ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ಮತ್ತು ತತ್ವ ಪದಕಾರರ ವೈಚಾರಿಕ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡಿದವರು ಖ್ಯಾತ ಬರಹಗಾರ ಶಾಂತರಸರು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ʼಶಾಂತರಸರ ಬದುಕು ಮತ್ತು ಸಾಹಿತ್ಯ ಜನ್ಮಶತಮನೋತ್ಸವʼ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಶರಣರ ಅನುಭಾವ ಮತ್ತು ಆಧ್ಯಾತ್ಮಿಕ ಪರಂಪರೆ ತತ್ವಪದಕಾರರಲ್ಲಿ ಮುಂದುವರಿದಿರುವುದನ್ನು ಶಾಂತರಸರು ಗುರುತಿಸಿ ಅದನ್ನು ಪ್ರಚಲಿತಕ್ಕೆ ತಂದರು. ಅವರು ಬಸವ ತತ್ವದ ಪ್ರತಿಪಾದಕರಾಗಿದ್ದರೂ ಸಹ ಎಲ್ಲ ರೀತಿಯ ಸಾಮಾಜಿಕ ಬದಲಾವಣೆಗಳು ಬಸವಣ್ಣನವರ ಕಾಲದಲ್ಲೇ ಆಯಿತು ಎಂಬ ಕುರುಡು ನಂಬಿಕೆಯನ್ನು ಒಪ್ಪುತ್ತಿರಲಿಲ್ಲ. ಬಸವಣ್ಣನವರ ಪೂರ್ವದಲ್ಲಿ ಮತ್ತು ನಂತರದಲ್ಲಿ ಶರಣ ಚಳುವಳಿಗೆ ಶ್ರಮಿಸಿದ ಹಲವಾರು ಅಜ್ಞಾತ, ಅನಾಮಧೇಯ ಶರಣರನ್ನು, ತತ್ವಪದಕಾರರನ್ನು ಮುನ್ನಲೆಗೆ ತರುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜನ ಸಾಮಾನ್ಯರ ಪರಿಪಾಟಲುಗಳನ್ನು ಸರಳ ಭಾಷೆ ಮೂಲಕ ಸಾಹಿತ್ಯಕ್ಕೆ ಅಳವಡಿಸಿದ ಖ್ಯಾತಿ ಶಾಂತರಸರಿಗೆ ಸಲ್ಲಬೇಕು” ಎಂದು ಸ್ಮರಿಸಿದರು.
ಸಾಹಿತ್ಯದ ಜೊತೆಗೆ ಅವರು ಸಂಗೀತ ಕಲಾ ಪ್ರಕಾರದ ಬೆಳವಣಿಗೆಗೂ ಒತ್ತುಕೊಟ್ಟು, ಗುಲ್ಬರ್ಗಾ, ಬೀದರ್ ಮತ್ತು ರಾಯಚೂರು ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಉರ್ದು ಭಾಷೆಯನ್ನು ಸಮುದಾಯದ ಆಚೆಗೆ ತಂದು ಆ ಭಾಷೆಗೆ ಕವಿ ಪರಂಪರೆ ಮತ್ತು ಸಾಹಿತ್ಯ ಪರಂಪರೆಯನ್ನು ಸೃಷ್ಟಿಸುವಲ್ಲಿ ಕೊಂಡಿಯಾಗಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶದ ಜನರು ಆಳುವ ವರ್ಗದ ಶೋಷಣೆಗೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುವ ಸಂದರ್ಭದಲ್ಲಿ ಅಮಾಯಕರ ಕಣ್ಣು ತೆರೆಸುವ ಕಾರ್ಯ ಮಾಡಿದರು” ಎಂದರು.
ಕನ್ನಡ ವಿವಿಯ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ಮಾತನಾಡಿ, “ಶಾಂತರಸರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದ್ದಾರೆ. ಕನ್ನಡ ಕಾವ್ಯ ಲೋಕದಲ್ಲಿ ಘಜಲ್ ಪರಂಪರೆಗೆ ಅಡಿಪಾಯ ಹಾಕಿದವರು ಶಾಂತರಸರು” ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಸವರಾಜ ಸಾದರ ಮಾತನಾಡಿ, “ಶಾಂತರಸರ ವ್ಯಕ್ತಿತ್ವ ತುಂಬಾ ವಿಶಿಷ್ಟವಾದುದು. ಅವರು ಹೆಸರಿಗೆ ತಕ್ಕಂತೆ ಶಾಂತವಾಗಿಯೂ ಇದ್ದರು. ಕೆಲವೊಮ್ಮೆ ಕ್ರಾಂತಿಕಾರಿಯಾಗುತ್ತಿದ್ದರು. ಪ್ರತಿಭಟಿಸುವ ಗುಣವನ್ನು ಚಿಕ್ಕಂದಿನಲ್ಲೇ ರೂಢಿಸಿಕೊಂಡಿದ್ದವರು. ಶಾಂತರಸರು ಕಾವ್ಯ, ಘಜಲ್, ಕಾದಂಬರಿ, ಗ್ರಂಥ ಸಂಪಾದನೆ, ಅನುವಾದ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೆಲಸ ಮಾಡಿದರು. ಬಂಡಾಯವನ್ನು ಸಾಹಿತ್ಯಕ್ಕೆ ಅಳವಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಹಿರಿಯ ಸಂಶೋಧಕ ಡಾ. ಕೆ ರವೀಂದ್ರನಾಥರಿಗೆ ಒಲಿದ ʼಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿʼ
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ, ಡಾ. ಅಮರೇಶ ನುಗಡೋಣ, ಡಾ. ಕೆ ರವೀಂದ್ರನಾಥ, ಭಾಗ್ಯಜ್ಯೋತಿ ಹಿರೇಮಠ, ಸಿ ಎಸ್ ಭೀಮರಾಯ, ಪ್ರಭು ಖಾನಾಪುರೆ, ಲೇಖಕಿ ಭಾರತಿ ಮೋಹನ ಕೋಟಿ, ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ, ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.
