ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಕಳೆದ ನಾಲ್ಕು ದಿನಗಳಿಂದ ಕಿತ್ತಾಟ ನಡೆಯುತ್ತಿದೆ. ಹುದ್ದೆಯಿಂದ ಅಮಾನತಾಗಿ, ಅಮಾನತು ಆದೇಶಕ್ಕೆ ತಡೆಯಾಜ್ಞೆ ತಂದಿರುವ ತಿಪ್ಪಣ್ಣ ಸರಸಗಿ ಮತ್ತು ಹುದ್ದೆಗೆ ಹೊಸದಾಗಿ ನಿಯೋಜನೆಯಾಗಿದ್ದ ಪಿ.ವೈ ಶೆಟ್ಟಪ್ಪನವರ ನಡುವೆ ಹುದ್ದೆಗಾಗಿ ಕಿತ್ತಾಟ ನಡೆದಿದೆ. ಆದರೆ, ಈವರೆಗೆ ಪರಿಹಾರ ದೊರೆತಿಲ್ಲ.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾಗಿದ್ದ ತಿಪ್ಪಣ್ಣ ಸರಸಗಿ ಅವರನ್ನು ಕರ್ತವ್ಯಲೋಪದ ಆರೋಪಿದ ಮೇಲೆ 2024ರ ಅಕ್ಟೋಬರ್ 3ರಂದು ಅಮಾನತು ಮಾಡಲಾಗಿತ್ತು. ಅವರ ಅಮಾನತಿನಿಂದ ತೆರವಾದ ಹುದ್ದೆಗೆ ಪಿ.ವೈ ಶೆಟ್ಟಪ್ಪ ಅವರನ್ನು ನಿಯೋಜನೆ ಮಾಡಲಾಗಿತ್ತು.
ಆದರೆ, ತಮ್ಮನ್ನು ಅಮಾನತು ಮಾಡಿರುವುದು ಮತ್ತು ತಮ್ಮ ಹುದ್ದೆಗೆ ಬೇರೆಯವರನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿ ತಿಪ್ಪಣ್ಣ ಅವರು ಬೆಳಗಾವಿ ‘ಕೆಎಟಿ’ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು 2025ರ ಜನವರಿ 20ರಂದು ವಿಚಾರಣೆ ನಡೆಸಿದ ಕೆಎಟಿ, ಅಮಾನತು ಆದೇಶವನ್ನು ರದ್ದುಪಡಿಸಿತ್ತು. ಮಾತ್ರವಲ್ಲದೆ, ಬೇರೆಯವರನ್ನು ನಿಯೋಜಿಸಿರುವುದು ತಪ್ಪು ಎಂದು ತೀರ್ಪು ನೀಡಿತ್ತು.
ಕೆಎಟಿ ತೀರ್ಪು ಬಂದ ಬೆನ್ನಲ್ಲೇ, ತಿಪ್ಪಣ್ಣ ಕರ್ತವ್ಯಕ್ಕೆ ಹಾಜರಾಗಲು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕಚೇರಿಗೆ ಬಂದಿದ್ದಾರೆ. ಆದರೆ, ಅವರಿಗೆ ಅಧಿಕಾರ ಹಸ್ತಾಂತರಿಸಲು ಶೆಟ್ಟಪ್ಪ ನಿರಾಕರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಶಸ್ತ್ರಾಸ್ತ್ರ ಖರೀದಿ ಹೆಚ್ಚಿಸುವಂತೆ ಮೋದಿಗೆ ತಾಕೀತು: ಭಾರತದ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆಯೇ ಟ್ರಂಪ್?
“ತಿಪ್ಪಣ್ಣ ಅವರ ಅಮಾನತು ಆದೇಶ ರದ್ದಾಗಿರಬಹುದು. ಆದರೆ, ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಮತ್ತು ತಾವು ಎಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಸರ್ಕಾರದಿಂದ ಯಾವುದೇ ಸೂಚನೆ, ಆದೇಶ ಬಂದಿಲ್ಲ. ಸರ್ಕಾರದಿಂದ ಆದೇಶ ಬಾರದೆ ಅಧಿಕಾರ ಹಸ್ತಾಂತರಿಸಲು ಸಾಧ್ಯವಿಲ್ಲ. ಸರ್ಕಾರ ಆದೇಶ ನೀಡಿದರೆ ತಿಪ್ಪಣ್ಣಗೆ ಅಧಿಕಾರ ವಹಿಸಿಕೊಡುತ್ತೇನೆ” ಎಂದು ಶೆಟ್ಟಪ್ಪ ವಾದಿಸಿದ್ದಾರೆ. ತಮ್ಮ ಕರ್ತವ್ಯ ಮುಂದುವರೆಸಿದ್ದಾರೆ.
ಆದರೆ, ನಾಲ್ಕು ದಿನಗಳಿಂದ ಕಚೇರಿಗೆ ಬಂದು, ವಾಪಸ್ ಹೋಗುತ್ತಿದ್ದ ತಿಪ್ಪಣ್ಣ, ಇದೀಗ ಏಕಾಏಕಿ ಉಪನಿರ್ದೇಶಕರ ಕಚೇರಿಗೆ ನುಗ್ಗಿದ್ದು, ಉಪನಿರ್ದೇಶಕರ ಸೀಟಿನ ಮೇಲೆ ಕುಳಿತುಕೊಂಡಿದ್ದಾರೆ. ಹೀಗಾಗಿ, ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.