ರಾಜ್ಯದಲ್ಲಿ 30 ಸಾವಿರ ಕೆರೆಗಳ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಈಗಾಗಲೇ ಪೂರ್ಣಗೊಳಿಸಿದೆ. ಉಳಿದಿರುವ 10,754 ಕೆರೆಗಳ ಸಮೀಕ್ಷೆ ಕಾರ್ಯವನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.
ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆ ಬುಧವಾರ ಸಿಎಂ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಿತು. ಸಭೆಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯ ಬಾಕಿಯಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮಳೆಗಾಲದ ಒಳಗಾಗಿ ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದಾರಮಯ್ಯ ನಿರ್ದೇಶನ ನೀಡಿದರು.
“ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 26,365ಕೆರೆಗಳು, ಸಣ್ಣ ನೀರಾವರಿಯಲ್ಲಿ 3,247, ಬಿಬಿಎಂಪಿ ವ್ಯಾಪ್ತಿಯಲ್ಲಿ 117 ಕೆರೆಗಳಿವೆ. ಕೆರೆಗಳ ಸಂರಕ್ಷಣೆ ಕಾರ್ಯವನ್ನು ನರೇಗಾ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕು” ಎಂದರು.
“ಮೀನುಗಾರಿಕಾ ಇಲಾಖೆ ವತಿಯಿಂದ ಎಲ್ಲಾ ಕೆರೆಗಳಿಗೆ ಮೀನು ಮರಿಗಳನ್ನು ಬಿಡುವ ಕಾರ್ಯ ಮಾಡಿದರೆ ಆದಾಯ ಗಳಿಸಲು ಸಾಧ್ಯವಿದೆ. ನಗರ ಪ್ರದೇಶದ ಕೆರೆಗಳು ಮಾತ್ರವಲ್ಲದೆ, ರಾಜ್ಯದ ಎಲ್ಲಾ ಕೆರೆಗಳ ಮಾಲಿನ್ಯದ ಮಟ್ಟವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ ನಿಯಮಿತವಾಗಿ ವರದಿ ಸಲ್ಲಿಸಬೇಕು” ಎಂದು ಹೇಳಿದರು.