ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳದ ವೇಳೆ ಕಾಲ್ತುಳಿತ ಸಂಭವಿಸಿ ಸುಮಾರು 40 ಜನರು ಸಾವನ್ನಪ್ಪಿ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ. ಇದಾದ ಒಂದು ದಿನದ ಬಳಿಕ ಈ ಕಾಲ್ತುಳಿತಕ್ಕೆ ಉತ್ತರ ಪ್ರದೇಶ ಸರ್ಕಾರದ ಲೋಪಗಳು, ನಿರ್ಲಕ್ಷ್ಯ ಮತ್ತು ಆಡಳಿತದ ಸಂಪೂರ್ಣ ವೈಫಲ್ಯ ಕಾರಣ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ವಕೀಲ ವಿಶಾಲ್ ತಿವಾರಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದಾರೆ. ಹಾಗೆಯೇ ಅರ್ಜಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಿಂದ ಕುಂಭಮೇಳಕ್ಕೆ ಪ್ರಯಾಣಿಸುವ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಲಾಗಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳದಲ್ಲಿ ಕಾಲ್ತುಳಿತ; ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಪಿಐಎಲ್ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಿವಾರಿ, ತುರ್ತು ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ತಮ್ಮ ಮನವಿಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.
“ಮಹಾ ಕುಂಭಮೇಳಕ್ಕೆ ಬರುವ ಭಕ್ತರ ಸುರಕ್ಷತೆಗಾಗಿ ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಲು ನಿರ್ದೇಶನಗಳನ್ನು ನೀಡಬೇಕು. ಎಲ್ಲಾ ರಾಜ್ಯಗಳು ಮಹಾ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ಸರಿಯಾದ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಈ ಕೇಂದ್ರಗಳು ತಮ್ಮ ರಾಜ್ಯಗಳಿಂದ ಬರುವ ಜನರಿಗೆ ಸುರಕ್ಷತಾ ಕ್ರಮಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಮೂಲಭೂತ ಮಾಹಿತಿಯನ್ನು ಒದಗಿಸಬೇಕು. ತುರ್ತು ಸಂದರ್ಭದಲ್ಲಿ, ಈ ಕೇಂದ್ರಗಳು ಸಹಾಯ ಮಾಡಲು ಸಿದ್ಧರಿರಬೇಕು” ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ.
ವಿವಿಧ ಭಾಷಾ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜನರು ತುರ್ತು ಸಂದರ್ಭದಲ್ಲಿ ಸಹಾಯವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವಂತೆ ವಿವಿಧ ಭಾಷೆಗಳಲ್ಲಿ ಪ್ರಕಟಣೆಗಳು ಮತ್ತು ನಿರ್ದೇಶನಗಳು, ರಸ್ತೆಗಳು ಇತ್ಯಾದಿಗಳನ್ನು ತೋರಿಸುವ ಪ್ರದರ್ಶನ ಫಲಕಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಕೂಡಾ ತಿವಾರಿ ವಾದಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ ಸೇರಿ ಧಾರ್ಮಿಕ ಕೇಂದ್ರಗಳಲ್ಲಾದ ಭೀಕರ ದುರಂತಗಳು; ನೂರಾರು ಭಕ್ತರ ಬಲಿ
“ಎಲ್ಲಾ ರಾಜ್ಯ ಸರ್ಕಾರಗಳು, ಉತ್ತರ ಪ್ರದೇಶ ಸರ್ಕಾರದೊಂದಿಗೆ ಸಮನ್ವಯದೊಂದಿಗೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ವೈದ್ಯರು ಮತ್ತು ದಾದಿಯರು ಸೇರಿದಂತೆ ಸಣ್ಣ ವೈದ್ಯಕೀಯ ತಂಡಗಳನ್ನು ಪ್ರಯಾಗರಾಜ್ ನಡೆಯುವ ಮಹಾ ಕುಂಭಮೇಳಕ್ಕೆ ನಿಯೋಜಿಸಬೇಕು” ಎಂದು ಪಿಐಎಲ್‌ನಲ್ಲಿ ಸೇರಿಸಲಾಗಿದೆ.
ವಿಐಪಿ ಸಂಚಾರಗಳು ಸಾಮಾನ್ಯ ಭಕ್ತರ ಸುರಕ್ಷತೆಗೆ ಅಡ್ಡಿಯಾಗಬಾರದು ಅಥವಾ ರಾಜಿ ಮಾಡಿಕೊಳ್ಳಬಾರದು ಮತ್ತು ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಗರಿಷ್ಠ ಸ್ಥಳಾವಕಾಶವನ್ನು ಒದಗಿಸಬೇಕು ಎಂದು ಕೂಡಾ ತಿವಾರಿ ಹೇಳಿದ್ದಾರೆ.
ಹಾಗೆಯೇ ಕಾಲ್ತುಳಿತ ಘಟನೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಮತ್ತು ಅಧಿಕಾರಿಗಳು ಸೇರಿದಂತೆ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪಿಐಎಲ್ ಕೋರಿದೆ.
ಸರ್ಕಾರಿ ಅಧಿಕಾರಿಗಳ ಲೋಪ, ನಿರ್ಲಕ್ಷ್ಯ ಮತ್ತು ಆಡಳಿತದ ಸಂಪೂರ್ಣ ವೈಫಲ್ಯದಿಂದಾಗಿ ಈ ಕಾಲ್ತುಳಿತ ಉಂಟಾಗಿದೆ.
ಮಹಾ ಕುಂಭಮೇಳವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ತಿವಾರಿ ಆರೋಪಿಸಿದ್ದಾರೆ. ಹಾಗೆಯೇ ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಆದರೆ ಹಿಂದಿನ ಘಟನೆಯಿಂದ ಯಾವುದೇ ಪಾಠವನ್ನು ಕಲಿತಿಲ್ಲ ಎಂದು ಟೀಕಿಸಿದರು.
