ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ) ದತ್ತು ಗ್ರಾಮದ ಕ್ರಿಯಾ ಯೋಜನೆಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಆರಂಭಿಸಿ ಮಾರ್ಚ್ ಒಳಗೆ ಮುಕ್ತಾಯಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಎಲ್ಲ ಕಾಮಗಾರಿಗಳು ಮುಕ್ತಾಯವಾಗಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳು ಅಪೂರ್ಣವಾಗಬಾರದು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತಂ ಪಾಂಡೆಯವರು ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಕೊಪ್ಪಳ ತಾಲೂಕಿನ ಸಮೀಪದ ಮೋರನಾಳ ಗ್ರಾಮ ದತ್ತು ಗ್ರಾಮವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಪ್ರಗತಿಯಲ್ಲಿರುವ ಗ್ರಾಮೀಣ ಗೋದಾಮು, ಶಾಲಾ ಶೌಚಾಲಯ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಶಾಲಾ ಮಕ್ಕಳ ಕಂಪ್ಯೂಟರ್ ಕಲಿಕಾ ಕೊಠಡಿ ಪರಿಶೀಲನೆ ಮಾಡಿದರು. ನಂತರ ಮಕ್ಕಳೊಂದಿಗೆ ಆರೋಗ್ಯ ತಪಾಸಣೆ ಕುರಿತು ಚರ್ಚಿಸಿದರು. ಪ್ರತಿದಿನ ಆಹಾರ ವಿತರಣೆ, ಮೊಟ್ಟೆ ಇತ್ಯಾದಿ ವಿತರಣೆ ಕುರಿತು ಮುಕ್ತವಾಗಿ ಚರ್ಚಿಸಿದರು.
ಬಳಿಕ ಗ್ರಾಮದ ಮನೆಗೆ ತೆರಳಿ ಶೌಚಾಲಯ ಇರುವ ಬಗ್ಗೆ ಮಾಹಿತಿ ಪಡೆದು, “ಶೌಚಾಲಯ ಬಳಕೆಗೆ ಸರ್ಕಾರದಿಂದ ಈಗಾಗಲೇ ಪ್ರೋತ್ಸಾಹಧನ ವಿತರಿಸುತ್ತಿದೆ. ಶೌಚಾಲಯ ಬಳಕೆಯಿಂದ ನಮ್ಮ ಆರೋಗ್ಯ ಸುರಕ್ಷಿತ ಹಾಗೂ ಗ್ರಾಮದ ಸುತ್ತ-ಮುತ್ತಲೂ ನೈರ್ಮಲ್ಯ ವಾತಾವರಣ ಉಂಟಾಗುತ್ತದೆ. ಹಾಗಾಗಿ ಪ್ರತಿದಿನ ಶೌಚಾಲಯ ಬಳಕೆ ಮಾಡಬೇಕು” ಎಂದು ಗ್ರಾಮಸ್ಥರಲ್ಲಿ ಸಿಇಒ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹೆಣ್ಣು ಮಕ್ಕಳಿಗಾಗಿ ಆರಂಭವಾಗಿದ್ದ ‘ಶುಚಿ ಯೋಜನೆ’ ಸ್ಥಗಿತ; ರಾಯಚೂರು ಬಾಲಕಿಯರಿಗೆ ಸಂಕಷ್ಟ
ತೋಟಗಾರಿಕೆ ಇಲಾಖೆಯಿಂದ ಬದು ಸುತ್ತಲೂ ತೆಂಗು ತೋಟ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.
ತಾ ಪಂ ಇಒ ದುಂಡಪ್ಪ ತುರಾದಿ, ಗ್ರಾ.ಪಂ ಸದಸ್ಯ ಅಂದಪ್ಪ ಚಿಲಗೋಡ್ರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ತೋಟಗಾರಿಕೆ ಇಲಾಖೆಯ ಬಸವರಾಜ, ಕಾರ್ಯದರ್ಶಿ ಮಂಜುನಾಥ, ತಾಂತ್ರಿಕ ಸಂಯೋಜಕಿ ಕವಿತಾ, ತಾಂತ್ರಿಕ ಸಹಾಯಕ ಪ್ರವೀಣ, ಬಿಎಫ್‌ಟಿ ಮಾಳಪ್ಪ, ಗ್ರಾ.ಪಂ ಸಿಬ್ಬಂದಿ ಹಾಗೂ ಇತರರು ಇದ್ದರು.