ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುವ ಸ್ಥಳದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ ಸುಮಾರು 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿ 60ರಷ್ಟು ಜನರು ಗಾಯಗೊಂಡ ಬಳಿಕ ಸರ್ಕಾರ ಕೆಲವು ನಿಯಮ, ಸೂಚನೆಗಳನ್ನು ಬದಲಾಯಿಸಿದೆ. ಆಡಳಿತವು ಪ್ರಮುಖವಾಗಿ ಐದು ಬದಲಾವಣೆಯನ್ನು ಮಾಡಿದೆ ಎಂದು ಹೇಳಲಾಗಿದೆ.
ಈ ಅವಘಡವಾದ ಬೆನ್ನಲ್ಲೇ ಮಹಾ ಕುಂಭಮೇಳದ ಸ್ಥಳಕ್ಕೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹಾಗೆಯೇ ವಿವಿಐಪಿಗಳ ಪಾಸ್ ಅನ್ನು ರದ್ದುಪಡಿಸಲಾಗಿದೆ. ಹಾಗೆಯೇ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಭಕ್ತರ ನೂಕುನುಗ್ಗಲು ನಿಯಂತ್ರಿಸುವ ಯತ್ನ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ ಕಾಲ್ತುಳಿತ | ಯುಪಿ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್
ಇನ್ನು ಪ್ರಯಾಗ್‌ರಾಜ್‌ಗೆ ಇತರೆ ಜಿಲ್ಲೆಗಳಿಂದ ಬರುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾ ಗಡಿಯಲ್ಲೇ ವಾಹನಗಳನ್ನು ನಿಲ್ಲಿಸಬೇಕಾಗುತ್ತದೆ. ಹಾಗೆಯೇ ಫೆಬ್ರವರಿ 4ರವರೆಗೆ ನಗರಕ್ಕೆ ಚತುಷ್ಚಕ್ರ (ಕಾರು) ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇನ್ನು ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ರೈಲ್ವೇ ನಿಲ್ದಾಣದಲ್ಲಿರುವ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು, ರೈಲ್ವೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಇನ್ನು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಸಾರಿಗೆ ನಿಗಮಕ್ಕೆ ಸೂಚಿಸಲಾಗಿದೆ.
ಅವಘಡ ಸಂಭವಿಸಿದ ಬಳಿಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಮೊದಲೇ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವುದು ಅಗತ್ಯ. ಇದೇ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಕಳೆದ ವರ್ಷ ನಡೆದ ಕಾಲ್ತುಳಿತದಲ್ಲಿ ಸುಮಾರು 121 ಜನರು ಸಾವನ್ನಪ್ಪಿದ್ದರು. ಹಾಗೆಯೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂಕುನುಗ್ಗಲು, ಕಾಲ್ತುಳಿತ ಸಂಭವಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಹೇಗೆ? ಅವಘಡ ಸಂಭವಿಸಿದ ಬಳಿಕ ಕ್ರಮಕೈಗೊಳ್ಳುವುದಕ್ಕೂ ಬದಲಾಗಿ ಮೊದಲೇ ಎಚ್ಚರಿಕೆ ಉತ್ತಮವಲ್ಲವೇ ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬಂದಿದೆ.
