ನನ್ನ ರಾಜಕೀಯವಾಗಿ ಮುಗಿಸಲು ವಿಜಯೇಂದ್ರ ಯತ್ನ‌, ಏಕಚಕ್ರಾಧಿಪತ್ಯಕ್ಕೆ ಕಡಿವಾಣ ಬೇಕು: ಸಂಸದ ಸುಧಾಕರ್

Date:

Advertisements

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ವಿರೋಧಿ ಬಣದ ನಾಯಕರು ಶತಪ್ರಯತ್ನ ಮಾಡಿಯಾದರೂ ಹೊಸ ಅಧ್ಯಕ್ಷರ ಪ್ರತಿಷ್ಠಾಪನೆಗೆ ಗುಪ್ತ ಸಮರ ನಡೆಸುತ್ತಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್‌ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ತೀಕ್ಷ್ಣವಾಗಿ ಮಾತನಾಡಿ‌ದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಜೊತೆಗೆ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬ ಕಾರಣಕ್ಕೆ ನಾನು 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದೆ. ಎಷ್ಟೇ ಅಪಮಾನವಾದರೂ, ರಾಜಕೀಯವಾಗಿ ತುಳಿಯಲು ಯತ್ನಿಸಿದರೂ ಪಕ್ಷವನ್ನು ಬಿಡಲಿಲ್ಲ. ನಂತರ ನಾನು ಸೋತರೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಬಿಜೆಪಿ ಪಾಲಿಗೆ ಮರಳುಭೂಮಿಯಾಗಿರುವ ಈ ಪ್ರದೇಶದಲ್ಲಿ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ. ಈಗ ವಿಜಯೇಂದ್ರನನ್ನು ಬದಲಿಸಲು ವರಿಷ್ಠರಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

Advertisements

“ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಎಲ್ಲರ ಅಭಿಪ್ರಾಯ ಕೇಳಬೇಕು. ಆದರೆ ಏಕಚಕ್ರಾಧಿಪತ್ಯ ಎನ್ನುವಂತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನನ್ನ ಮಾತೇ ನಡೆಯಬೇಕೆಂಬಂತೆ ವರ್ತಿಸಿದ್ದಾರೆ. ‘ಜೀ ಹುಜೂರ್‌, ಯೆಸ್‌ ಬಾಸ್‌’ ಎನ್ನುವವರನ್ನು ಪದಾಧಿಕಾರಿಗಳಿಗೆ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಿಗೆ ತಿಳಿಸಿದ್ದೇನೆ. ಎಷ್ಟೇ ನೋವಾದರೂ ನಾನು ಪಕ್ಷದ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಈವರೆಗೂ ಬಂದು ಮಾತನಾಡಿರಲಿಲ್ಲ” ಎಂದರು.

“ವಿಜಯೇಂದ್ರ ಅವರ ಧೋರಣೆ ಅನೇಕ ಮುಖಂಡರಿಗೆ ನೋವು ತಂದಿದೆ. ಕೇಂದ್ರದ ನಾಯಕರು ಅವರಿಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರಲ್ಲಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾರೆಯೇ ಅಥವಾ ಅದಕ್ಕೂ ಮೇಲಿನ ಹುದ್ದೆಯಲ್ಲಿದ್ದಾರೆಯೇ ಗೊತ್ತಿಲ್ಲ. ನಾನು ಎಂಟು ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸತ್‌ ಸದಸ್ಯನಾಗಿದ್ದೇನೆ. ಕಾಂಗ್ರೆಸ್‌ ಆಡಳಿತ ಇದ್ದಾಗಲೂ ನಾನು ಇಲ್ಲಿ ಗೆದ್ದಿದ್ದೇನೆ. ಇವರ ಹಿಂಬಾಲಕರು ನನ್ನನ್ನು ಸೋಲಿಸಲು ಯತ್ನಿಸಿದ್ದರು. ಆದರೆ ಜನರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಇನ್ನು ಸಮಾಧಾನ ಇಲ್ಲ, ಇನ್ನೇನಿದ್ದರೂ ಯುದ್ಧ” ಎಂದು ಎಚ್ಚರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶರ್ಜೀಲ್- ಉಮರ್ ಗೆ ಜಾಮೀನು; ಅಗೋಚರ ಕದಗಳ ಮೇಲೆ ‘ನಾಳೆ ಬಾ’ ಎಂದು ನ್ಯಾಯಾಂಗ ಬರೆದ ಬರೆಹ!

ಭೇಟಿಗೆ ಸಮಯ ನೀಡಿಲ್ಲ

“ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾತನಾಡಲು ಬಿ.ವೈ.ವಿಜಯೇಂದ್ರ ಅವರಿಗೆ ಫೋನ್‌ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಭೇಟಿ ಮಾಡಲು ಸಮಯ ಕೂಡ ನಿಗದಿ ಮಾಡಲಿಲ್ಲ. ಹಿರಿಯ ಮುಖಂಡರು ಕೂಡ ಮಾತನಾಡಲು ಭೇಟಿಗೆ ಅವಕಾಶ ನೀಡುತ್ತಾರೆ. ಆದರೆ ಇಲ್ಲಿ ಸಮಾಲೋಚನೆಯೇ ಇಲ್ಲ. ಇದೇನು ವಿಜಯೇಂದ್ರ ಅವರ ಸ್ವಂತ ಆಸ್ತಿಯೇ? ಬಯಲುಸೀಮೆಯ ಭಾಗಕ್ಕೆ ಬಂದು ಒಂದು ಸೀಟು ಗೆಲ್ಲಲಿ” ಎಂದು ಸವಾಲು ಹಾಕಿದರು.

ನನ್ನನ್ನು ಸಮಾಧಿ ಮಾಡಲು ಪ್ರಯತ್ನ

“ನಾನು ಪಕ್ಷಕ್ಕಾಗಿ ಶ್ರಮಿಸಿದ್ದರೂ ನನ್ನನ್ನು ಸಮಾಧಿ ಮಾಡಲು ಪ್ರಯತ್ನ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲಸ ಮಾಡಿದವರನ್ನು ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಗೋವಿಂದ ಕಾರಜೋಳ ಅವರಿಗೆ ಹೊಡೆಯಲು ಬಂದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುತ್ತಾರೆ. ಯಾವುದೇ ಮುಖಂಡರಿಗೆ ಇವರು ಗೌರವ ನೀಡುತ್ತಿಲ್ಲ” ಎಂದು ದೂರಿದರು.

ಪಕ್ಷ ವಿರೋಧಿಗಳಿಗೆ ಸ್ಥಾನ

“ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಉತ್ತಮವಾಗಿ ನಡೆದಿದೆ. ನಮ್ಮ ಕಾರ್ಯಕರ್ತರು 58 ಸಾವಿರ ಜನರನ್ನು ನೋಂದಣಿ ಮಾಡಿಸಿದ್ದಾರೆ. ಪಕ್ಷಕ್ಕಾಗಿ ಅಹರ್ನಿಶಿಯಾಗಿ ದುಡಿದವರನ್ನು ಕೈ ಬಿಟ್ಟು, ವಿರುದ್ಧವಾಗಿ ಕೆಲಸ ಮಾಡಿದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಕೋರ್‌ ಕಮಿಟಿ ಸಭೆಯಲ್ಲಿ ಚಿಕ್ಕಬಳ್ಳಾಪುರದ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿಲ್ಲ. 13 ಜಿಲ್ಲೆಗಳ ಪದಾಧಿಕಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ಪಟ್ಟಿ ಪ್ರಕಟ ಮಾಡಲಾಗಿದೆ. ನಾನು ಹೇಳಿದವರನ್ನು ಆಯ್ಕೆ ಮಾಡಿಲ್ಲ ಎಂದಾದರೆ ನಾನು ಕಾರ್ಯಕರ್ತರಿಗೆ ಏನೆಂದು ಉತ್ತರ ನೀಡಲಿ” ಎಂದು ಪ್ರಶ್ನೆ ಮಾಡಿದರು.

ವರಿಷ್ಠರಿಗೆ ತಿಳಿಸುವೆ

“ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬಳಿಗೆ ಹೋಗಿ ಎಲ್ಲವನ್ನೂ ಹೇಳುತ್ತೇನೆ. ವಿಜಯೇಂದ್ರ ಯಾವ ರೀತಿ ಪಕ್ಷ ಸಂಘಟಿಸುತ್ತಿದ್ದಾರೆ ಎಂದು ವಾಸ್ತವಾಂಶ ತಿಳಿಸುತ್ತೇನೆ. ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವವೇ ಬೇರೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ತಂದೆಯವರ ಯಾವುದೇ ಗುಣ ವಿಜಯೇಂದ್ರ ಅವರಿಗೆ ಬಂದಿಲ್ಲ. ನಾನು ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ” ಎಂದರು.

“ನಾನು ಬಿಜೆಪಿಗೆ ಬಂದಿದ್ದಕ್ಕೆ ನನಗೆ ಈ ರೀತಿಯ ಪರಿಸ್ಥಿತಿಯನ್ನು ತಂದಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ನಡೆದಿದೆ. ಅನೇಕರು ಆ ಬಗ್ಗೆ ಮಾತಾಡುತ್ತಿಲ್ಲ. ವಿಜಯೇಂದ್ರ ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಇವರ ಅಹಂಕಾರಕ್ಕೆ, ಧೋರಣೆಗೆ ನನ್ನ ಧಿಕ್ಕಾರ. ಇವರ ಧೋರಣೆಯನ್ನು ಸರಿಪಡಿಸಿ, ಇಲ್ಲವಾದರೆ ಇವರನ್ನೇ ಬದಲಾಯಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡುತ್ತೇನೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X