ಯದರ್ಶಿ ಶಫಿಕುಲ್ ಆಲಂ ತಿಳಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.