ಗಾಂಧಿ ಕೊಂದ ಗೋಡ್ಸೆ, ಅವರ ಗುರು ಸಾವರ್ಕರ್ ಈಗ ಬಿಜೆಪಿಯ ಹಿಂದೂ ಸಂಕೇತಗಳು. ಇವರು ಪಾಲಿಸುವ ಸನಾತನ ಧರ್ಮಕ್ಕೆ, ಅದರಿಂದಾಗುವ ಕಾಲ್ತುಳಿತಕ್ಕೆ ಭಕ್ತರು ಬಲಿಯಾಗುತ್ತಿರುವುದು, ಬುದ್ಧಿವಂತರು ಬಾಯಿ ಮುಚ್ಚಿಕೊಂಡು ಕೂತಿರುವುದು- ಪ್ರಶ್ನೆ ಮತ್ತು ಪ್ರತಿಭಟನೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಗೆ ಮಾಡುವ ಮೋಸ ಅಲ್ಲವೇ?
‘ಮೌನಿ ಅಮಾವಾಸ್ಯೆ’ಯಂದು ಮಹಾ ಕುಂಭಮೇಳದ ಸಂಗಮದಲ್ಲಿ ಬುಧವಾರ ಬೆಳಗಿನಜಾವ ಪುಣ್ಯಸ್ನಾನ ಮಾಡಲು ಭಕ್ತರು ಮುಗಿಬಿದ್ದ ಕಾರಣ, ನೂಕುನುಗ್ಗಲುಂಟಾಗಿದೆ. ಹೆಂಗಸರು, ಮಕ್ಕಳು ಎನ್ನದೆ ತಳ್ಳಾಟ-ನೂಕಾಟದಲ್ಲಿ ಕನಿಷ್ಠ 30 ಮಂದಿ ಸಾವನಪ್ಪಿರುವ ಸುದ್ದಿ ಬಂದಿದೆ. ಅದರಲ್ಲಿ ಕರ್ನಾಟಕದ ನಾಲ್ವರ ಸಾವು ಕೂಡ ಸೇರಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮೃತರ ಮತ್ತು ಗಾಯಾಳುಗಳ ಸಂಖ್ಯೆ ಅಂದಾಜಿಗೂ ನಿಲುಕದು ಎಂಬ ಅಭಿಪ್ರಾಯವೂ ಇದೆ.
ಮುಂಜಾನೆ ಮೂರು ಗಂಟೆಯ ಬ್ರಹ್ಮ ಮುಹೂರ್ತದಲ್ಲಿ ನೀರಿನಲ್ಲಿ ಸ್ನಾನ ಮಾಡಲೆಂದು ಅಖಾಡ ಕ್ಷೇತ್ರದಲ್ಲಿ ಲಕ್ಷಾಂತರ ಮಂದಿ ಮಲಗಿದ್ದರು. ಮುಹೂರ್ತದ ಸಮಯವಾಗುತ್ತಿದ್ದಂತೆ ಅಷ್ಟೂ ಜನ ಹಿಂದು ಮುಂದು ನೋಡದೆ ಒಮ್ಮೆಲೆ ನುಗ್ಗಿದರು. ಅಡೆಗಡೆಗಳನ್ನು ನೆಲಕ್ಕುರುಳಿಸಿ, ಕೆಳಗೆ ಬಿದ್ದವರನ್ನು, ಕಾಲಡಿಗೆ ಸಿಕ್ಕವರನ್ನು ತುಳಿದುಕೊಂಡು ಓಡಿದರು. ತಿರುಗಿ ನೋಡುವುದರೊಳಗೆ ಮಹಾ ದುರಂತ ಸಂಭವಿಸಿಯಾಗಿತ್ತು.
ಮೊದಲಿಗೆ ಕಾಲ್ತುಳಿತದಿಂದ ಉಂಟಾದ ಸಾವುಗಳತ್ತ ಗಮನ ಹರಿಸುವುದಾದರೆ, ಸತ್ತವರೆಲ್ಲ ದೇಶದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು. ಕಷ್ಟಪಟ್ಟು ದುಡಿದ ದುಡ್ಡಿನಿಂದ ರೈಲು, ಕಾರು, ಬಸ್‌ಗಳನ್ನು ಬಳಸಿ ಬಂದಿದ್ದ ಮಧ್ಯಮವರ್ಗದವರು. ಮೃತರ ಮನೆಯ ಸ್ಥಿತಿ, ಅವರ ನೋವು ಮತ್ತು ನಿಟ್ಟುಸಿರು ಹೇಳತೀರದು. ಅವರ ದುಃಖವನ್ನು ಯಾವ ದೇವರು ಕೂಡ ಭರಿಸಲಾರ; ಸಂತೈಸಿ ಸಮಾಧಾನ ತರಲಾರ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಶರ್ಜೀಲ್- ಉಮರ್ ಗೆ ಜಾಮೀನು; ಅಗೋಚರ ಕದಗಳ ಮೇಲೆ ‘ನಾಳೆ ಬಾ’ ಎಂದು ನ್ಯಾಯಾಂಗ ಬರೆದ ಬರೆಹ!
ಆದರೆ, ಜೀವಂತವಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲಿಗೆ ಮೃತರ ಕುಟುಂಬಗಳನ್ನು ಸಂತೈಸಬೇಕು, ಪರಿಹಾರ ನೀಡಬೇಕು, ವ್ಯವಸ್ಥೆಯಲ್ಲಾದ ಲೋಪದೋಷಕ್ಕೆ ಕ್ಷಮೆ ಕೇಳಬೇಕು. ಕ್ಷಮೆ ಕೇಳುವ ಮಾತಿರಲಿ, ಕಾಲ್ತುಳಿತದಲ್ಲಿ ಸಾವಿಗೀಡಾದವರನ್ನು ‘ಪುಣ್ಯಾತ್ಮರು’ ಎನ್ನುವ ಮೂಲಕ ಅವರನ್ನು ‘ಸ್ವರ್ಗ’ಕ್ಕೆ ಕಳಿಸಿದ್ದಾರೆ. ಆ ಮೂಲಕ ಸನಾತನ ಗರ್ವವನ್ನು ಪ್ರದರ್ಶಿಸಿದ್ದಾರೆ.
ಅಪರೂಪದ ಮಹಾ ಕುಂಭಮೇಳವೆಂಬುದು ಯೋಗಿಗೂ ಗೊತ್ತು. ಇಡೀ ದೇಶದ ಜನ ಅಲ್ಲಿರುತ್ತಾರೆಂಬುದೂ ಗೊತ್ತು. ಗೊತ್ತಿದ್ದೂ ಶ್ರೀಮಂತರಿಗೆ ವಿಶೇಷ ವ್ಯವಸ್ಥೆ, ಭದ್ರತೆ ಒದಗಿಸಿದ ಯೋಗಿ ಸರ್ಕಾರ, ಕೋಟ್ಯಂತರ ಬಡ ಭಕ್ತರನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಂಡಿದೆ. ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ಆಳುವ ಸರ್ಕಾರ ಸಂಪೂರ್ಣವಾಗಿ ಸೋತಿದೆ. ಸಂಗಮದಲ್ಲಿ ಸ್ನಾನ ಮಾಡಲು ಹೋಗಿದ್ದವರೇ, ಕಣ್ಣಾರೆ ಕಂಡವರೇ ಅವ್ಯವಸ್ಥೆಯ ಕತೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹಾಗಾಗಿ ಕುಂಭಮೇಳದ ದುರಂತದಲ್ಲಿ ಖಾವಿದಾರಿ ಯೋಗಿಯ ಪಾಲಿದೆ. ಆ ಸಾವಿನ ಹೊಣೆಯನ್ನು ಅವರು ಹೊತ್ತುಕೊಳ್ಳಲೇಬೇಕಿದೆ.
1954ರಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಇಂಥದ್ದೇ ಮೌನಿ ಅಮಾವಾಸ್ಯೆಯ ಪುಣ್ಯಸ್ನಾನದ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಜನರ ಸಾವು ಸಂಭವಿಸಿತ್ತು. ಈ ದುರಂತದ ಸಾವುಗಳನ್ನು ಪ್ರಧಾನಿ ಮೋದಿಯವರು 2019ರಲ್ಲಿ ನೆನಪು ಮಾಡಿಕೊಂಡಿದ್ದರು. ಆ ದುರಂತವನ್ನು ಅಂದಿನ ಪ್ರಧಾನಿ ನೆಹರೂ ಅವರ ತಲೆಗೆ ಕಟ್ಟಿ, ಕೆಟ್ಟ ಆಡಳಿತದ ಫಲ ಎಂದು ಮೂದಲಿಸಿದ್ದರು. ಆದರೆ, ಅಂಥದ್ದೇ ಕಾಲ್ತುಳಿತ, ದುರಂತ ತಮ್ಮದೇ ಡಬಲ್ ಎಂಜಿನ್ ಸರ್ಕಾರದಲ್ಲಿ ಸಂಭವಿಸಿರುವಾಗ ಬಾಯಿಗೆ ಬೆಣೆ ತುರುಕಿಕೊಂಡು ಕೂತಿದ್ದಾರೆ.
ಯೋಗಿಯ ದುಂಡಾವರ್ತನೆ ಮತ್ತು ಮೋದಿಯ ಮೌನವನ್ನು ಸಮರ್ಥಿಸಿಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ಸಚಿವ ಸಂಜಯ್ ನಿಶಾದ್, ‘ಇಂಥ ದೊಡ್ಡ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ ಸೇರಿದಾಗ ಇಂತಹ ಸಣ್ಣ ಘಟನೆ ನಡೆದಿರುವುದು ಸರ್ವೇಸಾಮಾನ್ಯ’ ಎಂದಿರುವುದು, ಭಕ್ತರ ಬಗೆಗಿರುವ ಇವರ ಕಾಳಜಿ-ಕಳಕಳಿಯನ್ನು ಬಯಲುಗೊಳಿಸುತ್ತಿದೆ. ಅಧಿಕಾರಸ್ಥರ ಸ್ವಾರ್ಥ ಮತ್ತು ನೀಚತನವನ್ನು ತೆರೆದು ತೋರುತ್ತಿದೆ. ಬಿಜೆಪಿಯ ಹಿಂದೂ ಭಕ್ತಿಯ ಬೂಟಾಟಿಕೆಯನ್ನು ಬಯಲು ಮಾಡುತ್ತಿದೆ.
ಈ ದೇಶ ಕಂಡ ನಿಜವಾದ ಹಿಂದೂ ಮಹಾತ್ಮಾ ಗಾಂಧೀಜಿ. ಗಾಂಧಿ ಎಂದೂ ದೇವಾಲಯಗಳಿಗೆ ಹೋದವರಲ್ಲ. ಅರ್ಚಕರು, ಪುರೋಹಿತರನ್ನು ಪುಸಲಾಯಿಸಲಿಲ್ಲ. ಕಂದಾಚಾರ ಮತ್ತು ಮೂಢನಂಬಿಕೆಯನ್ನು ಸಹಿಸುತ್ತಿರಲಿಲ್ಲ. ನಮ್ಮೆಲ್ಲರಂತೆ ಹುಟ್ಟಿದ, ಓಡಾಡಿದ ಗಾಂಧಿ ಜಾತೀಯತೆ, ವರ್ಣಾಶ್ರಮ ಧರ್ಮಗಳಿಗೆ ಒಳಗಾಗಿಯೇ ಅವನ್ನೆಲ್ಲ ಸ್ಫೋಟಿಸಿ ಹೊರಬಂದವರು. ಅವರು ಗಂಗಾಜಲವನ್ನು ಪವಿತ್ರವೆಂದು ಹೇಳಲಿಲ್ಲ. ಹಿಂದುತ್ವವನ್ನು ಎಂದೂ ಪ್ರದರ್ಶನಕ್ಕಿಡಲಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಹಾ ಕುಂಭಮೇಳ ಯಾರಿಗಾಗಿ, ಯಾತಕ್ಕಾಗಿ?
ಅಂತಹ ಅಪ್ಪಟ ಹಿಂದೂವನ್ನು ಕೊಲ್ಲಬಲ್ಲಷ್ಟು ಕ್ರೌರ್ಯವಿರುವ ಹಿಂದೂಧರ್ಮ ನಮಗೆ ಶಾಂತಿ-ಸಹಬಾಳ್ವೆ ತರಬಲ್ಲದೇ; ಎಲ್ಲ ಮಾನವರ ಆಳಕ್ಕೆ ಹೋಗಿ ಸ್ಪಂದಿಸಿದ ಗಾಂಧೀಜಿಯ ಹಿಂದೂಧರ್ಮ ಅದನ್ನು ತರಬಲ್ಲದೇ ಎಂಬುದನ್ನು ನಾವು ಯೋಚಿಸಬೇಕಾಗಿದೆ.
ಗಾಂಧಿ ಕೊಂದ ಗೋಡ್ಸೆ, ಆರ್‍ಎಸ್ಎಸ್ ನಾಯಕ ಸಾವರ್ಕರ್ ಶಿಷ್ಯ. ಈ ಸಾವರ್ಕರ್ ಮತ್ತು ಗೋಡ್ಸೆ ಈಗ ಭಾರತೀಯ ಜನತಾ ಪಕ್ಷದ ಹಿಂದೂ ಸಂಕೇತಗಳು. ಇವರು ಪಾಲಿಸುವ ಸನಾತನ ಧರ್ಮಕ್ಕೆ, ಅದರಿಂದಾಗುವ ಕಾಲ್ತುಳಿತಕ್ಕೆ ಭಕ್ತರು ಬಲಿಯಾಗುತ್ತಿರುವುದು, ಬುದ್ಧಿವಂತರು ಬಾಯಿ ಮುಚ್ಚಿಕೊಂಡು ಕೂತಿರುವುದು- ಪ್ರಶ್ನೆ ಮತ್ತು ಪ್ರತಿಭಟನೆಯ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಗೆ ಮಾಡುವ ಮೋಸ ಅಲ್ಲವೇ?

ಇಂತಹ ಅವಿವೇಕಿ ಲೇಖನ ಬರೆದವನು ನನಗೆ ಕರೆ ಮಾಡು
9880597223- ಬಸವರಾಜು
ಸಂಪೂರ್ಣ ಉತ್ತರ ಹೇಳ್ತೀನಿ
ಕೆಟ್ಟ ಕೊಳಕು ಮನಸ್ಥಿತಿಯ ಲೇಖನ ಇದು
ಗಾಂಧೀಜಿ ಅಪ್ಪಟ ಹಿಂದು. ಸನಾತನ ಧರ್ಮದಲ್ಲಿ ಅಪಾರ ನಂಬಿಕೆ ಇಟ್ಟವರು. ದಲಿತರನ್ನು ಹರಿಜನರೆಂದು ಕರೆದ ಮೊದಲ ಮೂಲಭೂತವಾದಿ ಗಾಂಧೀಜಿ. ಆಸ್ಪಶ್ರರನ್ನು ದೇವಾಲಯದ ಪ್ರವೇಶ ಬೇಡ ಎಂದು ಗಾಂಧೀಜಿ ಹೇಳಿದ್ದರು. ಮಹಾತ್ಮಾ ಗಾಂಧೀಜಿಯವರ ಆಷಾಢಭೂತಿತನದ ಬಗ್ಗೆ ವಿವರ ಬೇಕಿದ್ದರೆ ಆಸಕ್ತರು ರೀಟಾ ರೀನಿಯವರು ಅನುವಾದಿಸಿರುವ”ಚರಿತ್ರೆಯ ಅಬ್ರಾಹ್ಮನಿಕರಣ”ಕೃತಿಯನ್ನು ಖಂಡಿತವಾಗಿ ಓದಬೇಕು. 🙏🙏🙏