ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡಲಾಗುತ್ತಿದ್ದ ಮೊಟ್ಟೆ ಮತ್ತು ಸಿಹಿ ತಿನಿಸಿಗೆ ಈವರೆಗೆ ನೀಡುತ್ತಿದ್ದ ಹಣವನ್ನು ಇನ್ನು ಮುಂದೆ ನೀಡದಿರಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಶಾಲೆಯ ಆಡಳಿತ ಮಂಡಳಿಯು ಬೇರೆ ಎಲ್ಲಿಂದಾದರೂ ನಿಧಿ ವ್ಯವಸ್ಥೆ ಮಾಡಿದರೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಸಿಹಿ ತಿನಿಸು (ಪಾಯಸ ಅಥವಾ ರಾಗಿ) ನೀಡಬಹುದು ಎಂದು ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ದಾವಣಗೆರೆ | ಬಿಸಿಯೂಟ ತಯಾರಕರ ಕನಿಷ್ಟ ವೇತನ ಜಾರಿಗೆ ಒತ್ತಾಯ
1995ರಲ್ಲಿ ಜಾರಿಯಾದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಭಾಗವಾಗಿ ಮೊಟ್ಟೆ, ಬಾಳೆಹಣ್ಣು, ಮೊದಲಾದ ಪೌಷ್ಠಿಕಾಂಶಯುತ ಆಹಾರವನ್ನು ನೀಡಲಾಗುತ್ತದೆ. ಸರಿಸುಮಾರು 450 ಗ್ರಾಂ ಕ್ಯಾಲೋರಿ ಮತ್ತು 8ರಿಂದ 12 ಗ್ರಾಂ ಪ್ರೋಟಿನ್‌ಯುಕ್ತ ಆಹಾರವನ್ನು ಮಕ್ಕಳಿಗೆ ನೀಡಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ.
2023ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಮೊಟ್ಟೆ ಪುಲಾವ್, ಮೊಟ್ಟೆ ಬಿರಿಯಾನಿ, ಬೇಯಿಸಿದ ಮೊಟ್ಟೆ ಮತ್ತು ಬಾಳೆಹಣ್ಣು ಅಥವಾ ಇತರೆ ಸ್ಥಳೀಯ ಹಣ್ಣುಗಳನ್ನು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲಾಗುವುದು ಎಂದು ಘೋಷಿಸಿತ್ತು. ಆದರೆ ಹಿಂದುತ್ವ ಸಂಘಟನೆಗಳು ಇದರ ವಿರುದ್ಧವಾಗಿ ಪ್ರತಿಭಟನೆ ನಡೆಸಿತ್ತು. ಕೆಲವು ಶಾಲೆಗಳಲ್ಲಿ ಶೇಕಡ 40ರಷ್ಟು ಪೋಷಕರು ಮೊಟ್ಟೆ ನೀಡುವುದನ್ನು ವಿರೋಧಿಸಿದರು.
ಇದನ್ನು ಓದಿದ್ದೀರಾ? ಮೊಟ್ಟೆ ಬೆಲೆ ಏರಿಕೆ; ಮಧ್ಯಾಹ್ನದ ಬಿಸಿಯೂಟಕ್ಕೆ ಬಜೆಟ್ ಕೊರತೆ
ಈ ಎಲ್ಲಾ ಬೆಳವಣಿಗೆ ಬಳಿಕ ಈಗ ಮಹಾಯುತಿ ಸರ್ಕಾರ ತನ್ನ ಆದೇಶದಿಂದ ತಾನೇ ನುಣುಚಿಕೊಳ್ಳುತ್ತಿದೆ. ಮೊಟ್ಟೆ ನೀಡಲಾಗದು ಎಂದು ನೇರವಾಗಿ ಹೇಳದೆ, ನಿಧಿ ನೀಡುವುದಿಲ್ಲ ಎಂದಿದೆ. ಭಾರತ ಪ್ರಜಾಪ್ರಭುತ್ವ ದೇಶ. ಪ್ರಜಾಪ್ರಭುತ್ವವು ಎಂದಿಗೂ ಬಹುಮತದ ಆಧಾರದಲ್ಲಿ ನಡೆಯುತ್ತದೆ. ಆದರೆ ಮೊಟ್ಟೆ ಬೇಕು ಎಂಬ ಶೇಕಡ 60ರಷ್ಟು ಪೋಷಕರ ಬೇಡಿಕೆಯನ್ನು ಬದಿಗೊತ್ತಿ ಶಾಲೆಯನ್ನು ಮೊಟ್ಟೆ ನೀಡುವುದನ್ನು ವಿರೋಧಿಸಿದ ಶೇಕಡ 40ರಷ್ಟು ಮಂದಿಗೆ ಮಣೆ ಹಾಕಿದೆ. ಪೌಷ್ಠಿಕಾಂಶ ಆಹಾರ ಪಡೆಯುವುದು ಮಕ್ಕಳ ಹಕ್ಕು, ಆದರೆ ಹಕ್ಕನ್ನು ಸರ್ಕಾರವೇ ಕಿತ್ತುಕೊಳ್ಳುತ್ತಿದೆ.
