ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಬೆನ್ನಲ್ಲೇ ಚಿಕ್ಕಬಳ್ಳಾಪುರ ಬಿಜೆಪಿ ಮುಖಂಡರಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಘಟಕ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷರ ಹೆಸರನ್ನು ಬುಧವಾರ ಪ್ರಕಟಗೊಳಿಸಿದ್ದು, ನೂತನ ಜಿಲ್ಲಾಧ್ಯಕ್ಷರಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಸಂದೀಪ್ ಬಿ ರೆಡ್ಡಿಯವರನ್ನು ನೇಮಕ ಮಾಡಿದೆ. ಬಿಜೆಪಿ ಜಿಲ್ಲಾಧ್ಯಕ್ಷರ ರೇಸ್‌ನಲ್ಲಿ ಸಂಸದರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮರಳುಕುಂಟೆ ಕೃಷ್ಣಮೂರ್ತಿ ಪ್ರಬಲ ಆಕಾಂಕ್ಷಿಯಾಗಿದ್ದರು. ಜತೆಗೆ ಪ್ರತಾಪ್, ಸೀಕಲ್ ರಾಮಚಂದ್ರ ಗೌಡ, ಸಂದೀಪ್ ಹಾಗೂ ಎಸ್‌ಆರ್‌ಎಸ್ ದೇವರಾಜು ಸಹ ರೇಸ್‌ನಲ್ಲಿ ಇದ್ದರು. ಆದರೆ, ಇವರೆಲ್ಲರಿಗೂ ಸೆಡ್ಡುಹೊಡೆದು ಸಂದೀಪ್ ಬಿ ರೆಡ್ಡಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯ ಸಮಿತಿ ನೇಮಿಸಿದೆ.

ಜಿಲ್ಲಾಧ್ಯಕ್ಷರ ನೇಮಕಾತಿಯ ಬಳಿಕ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಇತರೆ ಆಕಾಂಕ್ಷಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಖಂಡಿಸಿ ಬಿಜೆಪಿ ಕಚೇರಿಯಲ್ಲೇ ಧಿಕ್ಕಾರ ಕೂಗಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮರಳುಕುಂಟೆ ಕೃಷ್ಣಮೂರ್ತಿ ಹಾಗೂ ಅವರ ಬಣ ನೂತನ ಜಿಲ್ಲಾಧ್ಯಕ್ಷರ ಸುದ್ದಿಗೋಷ್ಠಿಯ ನಡುವೆಯೇ ಬಿಜೆಪಿ ಕಚೇರಿಗೆ ನುಗ್ಗಿ ಧಿಕ್ಕಾರ ಕೂಗಿದ್ದಾರೆ.
ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಎಸ್‌ಆರ್‌ಎಸ್ ದೇವರಾಜು, ನಾನೂ ಸಹ ಹತ್ತಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದಿದ್ದೇನೆ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನೂ ಸಹ ಪ್ರಬಲ ಆಕಾಂಕ್ಷಿ. ಹಿರಿತನದ ಆಧಾರದಲ್ಲಿ ಜಿಲ್ಲಾಧ್ಯಕ್ಷ ಪಟ್ಟ ನನಗೆ ಸಿಗಬೇಕು. ಹಿಂದುಳಿದ ಸಮುದಾಯದವನೆಂಬ ಕಾರಣಕ್ಕೆ ನನ್ನನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ ಮಾಡಿದ್ದಾರೆ ಎಂದು ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಅಸಮಾಧಾನ ಹೊರಹಾಕಿದ್ದರು.

ವಿಜಯೇಂದ್ರ ವಿರುದ್ಧ ಸಂಸದ ಸುಧಾಕರ್ ವಾಗ್ದಾಳಿ :
ನೂತನ ಜಿಲ್ಲಾಧ್ಯಕ್ಷರ ನೇಮಕದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಂಸದ ಡಾ.ಕೆ.ಸುಧಾಕರ್, ನನ್ನನ್ನು ರಾಜಕೀಯವಾಗಿ ಮುಗಿಸಲು ವಿಜಯೇಂದ್ರ ಯೋಜನೆ ರೂಪಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನನ್ನ ರಾಜಕೀಯವನ್ನೇ ಪಣಕ್ಕಿಟ್ಟು ಬಿಜೆಪಿಗೆ ಬಂದೆ. ಹಾಗಿದ್ದರೂ ವಿಜಯೇಂದ್ರ ನನ್ನ ಕ್ಷೇತ್ರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಈ ವಿಚಾರವನ್ನು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ತಿಳಿಸಿದ್ದೇನೆ. ಇವರ ನಡೆಯಿಂದ ನಮ್ಮ ಮುಖಂಡರಿಗೆ ನೋವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಯಾರನ್ನೂ ವಿಶ್ವಾಸಕ್ಕೆ ಪಡೆಯುವ ಗುಣ ಇವರಿಗೆ ಇಲ್ಲ. ವಿಜಯೇಂದ್ರ ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ ಎಂಬ ಭಾವನೆಯಲ್ಲಿದ್ದಾರೆ. ದರ್ಪ, ಅಹಂಕಾರ ಹೆಚ್ಚಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಶರ್ಜೀಲ್- ಉಮರ್ ಗೆ ಜಾಮೀನು; ಅಗೋಚರ ಕದಗಳ ಮೇಲೆ ‘ನಾಳೆ ಬಾ’ ಎಂದು ನ್ಯಾಯಾಂಗ ಬರೆದ ಬರೆಹ!
ಚುನಾವಣೆಯಲ್ಲಿ ನನ್ನ ವಿರುದ್ದ ಕೆಲಸ ಮಾಡಿದವರನ್ನೇ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಯಾವ ಹಿರಿಯರೂ ನಿಮಗೆ ಬೇಕಾಗಿಲ್ಲ. ಭಿನ್ನಾಭಿಪ್ರಾಯಗಳಿದ್ದರೂ ಮಾಧ್ಯಮದ ಮುಂದೆ ಹೋಗಿರಲಿಲ್ಲ. ಆದರೀಗ ಅನಿವಾರ್ಯವಾಗಿ ಬಂದಿದ್ದೇನೆ. ತಾಕತ್ತಿದ್ದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಂದು ಪಕ್ಷ ಕಟ್ಟಲಿ ಎಂದು ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.