ಬಿವಿಎಸ್- ಅಂದರೆ ‘ಬಹುಜನ ವಿದ್ಯಾರ್ಥಿ ಸಂಘ’. ಅದಕ್ಕೀಗ 25 ವರ್ಷಗಳ ಸಂಭ್ರಮ. ಆದರೆ ಇದೇ ಹೊತ್ತಿನಲ್ಲಿ ಬಿವಿಎಸ್ ಎಂದರೆ- ‘ಭಾರತೀಯ ವಿದ್ಯಾರ್ಥಿ ಸಂಘ’ ಎಂಬ ಚರ್ಚೆ ಹುಟ್ಟಿಕೊಂಡು, ಅಸಲಿ ಬಿವಿಎಸ್ ಯಾವುದೆಂದು ವಿವಾದ ಎದ್ದಿದೆ.
ಮಾನ್ಯವರ ಕಾನ್ಶೀರಾಮ್ ಸಾಹೇಬರ ಬಹುಜನ ಚಳವಳಿಯ ಭಾಗವಾಗಿ ಜನ್ಮತಳೆದ ಬಿವಿಎಸ್ ಸಂಘಟನೆಯನ್ನು ಕರ್ನಾಟಕ ರಾಜ್ಯ ಬಿಎಸ್‌ಪಿ (ಬಹುಜನ ಸಮಾಜ ಪಕ್ಷ) ತನ್ನ ರಾಜಕಾರಣದ ಭಾಗವಾಗಿಸಿಕೊಂಡಿತ್ತು ಎಂಬುದು ಸುಳ್ಳಲ್ಲ. ಮೈಸೂರು ಭಾಗದಲ್ಲಿ ಆರಂಭಿಕ ಹೆಜ್ಜೆಗಳನ್ನು ಇಡುತ್ತಾ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಯನ್ನು ಪಸರಿಸುವಲ್ಲಿ ಬಿವಿಎಸ್ ಮಹತ್ವದ ಕೆಲಸಗಳನ್ನು ಮಾಡಿತು.
ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳವಳಿಯಿಂದ ಸ್ಫೂರ್ತಿ ಪಡೆದು ರಾಜ್ಯದಲ್ಲಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿಯು ಮೂರು ದಶಕಗಳ ಕಾಲ ನಡೆಸಿದ ಬೀದಿ ಹೋರಾಟಗಳಿಗಿಂತ ರಾಜಕೀಯ ಪರಿವರ್ತನೆಯೇ ಮುಖ್ಯ ಅಸ್ತ್ರವಾಗಬೇಕೆಂದು ಹೊರಟ ಸಂಘಟನೆ ಬಿವಿಎಸ್. ಅಸ್ಮಿತೆಯ ರಾಜಕಾರಣದ ಭಾಗವಾಗಿ ನಮ್ಮದು ಬುದ್ಧ ಪರಂಪರೆ, ಸಾಮ್ರಾಟ್ ಅಶೋಕನ ಪರಂಪರೆ, ಅಂಬೇಡ್ಕರರ ಪರಂಪರೆ ಎಂಬ ಪ್ರಜ್ಞೆಯನ್ನು ಬಿತ್ತಿ ಬೆಳೆಸಿತ್ತು ಬಿವಿಎಸ್. ಹೀಗಾಗಿ ಸಾಕ್ಯ, ಮೌರ್ಯ, ರಕ್ಕಸ, ರಾವಣ, ಮಹಿಷ ಸೇರಿದಂತೆ ಮೊದಲಾದ ಉಪನಾಮಗಳನ್ನು ವಿದ್ಯಾರ್ಥಿಗಳು ತಮ್ಮ ಹೆಸರುಗಳ ಮುಂದೆ ಹಾಕಿಕೊಳ್ಳಲಾರಂಭಿಸಿದರು. ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ದಲಿತ ವಿದ್ಯಾರ್ಥಿಗಳು ಜಾಗೃತರಾಗಲು, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಬಿವಿಎಸ್ ನಿರಂತರ ಕೆಲಸ ಮಾಡಿತು.

ಬಿಎಸ್‌ಪಿ ರಾಜ್ಯ ನಾಯಕರಾಗಿ ಗುರುತಿಸಿಕೊಂಡು, ಬಹುಜನ ಚಳವಳಿಯ ಮುಂಚೂಣಿಯಲ್ಲಿದ್ದ ಎನ್.ಮಹೇಶ್ ಮತ್ತು ವಕೀಲ ಎಚ್.ಮೋಹನ್‌ಕುಮಾರ್ ಅವರು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ ಭೇಟಿ ಕೊಡುತ್ತಾ, ಬಾಬಾ ಸಾಹೇಬರ ‘ಗಾಂಧಿ ಮತ್ತು ಕಾಂಗ್ರೆಸ್ ಅಸ್ಪೃಶ್ಯರಿಗೆ ಮಾಡಿದ್ದೇನು?’ (ಸಂಪುಟ- 9) ಕೃತಿಯನ್ನು ಓದಿಸುತ್ತಿದ್ದರು. ಹಳ್ಳಿಗಳಿಂದ ಬಂದು ಮೈಸೂರಿನ ಹಾಸ್ಟೆಲ್‌ಗಳಲ್ಲಿ ಉಳಿದು ವ್ಯಾಸಂಗ ಮಾಡುತ್ತಿದ್ದ ದಲಿತ ವಿದ್ಯಾರ್ಥಿಗಳಲ್ಲಿ ಕಾಂಗ್ರೆಸ್ ವಿರೋಧಿ ರಾಜಕೀಯ ಪ್ರಜ್ಞೆ ವೃದ್ಧಿಯಾಯಿತು. ಇದರಲ್ಲಿ ಬಿವಿಎಸ್ ಪಾತ್ರ ದೊಡ್ಡದಿತ್ತು.
ಇದನ್ನೂ ಓದಿರಿ: ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
ಇಂತಹ ಪರಂಪರೆಯನ್ನು ಹೊಂದಿದ್ದ ಬಿವಿಎಸ್ ಇಂದು ಏನಾಗಿದೆ? ಬಹುಜನ ವಿದ್ಯಾರ್ಥಿ ಸಂಘವು ‘ಭಾರತೀಯ ವಿದ್ಯಾರ್ಥಿ ಸಂಘ’ ಆಗಿದ್ದು ಹೇಗೆ? ‘ಬಹುಜನ’ ಎಂಬುದನ್ನು ಕಳಚಿ ‘ಭಾರತೀಯ’ ಎಂದು ಧರಿಸಲು ಹವಣಿಸಿದ್ದು ಏಕೆ? ಬಹುಜನ ವಿದ್ಯಾರ್ಥಿ ಸಂಘಕ್ಕೆ ಪರ್ಯಾಯವಾಗಿ ಹುಟ್ಟಿದ್ದು ಭಾರತೀಯ ವಿದ್ಯಾರ್ಥಿ ಸಂಘವೇ? ಅಥವಾ ಬಹುಜನಕ್ಕೆ ಬದಲಾಗಿ ಭಾರತೀಯ ಎಂದು ಬಳಸಲಾಗುತ್ತಿದೆಯೇ? ಬಿವಿಎಸ್ ವಿಸರ್ಜನೆಯಾಯಿತು ಎಂದು ಬಿಎಸ್‌ಪಿ ನಾಯಕರು ಈ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ, ಮುಕ್ತಾಯಗೊಳಿಸಿದ್ದ ಅಧ್ಯಾಯ ಮತ್ತೆ ಮುನ್ನಲೆಗೆ ಬಂದಿದ್ದೇಕೆ? ‘ಬಹುಜನ’ವನ್ನು ‘ಭಾರತೀಯ’ ಮಾಡಲು ಹೊರಟಿದ್ದರ ಹಿಂದೆ ಸ್ವ-ಹಿತಾಸಕ್ತಿಗಳೇನಾದರೂ ಇವೆಯೇ? ಮುಖ್ಯವಾಗಿ ದಲಿತ ವಿದ್ಯಾರ್ಥಿ ಸಮುದಾಯದಲ್ಲಿ ದೊಡ್ಡ ಮಟ್ಟಿಗಿನ ಅಂಬೇಡ್ಕರ್ ಪ್ರಜ್ಞೆಯನ್ನು ತುಂಬುವಲ್ಲಿ ಪಾತ್ರ ವಹಿಸಿರುವ ಬಿವಿಎಸ್, ಈಗ ಬಿಕ್ಕಟ್ಟಿನ ಭಾಗವಾಗಿದ್ದು ಹೇಗೆ?- ಈ ಎಲ್ಲವನ್ನೂ ಸಿಂಹಾವಲೋಕನ ಮಾಡಿದರೆ ಕೆಲವು ಉತ್ತರಗಳು ಸಿಕ್ಕಾವು. ಅದರ ಜೊತೆಗೆ ಚಳವಳಿಯೊಂದು ಸ್ಥಳೀಯ ನಾಯಕರೊಬ್ಬನ ಸುತ್ತ ಗಿರಕಿ ಹೊಡೆದು ನೆಲಕಚ್ಚಿದ್ದು ಮುಂದಿನ ತಲೆಮಾರಿಗೆ ಪಾಠವೂ ಆಗಬಹುದು. ಬಿಎಸ್‌ಪಿ ರಾಜಕಾರಣದ ಪಲ್ಲಟದಂತೆಯೇ ಬಿವಿಎಸ್ ಕೂಡ ಪಲ್ಲಟವಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
2000ನೇ ಇಸವಿಯಲ್ಲಿ ಬಿವಿಎಸ್
1999ರ ಡಿಸೆಂಬರ್ ಅಂತ್ಯದಲ್ಲಿ ಆದ ಬೆಳವಣಿಗೆಗಳನ್ನು ಮೆಲುಕು ಹಾಕಬೇಕು. ಆ ವೇಳೆಗಾಗಲೇ ಕನಕಪುರದಲ್ಲಿ ಶಿವಣ್ಣ ನೇತೃತ್ವದ ಬಹುಜನ ಸ್ಟೂಡೆಂಟ್ ಫೆಡರೇಷನ್ (ಬಿಎಸ್‌ಎಫ್) ಅಸ್ತಿತ್ವದಲ್ಲಿತ್ತು. ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ‘ಬಹುಜನ ವಿದ್ಯಾರ್ಥಿ ಪರಿಷತ್’ ಮಾಡಿಕೊಂಡಿದ್ದರು. ಇವುಗಳನ್ನು ಒಟ್ಟುಗೂಡಿಸುವ ಪ್ರಯತ್ನ ಆ ವೇಳೆಗೆ ನಡೆಯಿತು. “ಪರಿಷತ್ ಎಂಬುದು ಸಂಘಪರಿವಾರದ ಕಲ್ಪನೆ. ಫೆಡರೇಷನ್ ಎಂಬುದು ಸೂಕ್ತವಾಗಿಲ್ಲ. ಸಂಘ ಎಂಬುದು ನಮ್ಮ ಬೌದ್ಧ ಪರಂಪರೆಯ ಭಾಗ. ಸಂಘ ಎಂದೇ ಸಂಘಟನೆ ಕಟ್ಟೋಣ” ಎನ್ನುತ್ತಾರೆ ಬಿವಿಎಸ್ ಕರಡು ಸಿದ್ಧಪಡಿಸಿದ ಹಿರಿಯ ವಕೀಲರಾದ ಎಚ್.ಮೋಹನ್ ಕುಮಾರ್. ಸಾಕಷ್ಟು ಚರ್ಚೆಗಳು ನಡೆದು 2000ನೇ ಇಸವಿಯ ಜನವರಿ 26ರಂದು (ಗಣರಾಜ್ಯೋತ್ಸವದ ದಿನ) ‘ಬಿವಿಎಸ್’ ಚಾಲನೆ ಪಡೆಯಿತು. ಅದರ ಮೊದಲ ಅಧ್ಯಕ್ಷರಾಗಿದ್ದವರು ಕೃಷ್ಣಮೂರ್ತಿ ಚಮರಂ.

ಪ್ರಸ್ತುತ ಬಿಎಸ್‌ಪಿ ರಾಜ್ಯಾಧ್ಯಕ್ಷ ಆಗಿರುವ ಕೃಷ್ಣಮೂರ್ತಿ, ಹೋರಾಟಗಾರರಾದ ಹ.ರಾ.ಮಹೇಶ್, ಡಾ.ಪಿ.ದೇವರಾಜ್, ಬಿ.ಎಂ.ಲಿಂಗರಾಜು, ರಘೋತ್ತಮ ಹೊ.ಬ., ಪೃಥ್ವಿರಾಜ್, ಅಶೋಕ್ ಕುಮಾರ್ ಮೊದಲಾದವರು ಸೇರಿದ ಮೊದಲ ಸಮಿತಿ ರಚನೆಯಾಯಿತು. “ನಾವು ನಾವೇ ಬೆಳೆಯುತ್ತೇವೆ, ಮಾನವೀಯತೆಯನ್ನು ಬೆಳೆಸುತ್ತೇವೆ” ಎಂಬುದು ಅದರ ಘೋಷವಾಕ್ಯವಾಗಿತ್ತು.
ಇದನ್ನೂ ಓದಿರಿ: ದಲಿತ ವಿದ್ಯಾರ್ಥಿಗಳ ಸಾಂಸ್ಥಿಕ ಹತ್ಯೆ: ಚಾತುರ್ವರ್ಣದ ಮರುಸೃಷ್ಟಿ
“ಬಿವಿಎಸ್- ಯಾವುದೇ ಪಕ್ಷದ ಸಂಘಟನೆಯಾಗುವ ಉದ್ದೇಶವನ್ನೇನೂ ಹೊಂದಿರಲಿಲ್ಲ. ಆದರೆ ಅದರ ತತ್ವ ಸಿದ್ಧಾಂತ ಬಹುಜನ ಚಳವಳಿಯಿಂದ ಸ್ಪೂರ್ತಿ ಪಡೆದಿತ್ತು” ಎನ್ನುತ್ತಾರೆ ಬಿವಿಎಸ್‌ನೊಂದಿಗೆ ಆರಂಭಿಕ ಹೆಜ್ಜೆಗಳನ್ನು ಇಟ್ಟವರು. ಬಿವಿಎಸ್ ಹಿಂದೆ ಬಿಎಸ್‌ಪಿ ನಿಂತಿತ್ತು ಎಂಬುದು ನಿಜ. ಮತ ರಾಜಕಾರಣಕ್ಕೆ ಬೇಕಾದ ಎಲ್ಲ ಬೌದ್ಧಿಕ ಸರಕನ್ನು ವಿದ್ಯಾರ್ಥಿ ಘಟಕವಾಗಿ ಬಿವಿಎಸ್ ನೀಡುತ್ತಿತ್ತು. ವಿವಿಗಳಿಗೆ ಪಕ್ಷವು ಪ್ರವೇಶ ಮಾಡಲು ಸಾಧ್ಯವಿರಲಿಲ್ಲ. ಪಕ್ಷಕ್ಕೆ ಬೇಕಾದ ರಾಜಕಾರಣವನ್ನು ಬಿವಿಎಸ್ ಮಾಡುತ್ತಾ ಬಂದಿತು. ಪಾರ್ಟಿ ವಿಚಾರವಲ್ಲದಿದ್ದರೂ ರಾಜಕಾರಣ, ಸಮ್ಮಿಶ್ರ ಸರ್ಕಾರಗಳ ಮಹತ್ವ, ರಾಜಕೀಯದ ಅಗತ್ಯತೆ, ಸಾಂಸ್ಕೃತಿಕ ಅಸ್ಮಿತೆ- ಈ ಎಲ್ಲವನ್ನೂ ಕ್ಯಾಂಪಸ್‌ಗಳಲ್ಲಿ ಬಿವಿಎಸ್ ಮುನ್ನಲೆಗೆ ತಂದಿತು.

ಛತ್ರಪತಿ ಶಾಹೂ ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣಗುರು, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಬುದ್ಧ, ಬಸವ, ಅಂಬೇಡ್ಕರ್ ಕುರಿತು ಕಾಲಕಾಲಕ್ಕೆ ಸೆಮಿನಾರ್‌ಗಳನ್ನು ಮಾಡಲಾಯಿತು. ಕೇಡರ್ ಕ್ಯಾಂಪ್‌ಗಳನ್ನು ನಡೆಸಲಾಯಿತು. ಬಿವಿಎಸ್‌ನಲ್ಲಿದ್ದವರು ಸಹಜವಾಗಿ ಬಿಎಸ್‌ಪಿಗೂ ಹೋಗುತ್ತಿದ್ದರು. ಆದರೆ ವಿದ್ಯಾರ್ಥಿಗಳಿಗೆ ಬೇರೆ, ಬಿಎಸ್‌ಪಿಯವರಿಗೆ ಬೇರೆ ತರಬೇತಿಗಳಾಗುತ್ತಿದ್ದವು. ಅಂಬೇಡ್ಕರ್ ಚಿಂತನೆಗಳ ಹಾದಿಯಲ್ಲಿ ಬಿವಿಎಸ್ ನಡೆಯಿತು.
ಬಹುಜನ ವಿದ್ಯಾರ್ಥಿಗಳನ್ನು ಬಿವಿಎಸ್ ಸಂಘಟಿಸುತ್ತಿತ್ತು. ಸಹಜವಾಗಿ ಇದರ ಅನುಕೂಲವಾಗಿದ್ದು ಎನ್.ಮಹೇಶ್ ಅವರಿಗೆ. ಚುನಾವಣೆಯಲ್ಲಿ ಸೋಲುಗಳನ್ನು ಕಂಡಿದ್ದ ಎನ್.ಮಹೇಶ್ ಅವರನ್ನು 2018ರ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ಬಿವಿಎಸ್ ಪಾತ್ರ ದೊಡ್ಡದಿದೆ. ಅದನ್ನು ಯಾರೂ ಅಲ್ಲಗಳೆಯಲಾರರು. ಬಿವಿಎಸ್‌ನ ಬದ್ಧತೆಯುಳ್ಳ ಕಾರ್ಯಕರ್ತರ ಫಲವಾಗಿ ಗೆಲುವಿನ ರುಚಿ ಕಂಡವರು ಮಹೇಶ್.
ಬಿವಿಎಸ್ ತನ್ನ ಆರಂಭದ ಮೊದಲ ನಾಲ್ಕೈದು ವರ್ಷ ಅಭೂತಪೂರ್ವ ಕೆಲಸವನ್ನು ಮಾಡಿತು. ಬಹುಜನ ಗೀತೆಗಳು ಚಾಲ್ತಿಗೆ ಬಂದವು. ವಿವಿಗಳಿಗೆ ಪ್ರವೇಶ ಪಡೆದ ದಲಿತ ವಿದ್ಯಾರ್ಥಿಗಳಿಗೆ ಬಿವಿಎಸ್ ಹೇಳುತ್ತಿದ್ದ ಅಂಬೇಡ್ಕರ್ ಕಥನಗಳು ಕಣ್ಣುಗಳನ್ನು ಒದ್ದೆಯಾಗಿಸುತ್ತಿದ್ದವು. ರಾಜಕೀಯ ಪ್ರಜ್ಞೆಯೊಂದಿಗೆ ಗಾಢ ಭಾವುಕತೆಯನ್ನೂ ಬಿತ್ತಲಾಯಿತು. ಬಿಎಸ್‌ಪಿ ಉತ್ತರಪ್ರದೇಶದಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸಿದ ಮೇಲೆ ಬಿವಿಎಸ್‌ನೊಳಗೆ ಪಲ್ಲಟಗಳಾಗುತ್ತಾ ಹೋದವು. ಬಿಎಸ್‌ಪಿಯ ವಿದ್ಯಾರ್ಥಿ ಮುಖವಾಣಿ ಎಂಬಂತೆ ಬಿವಿಎಸ್ ಢಾಳಾಗಿ ವರ್ತಿಸಿದ್ದು ಮತ್ತು ಬಿಎಸ್‌ಪಿಯ ಎಲ್ಲ ನಡೆಗಳನ್ನು ಸಮರ್ಥಿಸಿದ್ದು ಅನೇಕರಿಗೆ ಸರಿಕಾಣದೆ ಹಂತಹಂತವಾಗಿ ಹೊರಗೆ ಬಂದರು. ಆದರೂ ಬಿವಿಎಸ್- ಚಳವಳಿಯ ಭಾಗವಾಗಿ ಮುಂದುವರಿದಿದ್ದು ನಿಜ. ಬಿಜೆಪಿ ಸಖ್ಯದ ಫಲವಾಗಿ, “ಇದು ಆನೆಯಲ್ಲ, ಗಣೇಶ,ಬ್ರಹ್ಮ ವಿಷ್ಣು ಮಹೇಶ” ಎನ್ನುವ ಮೂಲಕ ಹಿಂದುತ್ವವನ್ನು ಒಳಗೊಳ್ಳುವ ಹೊಸ ಹೆಜ್ಜೆಯನ್ನು ಬಿಎಸ್‌ಪಿ ಇಟ್ಟಿತ್ತು. ‘ಜಾತಿ ವಿನಾಶ’ ಎನ್ನುತ್ತಿದ್ದವರು, ‘ಜಾತಿಗಳ ಹೊಂದಾಣಿಕೆ ಅಗತ್ಯ’ ಎಂದು ಹೇಳತೊಡಗಿದರು. ‘ಬಹುಜನ’ ಎನ್ನುತ್ತಿದ್ದವರು ‘ಸರ್ವಜನ’ ಬಳಕೆ ಮಾಡಿದರು. ಬಿಎಸ್‌ಪಿ ಬದಲಾದಂತೆ ಬಿವಿಎಸ್ ಘೋಷಣೆಗಳು ಬದಲಾಗುತ್ತಾ ಬಂದವು ಎಂಬುದು ಭಿನ್ನಮತ ತಾಳಿದವರ ಅಭಿಪ್ರಾಯ.
ಇದನ್ನೂ ಓದಿರಿ: ‘ದಲಿತ’ ಪದದ ಅಪಾರ್ಥ: ದಲಿತ ಚಳವಳಿಗೇ ಅಪಾಯ
ಎನ್.ಮಹೇಶ್ ಅವರ ವೈಯಕ್ತಿಕ ವರ್ಚಸ್ಸು, ವ್ಯಕ್ತಿಪೂಜೆಯ ಭಾಗವಾಗಿ ಬಿವಿಎಸ್ ಹೊರಹೊಮ್ಮಿದ್ದರಿಂದಾಗಿ ಕೆಲವರು ಅಸಮಾಧಾನಗೊಂಡರು. “ಇದು ತಪ್ಪಲ್ಲವೇ ಎಂದು ಪ್ರಶ್ನೆ ಮಾಡಿದವರನ್ನು ಮಹೇಶಣ್ಣ ಮೂಲೆಗುಂಪು ಮಾಡುತ್ತಾ ಬಂದರು” ಎನ್ನುತ್ತಾರೆ ಕೃಷ್ಣಮೂರ್ತಿ ಚಮರಂ.
‘ಈದಿನ.ಕಾಂ’ ಜೊತೆ ಮಾತನಾಡಿದ ಚಮರಂ ಅವರು ಸವಿಸ್ತಾರವಾಗಿ ಬಿವಿಎಸ್‌ನ ಪಲ್ಲಟಗಳನ್ನು ಹಂಚಿಕೊಂಡರು. “ನಾವೊಂದಿಷ್ಟು ಜನ ಚಳವಳಿಯನ್ನು ಬಿಟ್ಟು ಹೋಗಿರುವುದಾಗಿ ಕೆಲವರು ಆಪಾದಿಸುತ್ತಾರೆ. ಆದರೆ ಒಬ್ಬ ವ್ಯಕ್ತಿ ಬುದ್ಧ, ಬಸವ, ಅಂಬೇಡ್ಕರ್ ಅಂತಹ ಮಹನೀಯರ ಸ್ಪರ್ಶದ ತರುವಾಯ ಚಳವಳಿಯನ್ನು ಬಿಟ್ಟು ಹೋಗಿದ್ದಾನೆ ಎನ್ನಲು ಸಾಧ್ಯವೇ? ಚಳವಳಿಯನ್ನು ಬಿಟ್ಟು ಗಣೇಶನನ್ನೋ, ಸತ್ಯನಾರಾಯಣ ಪೂಜೆಯನ್ನೋ ಮಾಡಿಕೊಂಡು ಇರುತ್ತೇನೆ ಎಂದವರಷ್ಟೇ ನಿಜವಾಗಿಯೂ ಹೋರಾಟಕ್ಕೆ ವಿಮುಖರಾದವರು” ಎಂಬುದು ಅವರ ಅಭಿಪ್ರಾಯ.
“ಬಹುಜನ ವಿದ್ಯಾರ್ಥಿ ಸಂಘದ ಮುಖವಾಣಿಯಾಗಿ ‘ಸಮಾಜ ಪರಿವರ್ತನಾ ಪತ್ರಿಕೆ’ಯನ್ನು ಆರಂಭಿಸಿದೆವು. ಬಿವಿಎಸ್‌ನಿಂದ ನಾವು ಹೊರಬಂದರೂ ಪತ್ರಿಕೆಯನ್ನೇನೂ ನಿಲ್ಲಿಸಲಿಲ್ಲ. ಬಿವಿಎಸ್ ಪ್ರತಿಪಾದಿಸುತ್ತಿದ್ದ ಸಂಗತಿಗಳನ್ನೇ ಪ್ರಕಟಿಸುತ್ತಿದ್ದೆವು. ಬಹುಜನ ವಿಚಾರಧಾರೆಗಳನ್ನು ಪಸರಿಸಿದೆವು. ಏನೇ ಮಾಡಿದರೂ ನಾವು ಬಹುಜನ ಧಾರೆಯ ಒಳಗೆೇ ಇದ್ದೆವು” ಎನ್ನುತ್ತಾರೆ ಅವರು.

2014ರ ವೇಳೆಗೆ ಪ್ರೊ.ಎ.ಹರಿರಾಮ್ ಅವರ ಪ್ರವೇಶ ಬಿವಿಎಸ್‌ಗೆ ಆಗುತ್ತದೆ. ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಕೆಲಸವನ್ನು ಅವರು ಕೂಡ ಮಾಡಿದ್ದಾರೆ. ಅದಕ್ಕೆ ಮೈಸೂರು ಹಾಕಿದ ಭದ್ರಬುನಾದಿ ಸಹಕಾರಿಯಾಯಿತು. ಹರಿರಾಮ್ ಅವರು ಬಿಎಸ್‌ಪಿ ರಾಜ್ಯಾಧ್ಯಕ್ಷರೂ ಆದರು. ಎನ್.ಮಹೇಶ್ ಅವರು ಬಿಎಸ್‌ಪಿಯಿಂದ ಹೊರಬಿದ್ದ ಬಳಿಕ ಹರಿರಾಮ್ ಅವರೂ ಪಕ್ಷದಿಂದ ಅಂತರ ಕಾಯ್ದುಕೊಂಡರು. ಇದರ ನಡುವೆ ಹುಟ್ಟಿಕೊಂಡಿದ್ದೇ ಮತ್ತೊಂದು ಬಿವಿಎಸ್- ಅಂದರೆ ಭಾರತೀಯ ವಿದ್ಯಾರ್ಥಿ ಸಂಘ!

“ಮಹೇಶ್ ಅವರನ್ನು ಅನುಸರಿಸಿದವರೂ ಅವರೊಂದಿಗೆ ಬಿವಿಎಸ್ ಅನ್ನು ತೆಗೆದುಕೊಂಡು ಹೋಗಿದ್ದರೆ ಬೇಡ ಅನ್ನುತ್ತಿರಲಿಲ್ಲ. ಅದಕ್ಕೊಂದು ಪರಂಪರೆ ಇದೆ ಎಂದು ಸುಮ್ಮನಾಗುತ್ತಿದ್ದೆವು. ಆದರೆ ಬಿಎಸ್‌ಪಿಯಿಂದ ಹೊರಹೋದ ಬಳಿಕ, ಭಾರತೀಯ ಪರಿವರ್ತನಾ ಸಂಘ ಆರಂಭವಾಯಿತು. ಮುಂದುವರಿದು, ಬಿವಿಎಸ್ ಎಂದರೆ ಭಾರತೀಯ ವಿದ್ಯಾರ್ಥಿ ಸಂಘ ಎಂದರು. ಈ ಸಂಬಂಧ ಸಮಾವೇಶವನ್ನೂ ನಡೆಸಿದರು. ಭಾರತೀಯ ಜನತಾ ಪಾರ್ಟಿಗೆ ಹೋಗುವ ಸೂಚನೆಯಂತೆ ಇದು ನಮಗೆ ತೋರಿತು” ಎನ್ನುತ್ತಾರೆ ಚಮರಂ.
“ಅವರಿಗೆ ಬಿವಿಎಸ್ ಎಂಬ ಬ್ರಾಂಡ್ ಬೇಕಿತ್ತು. ಭಾರತೀಯ ಜನತಾ ಪಾರ್ಟಿಗೂ ‘ಡಾರ್ಲಿಂಗ್’ ಥರ ಕಾಣಿಸಬೇಕಿತ್ತು. ಹೀಗಾಗಿ ಬಹುಜನ ಬಿಟ್ಟು ಭಾರತೀಯ ಎಂಬುದನ್ನು ಹಾಕಿಕೊಂಡರು. ಭಾರತೀಯ ವಿದ್ಯಾರ್ಥಿ ಸಂಘದ ಜೊತೆ ಹೋದವರು ಬೆರಳೆಣಿಯಷ್ಟು ಮಂದಿಯಷ್ಟೇ. ಸಂಘದ ಮೊದಲ ಪದಾಧಿಕಾರಿಗಳ ಸಮಿತಿಯಲ್ಲಿದ್ದ ಡಾ.ಶಿವಕುಮಾರ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಭಾರತೀಯ ವಿದ್ಯಾರ್ಥಿ ಸಂಘದಿಂದ ದೂರವಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.
ಭಾರತೀಯ ವಿದ್ಯಾರ್ಥಿ ಸಂಘಕ್ಕೆ 25 ವರ್ಷ!
ಎನ್.ಮಹೇಶ್ ಅವರು ಬಿಎಸ್‌ಪಿ ತೊರೆದ ಮೇಲೆ ಚಾಲ್ತಿಗೆ ಬಂದಿದ್ದ ‘ಭಾರತೀಯ ವಿದ್ಯಾರ್ಥಿ ಸಂಘ’ಕ್ಕೆ 25 ವರ್ಷ ಎಂಬ ಪ್ರಚಾರ ಶುರುವಾಯಿತು. ನಿನ್ನೆ ಮೊನ್ನೆ ಹುಟ್ಟಿದ ಸಂಘಟನೆಗೆ ಹೇಗೆ 25 ವರ್ಷವಾಯಿತು ಎಂಬುದು ಬಿವಿಎಸ್ ಕಟ್ಟಿದ ಮೊದಲ ತಲೆಮಾರಿನ ಹೋರಾಟಗಾರರಿಗೆ ಆಘಾತವಾಗಿತ್ತು.
ಇದನ್ನೂ ಓದಿರಿ: ‘ಜೈ ಭೀಮ್’ ಪದದ ಸ್ವಾರಸ್ಯಕರ ಇತಿಹಾಸ ಬಲ್ಲಿರಾ?
“2020ರಲ್ಲಿ ಶುರುವಾದ ಭಾರತೀಯ ವಿದ್ಯಾರ್ಥಿ ಸಂಘಕ್ಕೆ ಆಗಿರುವುದು ಕೇವಲ 5 ವರ್ಷ. ಅದಕ್ಕೆ 25 ವರ್ಷ ಆಗಿರುವುದು ಹೇಗೆ? ಐತಿಹಾಸಿಕ ದಾಖಲೆ ಏನಿದೆ? ಎಂದು ಪ್ರಶ್ನಿಸಲು ಶುರುಮಾಡಿದಾಗ- ಈ ಹಿಂದೆ ಇದ್ದ ಬಹುಜನ ವಿದ್ಯಾರ್ಥಿ ಸಂಘವೇ ಈಗಿನ ಭಾರತೀಯ ವಿದ್ಯಾರ್ಥಿ ಸಂಘ ಎಂಬ ಉತ್ತರ ಹುಟ್ಟಿಕೊಳ್ಳುತ್ತದೆ. ಮನುವಾದಿಗಳು ಇತಿಹಾಸ ತಿರುಚುತ್ತಾರೆ ಎಂದು ಹೇಳುತ್ತಿದ್ದವರೇ, ಬಿವಿಎಸ್‌ನ ಇತಿಹಾಸಕ್ಕೆ ಅಪಚಾರ ಎಸಗಬಹುದೇ?” ಎಂಬುದು ಬಿವಿಎಸ್ ಕಟ್ಟಿದವರ ಪ್ರಶ್ನೆ.


ಬಹುಜನ ವಿದ್ಯಾರ್ಥಿ ಸಂಘಕ್ಕೆ 25 ವರ್ಷಗಳ ಇತಿಹಾಸವಿದೆ. ಭಾರತೀಯ ವಿದ್ಯಾರ್ಥಿ ಸಂಘಕ್ಕೆ ಎಲ್ಲಿದೆ? ಇದನ್ನು ಕೌಂಟರ್ ಮಾಡುವ ಕೆಲಸ ಶುರುವಾಯಿತು. ಸೈದ್ಧಾಂತಿಕ ಸೌಜನ್ಯವನ್ನು ಮೀರಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಭಾಷೆಯ ಬಳಕೆಯೂ ಆಯಿತು.
“ಕೆಲವು ತಿಂಗಳ ಹಿಂದೆ ಸಂಘಪರಿವಾರದವರು ಬಾಬಾ ಸಾಹೇಬರ ಕುರಿತು ಬೆಳಕು ಹೊಳಪು ಕಾರ್ಯಕ್ರಮ ಮಾಡಿದರು. ಚಕ್ರವರ್ತಿ ಸೂಲಿಬೆಲೆ ಮುಖ್ಯಭಾಷಣಕಾರ. ಅಂಬೇಡ್ಕರ್ ಅವರ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳಿಬಿಟ್ಟರು. ಭಾರತೀಯ ವಿದ್ಯಾರ್ಥಿ ಸಂಘದಲ್ಲಿ ಗುರುತಿಸಿಕೊಂಡ ಹುಡುಗರು ಎದ್ದು ನಿಂತು ಸಂಘಪರಿವಾರದ ಕಾರ್ಯಕ್ರಮವನ್ನು ಹೊಗಳಿದರು. ಬಹುಜನ ವಿದ್ಯಾರ್ಥಿ ಸಂಘದಲ್ಲಿದ್ದು ಈಗ ಭಾರತೀಯ ಸಂಘಕ್ಕೆ ಹೋಗಿರುವವರೇ ಹೀಗೆ ವರ್ತಿಸತೊಡಗಿದ್ದರು. ಇದು ಅಪಾಯಕಾರಿ ಅನಿಸಿತು. ಅಂಬೇಡ್ಕರ್ ವಿಚಾರಧಾರೆಯನ್ನು ತಿರುಚಿಬಿಡುತ್ತಾರೆ ಎಂಬ ಭಯವಾಯಿತು” ಎನ್ನುವ ಚಮರಂ, ಬಿವಿಎಸ್ ಮರುಕಟ್ಟುವ ಕೆಲಸ ಹುಟ್ಟಿದ್ದರ ಹಿಂದಿನ ಕಾರಣಗಳನ್ನು ಶೋಧಿಸುತ್ತಾರೆ.
“ಅಂಬೇಡ್ಕರ್ ಅವರು ಬಹುದೊಡ್ಡ ಹಿಂದೂವಾಗಿದ್ದರು, 1956ರಲ್ಲಿ ಬೌದ್ಧಧಮ್ಮಕ್ಕೆ ಸೇರಿದ ಬಳಿಕ ಅವರು ಬದುಕಿದ್ದು 56 ದಿನಗಳಷ್ಟೇ. ಅಲ್ಲಿಯವರೆಗೂ ಅವರು ಪ್ರಖರವಾದ ಹಿಂದೂವಾಗಿದ್ದರು ಎನ್ನುತ್ತಿದ್ದ ಸೂಲಿಬೆಲೆ ಭಾಷಣಕ್ಕೆ ನಮ್ಮ ಹುಡುಗರು ತಲೆದೂಗುತ್ತಿದ್ದರು. ಅಂಬೇಡ್ಕರ್ ಅವರು ಪಾಕಿಸ್ತಾನದ ಕುರಿತು ಕೃತಿ ಬರೆದದ್ದೇ ಮುಸ್ಲಿಮರ ಮೇಲಿನ ಅಸಹನೆಯಿಂದ, ಅವರಿಗೆ ಮುಸ್ಲಿಮರ ಬಗ್ಗೆ ಬಹಳ ದೊಡ್ಡ ದ್ವೇಷವಿತ್ತು, ಮುಸ್ಲಿಮರನ್ನು ಈ ದೇಶದಲ್ಲೇ ಇಟ್ಟುಕೊಳ್ಳಬಾರದು ಎಂಬುದು ಅಂಬೇಡ್ಕರ್ ವಾದವಾಗಿತ್ತು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ಮಾಡಿರುವ ಸೂಕ್ಷ್ಮವಾದ ವಿಮರ್ಶೆಯನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು ಬಿಂಬಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಕುರಿತು ಸುಳ್ಳುಗಳನ್ನು ಬಿಂಬಿಸುವುದು ನಡೆಯುತ್ತಿದೆ. ಮಹೇಶ್ ಅವರು ಬಿಜೆಪಿ ಸೇರಿದ ಮೇಲೆ ಸಾವರ್ಕರ್ ಬಗ್ಗೆ ಮಾತನಾಡುತ್ತಿರುವುದು, ಸಂಘಪರಿವಾರದ ಅಂಬೇಡ್ಕರ್ ಚಿತ್ರಣವನ್ನು ಭಾರತೀಯ ವಿದ್ಯಾರ್ಥಿ ಸಂಘವು ಒಪ್ಪಿಕೊಳ್ಳುತ್ತಿರುವುದು ಸ್ಪಷ್ಟ. ಇದೆಲ್ಲವೂ ಅಪಾಯಕಾರಿ ಎನಿಸಿತು. ಮುಂದಿನ ತಲೆಮಾರು ಆರ್‌ಎಸ್‌ಎಸ್ ಹೇಳುವ ವಿಚಾರಗಳೇ ಸತ್ಯವೆಂದು ಭಾವಿಸುವ ಅಪಾಯವಿದೆ. ದಲಿತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂಬುದು ನಮ್ಮ ಕಣ್ಣಿಗೆ ಗೋಚರಿಸುತ್ತಿದೆ. ‘ಮುಸ್ಲಿಮರಿಂದ ದಲಿತರಿಗೆ ಹೊಡೆಸುವ’ ಅಜೆಂಡಾವನ್ನು ಆರ್‌ಎಸ್‌ಎಸ್ ಇಟ್ಟುಕೊಂಡಿದೆ. ಇದನ್ನು ಮನಗಂಡು ನಾವು ಚರ್ಚೆಗಳನ್ನು ನಡೆಸಿದೆವು. ಬಿವಿಎಸ್ ಮತ್ತೆ ಶುರು ಮಾಡೋಣ ಎಂದು ನಿರ್ಧರಿಸಿದೆವು. ಮಹೇಶ್ ಅವರಿಂದಾಗಿ ಬಿವಿಎಸ್‌ಗೆ ಕೆಟ್ಟ ಹೆಸರು ಬಂದಿದೆ. ಮತ್ತೆ ಅದನ್ನು ಮುನ್ನಲೆಗೆ ತರುವುದು ಬೇಡ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಒಬ್ಬ ವ್ಯಕ್ತಿಯ ಕಾರಣಕ್ಕೆ ಒಂದು ಸಂಘಟನೆಯನ್ನು ದೂರುವುದು ತಪ್ಪು. ಅದಕ್ಕೆ ಒಂದು ಬ್ರ್ಯಾಂಡ್ ಇದೆ. ಆದರೆ ಬಹುಜನ ವಿದ್ಯಾರ್ಥಿ ಸಂಘವನ್ನೇ ಮಾಡೋಣ. ಜನರಲ್ಲಿ ಉಂಟಾಗಿರುವ ತಪ್ಪು ತಿಳಿವಳಿಕೆಗಳನ್ನು ತೆಗೆದು ಹಾಕೋಣ ಎಂಬುದು ಮೋಹನ್‌ಕುಮಾರ್ ಅವರ ನಿಲುವಾಗಿತ್ತು” ಎನ್ನುತ್ತಾರೆ ಚಮರಂ.
ಈ ವರ್ಷದ ಕಳೆದ ಜನವರಿ 26ರಂದು ಬೆಳ್ಳಿಹಬ್ಬವನ್ನು ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಬಹುಜನ ವಿದ್ಯಾರ್ಥಿ ಸಂಘ ನಮ್ಮದು. ಬಿವಿಎಸ್ ನಮ್ಮದು ಎಂಬ ಸಂದೇಶವನ್ನು ರವಾನಿಸಲಾಯಿತು.
‘ಭಾರತೀಯ ತತ್ವವೇ ಅಂಬೇಡ್ಕರ್ ಸಿದ್ಧಾಂತ, ಭಾರತೀಯ ಎಂದು ಇಟ್ಟುಕೊಂಡರೆ ಬಿಜೆಪಿ ಎಂದು ಏಕೆ ಭಾವಿಸುತ್ತೀರಿ. ಭಾರತೀಯ ಎಂಬುದು ಹೊರಗಿನದ್ದೇ?’ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಚಮರಂ ಕೊಡುವ ಉತ್ತರ, “We are indians firstly and lastly” ಎಂದಿದ್ದರು ಬಾಬಾ ಸಾಹೇಬರು. ಅದು ಇಂಗ್ಲಿಷ್‌ನಲ್ಲಿ. ಭಾರತೀಯ ಬೌದ್ಧ ಮಹಾಸಭಾವನ್ನುಅಂಬೇಡ್ಕರ್ ಕಟ್ಟಿದ್ದೇ ಹೊರತು, ಆರ್‌ಎಸ್‌ಎಸ್‌ನವರಲ್ಲ ಎನ್ನುವವರಿಗೆ ಬಾಬಾ ಸಾಹೇಬರು ಎಲ್ಲಿ ಭಾರತೀಯ ಬೌದ್ಧಮಹಾಸಭಾ ಕಟ್ಟಿದ್ದಾರೆಂದು ತೋರಿಸುವ ಶಕ್ತಿ ಇಲ್ಲ. ಅಂಬೇಡ್ಕರ್ ಅವರು ಕಟ್ಟಿದ್ದು ‘ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ’ವೇ ಹೊರತು, ‘ಭಾರತೀಯ ಬೌದ್ಧ ಮಹಾಸಭಾ’ವನ್ನಲ್ಲ. ತಮಗೆ ಬೇಕಾದಂತೆ ಅನುವಾದ ಮಾಡಿಕೊಂಡರೆ ಮೂಲಕ್ಕೆ ಅಪಚಾರ ಎಸಗಿದಂತೆ. ಭಾರತೀಯ ಎಂಬುದನ್ನು ಬಿಜೆಪಿಯವರು ತಮ್ಮ ಐಡೆಂಟಿಟಿ ಮಾಡಿಕೊಂಡಿದ್ದಾರೆ. ಭಾರತೀಯ ಮಜ್ದೂರ್ ಸಂಘ್, ಭಾರತೀಯ ಕಿಸಾನ್ ಮೋರ್ಜಾ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್- ಇವೆಲ್ಲವೂ ಸಂಘಪರಿವಾರದ ಬ್ರಾಂಚ್ ಗಳು. ಇವುಗಳ ಭಾಗವಾಗಿ ಸಂಘಪರಿವಾರವನ್ನು ಮೆಚ್ಚಿಸಲು ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್) ಎನ್ನುತ್ತಿದ್ದಾರೆ. ನಮ್ಮನ್ನು ನಾವು ಅಪ್‌ಗ್ರೇಡ್ ಮಾಡಿಕೊಳ್ಳಲು ಬಹುಜನದಿಂದ ಭಾರತೀಯತೆಗೆ ಹೋಗುತ್ತಿದ್ದೇವೆ ಎನ್ನುವವರ ವಾದದಲ್ಲಿ ಉರುಳಿದೆಯೇ? ಇವರ ಪ್ರಕಾರ ಬಹುಜನ ಎಂಬುದು ಭಾರತೀಯತೆಗಿಂತ ಕೆಳಗಿನದ್ದೇ? ಬುದ್ಧ ಹೇಳಿದ್ದು ಬಹುಜನ ಹಿತಾಯ, ಬಹುಜನ ಸುಖಾಯ ಎಂದು. ಅದು ವಿಶ್ವಮಾನ್ಯವಾಗಿದೆ. ಭಾರತೀಯತೆ ಭಾರತಕ್ಕೆ ಸೀಮಿತವಾದರೆ ಬಹುಜನ ವಿಶ್ವಾತ್ಮಕ ದೃಷ್ಟಿಯನ್ನು ಹೊಂದಿದೆ. ಬಹುಜನ ಎಲ್ಲ ರೀತಿಯ ಶೋಷಿತ ಜನರ ಸಂಘಟನೆ. ಬಹುಜನಕ್ಕೆ ಹೋಲಿಕೆ ಮಾಡಿದರೆ ಭಾರತೀಯತೆಯ ಅರ್ಥ ವಿಶಾಲವಾಗುವುದಿಲ್ಲ” ಎಂಬುದಾಗಿತ್ತು.
‘ಅಂಬೇಡ್ಕರ್’ ಚಿಂತನೆಗಳೇ ಭಾರತೀಯತೆ: ಹರಿರಾಮ್
ಭಾರತೀಯ ವಿದ್ಯಾರ್ಥಿ ಸಂಘದ ಮುಂಚೂಣಿಯಲ್ಲಿರುವ ಹೆಸರು ಎ.ಹರಿರಾಮ್. ಬಿಜೆಪಿ ಸೇರಿದ ಎನ್.ಮಹೇಶ್ ಅವರೊಂದಿಗೆ ಆತ್ಮೀಯತೆ ಹೊಂದಿರುವ ಅವರು, “ಈಗಲೂ ಮಹೇಶ್ ಅವರ ನಿರ್ಧಾರಕ್ಕೆ ವಿರೋಧವಿದೆ. ಆದರೆ ಅವರೊಂದಿಗೆ ವೈಯಕ್ತಿಕ ಸಂಬಂಧ ಚೆನ್ನಾಗಿಯೇ ಇದೆ” ಎನ್ನುತ್ತಾರೆ.

‘ಈದಿನ.ಕಾಂ’ ಜೊತೆ ಮಾತನಾಡಿದ ಅವರು, “2014ರವರೆಗೂ ಬಿವಿಎಸ್‌ನಲ್ಲಿ ನನ್ನ ಪಾತ್ರವೇನೂ ಇಲ್ಲ ಎಂಬುದು ನಿಜ. ನಾನು ಅಂಬೇಡ್ಕರ್ ಅಧ್ಯಯನ ಕೇಂದ್ರ ರೂಪಿಸಿಕೊಂಡು ಬೆಂಗಳೂರು ಸ್ಲಮ್‌ಗಳಲ್ಲಿ ಕೆಲಸ ಮಾಡುತ್ತಿದ್ದೆ. 2014ರಲ್ಲಿ ಬಿವಿಎಸ್ ಪ್ರವೇಶ ಮಾಡಿದೆ. ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಸಂಘಟನೆಯನ್ನು ಮಹೇಶ್ ಅವರೊಂದಿಗೆ ಮಾತನಾಡಿ ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಯೋಚಿಸಿದೆವು. ರಾಜ್ಯಮಟ್ಟದಲ್ಲಿ ಶುರು ಮಾಡಿದ್ದು ನಾನು ಮತ್ತು ಶ್ರೀನಿವಾಸ್” ಎಂದು ಪ್ರತಿಪಾದಿಸುತ್ತಾರೆ.
ಇದನ್ನೂ ಓದಿರಿ: ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?
“2014ರಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹೋರಾಟ ಮಾಡಿದಾಗ ನಮ್ಮ ಮೇಲೆ ಲಾಠಿಚಾರ್ಜ್ ಮಾಡಲಾಗಿತ್ತು. ಇಂದು ಬಿವಿಎಸ್ ನಮ್ಮದೆಂದು ಹೇಳುತ್ತಿರುವವರು ಯಾರೂ ಆ ವೇಳೆಯಲ್ಲಿ ಬಿವಿಎಸ್‌ನಲ್ಲಿ ಇರಲಿಲ್ಲ. ಅವರು ಆರಂಭದಲ್ಲಿ ಕೆಲಸ ಮಾಡಿದ್ದಾರೆಂಬುದು ನಿಜ. ಆದರೆ ನಂತರದಲ್ಲಿ ಬಿವಿಎಸ್‌ನಿಂದ ದೂರವಾದರು. ಬಿವಿಎಸ್‌ನಲ್ಲಿದ್ದ ನಾನು ಬಿಎಸ್‌ಪಿಗೆ ಪ್ರವೇಶ ಮಾಡಬೇಕಾಯಿತು. ಎನ್.ಮಹೇಶ್ ಅವರು ಶಾಸಕರಾಗಿ ಆಯ್ಕೆಯಾದಾಗ ನನಗೆ ಅನಿರೀಕ್ಷಿತವಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕಿತು. ಆದರೆ ಮಾಯಾವತಿಯವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದರು. ಮಹೇಶ್ ಅವರ ಉಚ್ಛಾಟನೆಯಾಯಿತು. ನಾನು ಪಕ್ಷದಲ್ಲೇ ಇದ್ದೆ. ಬಿವಿಎಸ್ ಎಂದು ಸಂಘಟನೆ ಮಾಡುತ್ತಿದ್ದಾರೆಂದು ಬೆಹನ್‌ಜೀ ಅವರಿಗೆ ಕೆಲವರು ದೂರು ಕೊಟ್ಟರು. ಸಂಘಟನೆಯನ್ನು ಮುಚ್ಚಲು ಬೆಹನ್‌ಜೀ ಸೂಚನೆ ನೀಡಿದರು. ಇನ್ನು ಮುಂದೆ ಬಿವಿಎಸ್ ಇರುವುದಿಲ್ಲ, ಕೇವಲ ಬಿಎಸ್‌ಪಿ ಮಾತ್ರ ಎಂದು ಹೇಳಿಕೆ ನೀಡಿದೆವು. ಬಿವಿಎಸ್ ಮೂಲೆಗೆ ಸೇರಿತು. ನಂತರದ ಬೆಳವಣಿಗೆಯಲ್ಲಿ ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಇಳಿಸಿದರು. ಮನೆಗೆ ಇರಲು ಹೇಳಿದರು. ನಾನು ಬಿಎಸ್‌ಪಿಯಲ್ಲೇ ಇದ್ದೇನೆ. ಬಿಎಸ್‌ಪಿಗೆ ರಾಜೀನಾಮೆಯನ್ನೂ ಕೊಟ್ಟಿಲ್ಲ. ಮಹೇಶ್ ಅವರನ್ನು ಆಗಾಗ್ಗೆ ಭೇಟಿಯಾಗಿದ್ದಿದೆ. ಆದರೆ ಸೈದ್ಧಾಂತಿಕವಾಗಿ ಅವರನ್ನು ಒಪ್ಪಿಕೊಂಡಿಲ್ಲ. ಬಿವಿಎಸ್‌ಗೂ ಬಿಎಸ್‌ಪಿಗೂ ಅವಿನಾಭಾವ ಸಂಬಂಧವಿತ್ತು. ಸುಮ್ಮನೆ ಕೂರಲಾಗದೆ ನಾವು ಬಿವಿಎಸ್ ಮರು ಶುರು ಮಾಡಿದೆವು. ಬಹುಜನ ಎಂಬುದನ್ನು ಬಳಸಬಾರದು ಎಂದು ಈಗಾಗಲೇ ಬಿವಿಎಸ್ ಬಿಟ್ಟು ಹೋಗಿದ್ದವರು ಟೀಕಾಪ್ರಹಾರ ನಡೆಸಿದರು. ಮಾಯವತಿಯವರೂ ಇಂದು ಬಹುಜನ ಬಿಟ್ಟು, ಸರ್ವಜನ ಬಳಸುತ್ತಿದ್ದಾರೆ, ಬಾಬಾ ಸಾಹೇಬರು ಕೂಡ ‘ಭಾರತೀಯತೆ’ಯನ್ನು ಕಟ್ಟುವುದಕ್ಕೆ ಕೆಲಸ ಮಾಡಿದರು, ಎಲ್ಲರನ್ನೂ ಒಳಗೊಳ್ಳುವ ರಾಜಕಾರಣ ತೋರಿದರು. ಅದಕ್ಕಾಗಿ ನಾವು ಹೆಸರು ಬದಲಿಸಲು ಯೋಚಿಸಿದೆವು. ಆರೇಳು ತಿಂಗಳು ಚರ್ಚೆಯಾಗಿ, ‘ಭಾರತೀಯ’ ಎಂಬ ಹೆಸರು ಬಳಸಿದೆವು. ಇದರ ಭಾಗವಾಗಿಯೇ ಭಾರತೀಯ ಪರಿವರ್ತನಾ ಸಂಘ (ಬಿಪಿಎಸ್) ಶುರು ಮಾಡಿದೆವು. ಹದಿನೈದು ಇಪ್ಪತ್ತು ಸಾವಿರ ಜನರನ್ನು ಸೇರಿಸಿದೆವು. ಬಹಳ ಹಿಂದೆಯೇ ಬಿವಿಎಸ್‌ನಿಂದ ಹೊರಗೆ ಬಂದವರಿಗಾಗಿ ಮಾಡಿದ ಸಂಘ ಇದ್ದಾಗಿತ್ತು. ಅದರ ಮುಂದುವರಿದ ಭಾಗವಾಗಿ, ಭಾರತೀಯ ವಿದ್ಯಾರ್ಥಿ ಸಂಘವನ್ನು ಕೇವಲ ಕಾಲೇಜು ವಿದ್ಯಾರ್ಥಿಗಳಾಗಿ ಮಾಡೆದೆವು” ಎಂಬುದು ಹರಿರಾಮ್ ಅವರ ವಿವರಣೆ.
“ಬಹುಜನವೇ ಭಾರತೀಯ ಆಗಿದೆ. ಬಿವಿಎಸ್ 25 ವರ್ಷಗಳ ಆಚರಣೆ ಬಂದಾಗ ನಮ್ಮನ್ನು ವಿರೋಧಿಸಲು ಶುರು ಮಾಡಿದ್ದಾರೆ. ನಮ್ಮದೇ ಅಸಲಿ ಬಿವಿಎಸ್ ಎನ್ನುತ್ತಿದ್ದಾರೆ. ನಮ್ಮದೇ ಬಿವಿಎಸ್ ಎನ್ನುವವರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಮ್ಮ ಬೆಂಬಲ ಇದ್ದೇ ಇದೆ. ಬಿವಿಎಸ್ ಎಂಬುದು ಯಾರಿಗೂ ಸೇರಿದ್ದಲ್ಲ. ಅದೊಂದು ಚಳವಳಿ. ಅದರ ‘ಓನರ್ ಶಿಪ್’ ಬೇಕಾಗಿಲ್ಲ. ಎರಡು ಬಿವಿಎಸ್‌ನಿಂದ ಗೊಂದಲ ಉಂಟಾಗುತ್ತದೆ ಎಂಬುದು ನಿಜ. ನಾವು ಬಿವಿಎಸ್ ಎನ್ನುವುದನ್ನು ಬಳಸುವುದೇ ಇಲ್ಲ ಎಂದೇ ನಿರ್ಧರಿಸುತ್ತೇವೆ. ಆ ‘ಬ್ರ್ಯಾಂಡ್’ ಬಿಟ್ಟುಕೊಡಲು ಸಿದ್ದವಿದ್ದೇವೆ. ಆದರೆ ಯಾರನ್ನೋ ಟೀಕೆ ಮಾಡಲು, ಮೆಚ್ಚಿಸಲು ಒಂದು ಕಾರ್ಯಕ್ರಮ ಮಾಡಿ ಸುಮ್ಮನಾಗಬಾರದು. ಪ್ರತಿ ವಾರ ಕ್ಯಾಂಪ್, ಕಾರ್ಯಕ್ರಮ, ಸೆಮಿನಾರ್‌ಗಳು ಹಿಂದಿನಂತೆ ನಡೆಯಲಿ” ಎಂಬುದು ಹರಿರಾಮ್ ಅವರ ಪ್ರತಿಕ್ರಿಯೆ.
ಬಹುಜನ ವಿದ್ಯಾರ್ಥಿ ಸಂಘವನ್ನು ಮತ್ತೆ ಚಾಲನೆಗೆ ತರುತ್ತಿರುವವರು, “ಸಂಘಟನೆಯ ಹಳೆಯ ವರ್ಚಸ್ಸನ್ನು ಪಡೆದೇ ತೀರುತ್ತೇವೆ, ವಿದ್ಯಾರ್ಥಿಗಳನ್ನು ಮತ್ತೆ ಸಕ್ರಿಯಗೊಳಿಸುತ್ತೇವೆ, ವಿವಿಗಳಿಗೆ ಹೋಗುತ್ತೇವೆ, ಸುಮ್ಮನೆ ಕೂರುವುದಿಲ್ಲ” ಎನ್ನುತ್ತಿದ್ದಾರೆ.
‘ಬಹುಜನ’, ‘ಭಾರತೀಯ’ ನಡುವೆ ದಲಿತ ರಾಜಕಾರಣ ಇಟ್ಟಿರುವ ಕವಲು ದಾರಿಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ‘ಬಹುಜನ’ ಚಳವಳಿ ಮತ್ತೆ ಬಲವಾಗಿ, ಸಂವಿಧಾನ ವಿರೋಧಿ ಶಕ್ತಿಗಳ ಮುಂದೆ ಎದೆಎತ್ತಿ ನಿಲ್ಲುತ್ತದೆಯೋ ಇಲ್ಲವೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
ಅದ್ಬುತ ವಾಗಿ ಬರೆದಿದ್ದಿರಿ ಬಹುಜನ ವಿದ್ಯಾರ್ಥಿ ಸಂಘ ಮತ್ತೇ ಹಳೆ ರೂಪ ತಾಳಲಿ ಜೈ ಭೀಮ ಜೈ ಭಾರತ