ಪ್ರಾಧ್ಯಾಪಕಿಯೊಬ್ಬರು ಕಾಲೇಜಿನ ತರಗತಿಯಲ್ಲಿಯೇ ತನ್ನ ವಿದ್ಯಾರ್ಥಿಯನ್ನು ವಿವಾಹವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಪಟ್ಟಣದಲ್ಲಿರುವ ಹರಿಂಗತಾ ಕಾಲೇಜಿನಲ್ಲಿ ವಿದ್ಯಾರ್ಥಿಯನ್ನು ಪ್ರಾಧ್ಯಾಪಕಿ ತರಗತಿಯಲ್ಲೇ ಮದುವೆಯಾಗಿದ್ದಾರೆ ಎಂದು ವರದಿಗಳು ಪ್ರಕಟವಾಗಿವೆ. ಆದರೆ, ಇದು ನಿಜವಾದ ವಿವಾಹವಲ್ಲ ಎಂದು ಕಾಲೇಜು ಸ್ಪಷ್ಟಪಡಿಸಿದೆ. ಆದಾಗ್ಯೂ, ಘಟನೆಯ ಬಗ್ಗೆ ತನಿಖೆ ನಡೆಸಲು ಮೌಲಾನಾ ಅಬುಲ್ ಕಲಾಂ ಆಜಾದ್ ತಂತ್ರಜ್ಞಾನ ವಿಶ್ವವಿದ್ಯಾಲಯ ಆದೇಶಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಪಾಯಲ್ ಬ್ಯಾನರ್ಜಿ ಎಂದು ಹೇಳಲಾಗಿರುವ ಪ್ರಾಧ್ಯಾಪಕಿ ವಧುವಿನ ರೀತಿ ಉಡುಗೆಗಳನ್ನು ತೊಟ್ಟಿದ್ದು, ವಿದ್ಯಾರ್ಥಿಯೊಂದಿಗೆ ಹಾರ ಬದಲಿಸಿಕೊಂಡಿರುವುದು ಕಂಡುಬಂದಿದೆ. ಅಲ್ಲದೆ, ಪ್ರಾಧ್ಯಾಪಕಿ ಮತ್ತು ವಿದ್ಯಾರ್ಥಿ ಪರಸ್ಪರ ಸಂಗಾತಿಗಳಾಗಿ ಒಪ್ಪಿಕೊಂಡು ಸಹಿ ಹಾಕಿರುವ ಕಾಲೇಜಿನ ಲೆಟರ್‌ಹೆಡ್ ಕೂಡ ವೈರಲ್ ಆಗಿದೆ.
ಆದರೆ, ಇದು ನಿಜವಾದ ಮದುವೆಯಲ್ಲ. ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ, ಆಂತರಿಕ ಬಳಕೆಗಾಗಿ ನಡೆಸಲಾದ ನಾಟಕದ ಚಿತ್ರೀಕರಣವಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.
ಹಲವು ವರ್ಷಗಳಿಂದ ಕಾಲೇಜಿನಲ್ಲಿ ಮನೋವಿಜ್ಞಾನ ಬೋಧನೆ ಮಾಡುತ್ತಿರುವ ಪಾಯಲ್ ಬ್ಯಾನರ್ಜಿ, “ಇದು ತಮ್ಮ ತರಗತಿಯಲ್ಲಿ ವಿವಾಹ ಪರಿಕಲ್ಪನೆಗಳ ಬಗ್ಗೆ ವಿವರಿಸಲು ರಚಿಸಲಾಗಿದ್ದ ‘ಮಾನಸಿಕ ನಾಟಕ’ವಾಗಿದೆ. ಆದರೆ, ಆ ವಿಡಿಯೋವನ್ನು ಹೊರಗೆ ಹರಿಬಿಟ್ಟು, ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ತನಿಖೆಗೆ ಆದೇಶಿಸಿದ ಬಳಿಕ ಪ್ರಾಧ್ಯಾಪಕಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಸರಿಯಾದ ತನಿಖೆ ನಡೆದು, ವರದಿ ಬಾರದೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.