ಬೆಂಗಳೂರು ಅರಮನೆ ತಮ್ಮ ಆಸ್ತಿಯಾಗಿದ್ದು ತಮಗೆ 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಟಿಡಿಆರ್ ಅನ್ನು ಸರ್ಕಾರ ನೀಡಬೇಕೆಂದು ಆಗ್ರಹಿಸುತ್ತಿರುವ ಮೈಸೂರು ರಾಜ ವಂಶಸ್ಥರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೆಡ್ಡು ಹೊಡೆದಿದೆ. ಇದರಿಂದ ತೆರಿಗೆ ಹಣ ಉಳಿಯುವುದರ ಜೊತೆ ರಸ್ತೆ ಅಗಲೀಕರಣದ ಕಾಮಗಾರಿಯು ಸರಾಗವಾಗಿ ನಡೆಯಲಿದೆ.
ಬೆಂಗಳೂರಿನ ಅರಮನೆ ರಸ್ತೆಯಲ್ಲಿ ನಿತ್ಯವು ಸಂಚಾರ ದಟ್ಟಣೆಯಿಂದ ತಾಸುಗಟ್ಟಲೆ ಪರಿತಪಿಸುತ್ತಿರುವ ಸಾರ್ವಜನಿಕರಿಗೆ ತೊಂದರೆಯಿಂದ ಮುಕ್ತಿ ನೀಡಲು ರಸ್ತೆ ಅಗಲೀಕರಣಗೊಳಿಸುವ ಯೋಜನೆಗೆ ಅರಮನೆ ಜಾಗವನ್ನು ಬಳಸಿಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ರಾಜ್ಯಪಾಲರು ‘ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ)’ ಕಾಯ್ದೆಗೆ ಅಂಕಿತ ಹಾಕಿದ್ದು, ಇದರಿಂದ ಹೆಚ್ಚು ಹೊರೆಯಿಲ್ಲದೆ ಮೇಕ್ರಿ ಸರ್ಕಲ್‌ನಿಂದ ಜಯಮಹಲ್ ರಸ್ತೆ ವಿಸ್ತರಣೆಯಾಗಲಿದೆ. ಬೆಂಗಳೂರು ಅರಮನೆ ತಮ್ಮ ಆಸ್ತಿಯಾಗಿದ್ದು ತಮಗೆ 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಟಿಡಿಆರ್ ಅನ್ನು ಸರ್ಕಾರ ನೀಡಬೇಕೆಂದು ಆಗ್ರಹಿಸುತ್ತಿರುವ ಮೈಸೂರು ರಾಜ ವಂಶಸ್ಥರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೆಡ್ಡು ಹೊಡೆದಿದೆ. ಇದರಿಂದ ತೆರಿಗೆ ಹಣ ಉಳಿಯುವುದರ ಜೊತೆ ರಸ್ತೆ ಅಗಲೀಕರಣದ ಕಾಮಗಾರಿಯು ಸರಾಗವಾಗಿ ನಡೆಯಲಿದೆ.
ಬೆಂಗಳೂರು ಅರಮನೆ ಜಮೀನಿನ ವ್ಯಾಜ್ಯದಲ್ಲಿ ಸರ್ಕಾರದ ವಿರುದ್ಧ ಕೇವಲ ರಾಜ ವಂಶಸ್ಥರು ಮಾತ್ರವಲ್ಲ, ಇದರ ಹಿಂದೆ ಹಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ತೆರೆಮರೆಯಲ್ಲಿ ಕೂತು ಷಡ್ಯಂತ್ರ ಎಸಗುತ್ತಿರುವುದು ಕಂಡುಬರುತ್ತಿದೆ. ಮೈಸೂರಿನ ಕೆಲ ಒಡೆಯರು ಜನರಿಂದ ಸ್ಥಾಪಿತವಾದ ಸರ್ಕಾರಕ್ಕೆ ತೊಂದರೆ ಕೊಡುತ್ತಿರುವುದು ಇದು ಮೊದಲೇನಲ್ಲ. ಮೈಸೂರು ಸೇರಿದಂತೆ ಹಲವು ಕಡೆ ಜಮೀನ ವ್ಯಾಜ್ಯಗಳು ಸರ್ಕಾರ ಹಾಗೂ ಸಾರ್ವಜನಿಕರೊಂದಿಗೆ ನ್ಯಾಯಾಲಯದಲ್ಲಿ ನಡೆಯುತ್ತಲೇ ಇದೆ. ಮೈಸೂರಿನ ಅರಮನೆ ವಿಷಯದಲ್ಲಿಯೂ ಮಹಾರಾಜ ವಂಶಸ್ಥರು ಸರ್ಕಾರದ ವಿರುದ್ಧ ಸಮರ ಸಾರಿದ್ದರು. ಪ್ರಜಾಪ್ರಭುತ್ವ ರಚನೆಯಾದ ನಂತರ ತಾವು ಕೂಡ ಎಲ್ಲರಂತೆ ಜನಸಾಮಾನ್ಯರು ಎಂದು ಭಾವಿಸದಿರುವುದು ಅವರ ಹಿಂದಿನ ಹಲವು ನಡವಳಿಕೆಗಳಲ್ಲಿ ಸಾಬೀತಾಗಿದೆ.
ಜನರ ಕೈಗೆ ಅಧಿಕಾರ ಕೊಡಲು ಒಪ್ಪದಿದ್ದ ಮೈಸೂರು ಅರಸರು
ಸ್ವಾತಂತ್ರ್ಯ ಬರುವುದಕ್ಕೂ ಮುನ್ನ ರಾಜ್ಯವನ್ನಾಳುತ್ತಿದ್ದವರು ಮೈಸೂರು ಒಡೆಯರು. ಆಂಗ್ಲರು ನಮ್ಮ ದೇಶವನ್ನು ಬಿಟ್ಟುಹೋಗಿ ಪ್ರಜಾಪ್ರಭುತ್ವ ಸರ್ಕಾರ ದೇಶದಲ್ಲಿ ರಚನೆಯಾದ ನಂತರ ಭಾರತ ಒಕ್ಕೂಟವನ್ನು ಸೇರುತ್ತೇನೆಂದು ದೇಶದ ಉದ್ದಗಲಕ್ಕೂ ಇರುವ ಹಲವು ರಾಜರುಗಳು ಮುಂದೆ ಬಂದು ಕಾನೂನಿಗೆ ಬದ್ಧವಾಗಿ ನಡೆದುಕೊಂಡರು. ಆದರೆ ಮೈಸೂರಿನ ಅರಸರು ಒಕ್ಕೂಟ ಸೇರುವುದಿಲ್ಲ ಎಂದು ಪಟ್ಟುಹಿಡಿದರು. ಪ್ರಜೆಗಳ ಕೈಗೆ ಅಧಿಕಾರ ಕೊಡಲು ಹಾಗೂ ಭಾರತ ಒಕ್ಕೂಟಕ್ಕೆ ಸೇರಲು ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಒಡೆಯರೂ ಒಪ್ಪಲಿಲ್ಲ. ರಾಜ ಸಂಸ್ಥಾನವನ್ನು ಕಿತ್ತೊಗೆಯಲು ರಚನೆಯಾಗಿದ್ದೆ ‘ಮೈಸೂರು ಚಲೋ’ ಚಳವಳಿ. ಮೈಸೂರು ಆಜಾದ್ ಕಾಂಗ್ರೆಸ್ ಅನ್ನು ರಚಿಸಿಕೊಂಡ ಕಾಂಗ್ರೆಸ್ ನಾಯಕರಾದ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಎಚ್ ಸಿ ದಾಸಪ್ಪ, ಟಿ ಮರಿಯಪ್ಪ, ತಾಳೆಕೆರೆ ಸುಬ್ರಹ್ಮಣ್ಯ ಮುಂತಾದ ನಾಯಕರು 1947 ಆಗಸ್ಟ್ 21 ರಂದು ಮೈಸೂರು ಚಳವಳಿಗೆ ಕರೆ ನೀಡಿದರು.
ಕಾಂಗ್ರೆಸ್ ಸಾರ್ವಜನಿಕರ ಬೆಂಬಲದೊಂದಿಗೆ ಆರಂಭಿಸಿದ್ದ ಮೈಸೂರು ಚಲೋ ಚಳವಳಿ ಉಗ್ರಸ್ವರೂಪ ಪಡೆದುಕೊಂಡಿತ್ತು. ಮೈಸೂರು ದಿವಾನರಾಗಿದ್ದ ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಚಳವಳಿಯನ್ನು ಹತ್ತಿಕ್ಕಲು ಮುಂದಾದರು. ಮುಖಂಡರ ಬಂಧನ ದಿನನಿತ್ಯ ಎಲ್ಲೆಡೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಸಾಮಾನ್ಯವಾಯಿತು. ಕೆಲವು ಕಡೆ ಗೋಲಿಬಾರ್ ಸಹ ನಡೆಯಿತು. ಹಲವರು ತಮ್ಮ ಪ್ರಾಣವನ್ನು ಸಮರ್ಪಿಸಬೇಕಾಯಿತು. ಉಗ್ರರೂಪಕ್ಕೆ ತಿರುಗಿದ ಚಳವಳಿಯನ್ನು ಹತ್ತಿಕ್ಕಲು ಮಹಾರಾಜರ ಆಡಳಿತದಿಂದ ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಪ್ರಜೆಗಳಿಗೆ ಅಧಿಕಾರ ಕೊಡಲು ಒಪ್ಪಿದರು. 1947 ಅಕ್ಟೋಬರ್‌ನಲ್ಲಿ ಮಹಾರಾಜರ ಸರ್ಕಾರ ವಿಸರ್ಜನೆಗೊಂಡ ನಂತರ ಅದೇ ತಿಂಗಳು 6ನೇ ದಿನಾಂಕದಂದು ಕೆ ಸಿ ರೆಡ್ಡಿ ಅವರು ಮೈಸೂರು ರಾಜ್ಯದ ಮುಖ್ಯಮಂತ್ರಿಯಾದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶರ್ಜೀಲ್- ಉಮರ್ ಗೆ ಜಾಮೀನು; ಅಗೋಚರ ಕದಗಳ ಮೇಲೆ ‘ನಾಳೆ ಬಾ’ ಎಂದು ನ್ಯಾಯಾಂಗ ಬರೆದ ಬರೆಹ!
ಕೆ ಸಿ ರೆಡ್ಡಿ ಸಿಎಂ ಆದ ನಂತರ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ರಾಜ ಪ್ರಮುಖರೆಂದು ನೇಮಿಸಲಾಯಿತು. ನಂತರದಲ್ಲಿ ಸಂವಿಧಾನ ರಚನೆಯಾದ ಬಳಿಕ ರಾಜ್ಯಪಾಲರೆಂದು ಹುದ್ದೆಯ ಹೆಸರನ್ನು ಮಾರ್ಪಡಿಸಲಾಯಿತು. ಅರಸರ ಮೈಸೂರು ಹಾಗೂ ಬೆಂಗಳೂರಿನ ಆಸ್ತಿಗೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ ನಿಯಮಗಳನ್ನು ತರಲಾಯಿತು. ಮೈಸೂರು ಅರಸರು ಸೇರಿದಂತೆ ಸರ್ಕಾರಕ್ಕೆ ತಮ್ಮ ಸಂಸ್ಥಾನಗಳನ್ನು ಬಿಟ್ಟುಕೊಟ್ಟ ದೇಶದ ಎಲ್ಲ ಅರಸರಿಗೂ ಸರ್ಕಾರದಿಂದ ರಾಜಧನ ನೀಡಲು ತೀರ್ಮಾನಿಸಲಾಯಿತು. ಆದರೆ ಪ್ರಜಾಪ್ರಭುತ್ವ ರೂಪುಗೊಂಡ ನಂತರವೂ ರಾಜಧನ ನೀಡುವ ಬಗ್ಗೆಯೂ ರಾಷ್ಟ್ರಾದ್ಯಂತ ಹಲವು ಕಡೆ ವಿರೋಧ ವ್ಯಕ್ತವಾಯಿತು. ದೇಶದ ಜನತೆಯ ವಿರೋಧಕ್ಕೆ ಮಣಿದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅರಸರಿಗೆ ನೀಡಲಾಗುತ್ತಿದ್ದ ರಾಜಧನವನ್ನು ರದ್ದುಗೊಳಿಸಿದರು. ರಾಜಪ್ರಭುತ್ವ ಹೋದರೂ, ರಾಜ್ಯಪಾಲರಾಗಿ ಜಯಚಾಮರಾಜೇಂದ್ರ ಒಡೆಯರ್ ಅವರ ಮುಂದುವರಿಕೆಯೂ ನಂತರ ಮುಂದುವರೆಯಲಿಲ್ಲ. ಅದರ ಔಚಿತ್ಯದ ಪ್ರಶ್ನೆಯಿಂದ, ಅವರನ್ನು ನಂತರ ಮದ್ರಾಸು ರಾಜ್ಯದ ರಾಜ್ಯಪಾಲರನ್ನಾಗಿಸಲಾಯಿತು; ನಿವೃತ್ತರೂ ಆದರು.
ಜೆ ಹೆಚ್ ಪಟೇಲ್ ಸರ್ಕಾರದಿಂದ ಬೆಂಗಳೂರು ಅರಮನೆ ಸ್ವಾಧೀನಕ್ಕೆ
ಬೆಂಗಳೂರು ಅರಮನೆ ವಿವಾದ ಶುರುವಾದುದು ಜಯಚಾಮರಾಜೇಂದ್ರ ಒಡೆಯರ್ 1974ರಲ್ಲಿ ನಿಧನರಾದ ಬಳಿಕ. ಹಿಂದು ಉತ್ತಾರಾಧಿಕಾರ ಕಾಯ್ದೆ ಪ್ರಕಾರ ಜಯಚಾಮರಾಜೇಂದ್ರ ಅವರ ವಾರಸುದಾರರಿಗೆ ಅರಮನೆ ಆಸ್ತಿ ಸೇರಬೇಕಾಗಿತ್ತು. ಆಗ ಮಾಜಿ ಸಂಸದ ಶ್ರೀಕಂಠದತ್ತ ಒಡೆಯರ್ ಅಲ್ಲದೆ ಅವರ ಸೋದರಿಯರು ಪಾಲುದಾರರಾಗಿದ್ದರು. ಇವರೆಲ್ಲರಿಗೂ ಆಸ್ತಿಯನ್ನು ಹಂಚಲಾಯಿತು. ಆದರೆ ರಾಜ ಸಂಸ್ಥಾನ ಹೋಗಿ ಜನರ ಪ್ರಭುತ್ವ ಬಂದು ಹಲವು ವರ್ಷಗಳಾದರೂ ಸಾವಿರಾರು ಕೋಟಿ ಆಸ್ತಿಯನ್ನು ಅನುಭವಿಸುತ್ತಲೇ ಇದ್ದರು. ಇದು ಪ್ರಜಾಪ್ರಭುತ್ವವೋ ಅಥವಾ ಫ್ಯೂಡಲಿಸಂ ಮುಂದುವರಿಕೆಯೋ ಎಂಬ ಪ್ರಶ್ನೆ ಆಗಲೂ ಇತ್ತು. ಜೆ.ಎಚ್.ಪಟೇಲ್ ಮತ್ತು ಸಿದ್ದರಾಮಯ್ಯನವರು ಸಿಎಂ ಮತ್ತು ಡಿಸಿಎಂ ಆಗಿದ್ದ ಸಮಯದಲ್ಲಿ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿತು. ಇಬ್ಬರೂ ಸಮಾಜವಾದಿ ಹಿನ್ನೆಲೆಯವರು. ಹಾಗಾಗಿ ರಾಜವಂಶಸ್ಥರ ಆಸ್ತಿಯ ಕುರಿತು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಯಿತು.
1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ ಹೆಚ್ ಪಟೇಲ ಸರ್ಕಾರ 427 ಎಕರೆ ಮತ್ತು 16 ಗುಂಟೆ ಸ್ಥಳವನ್ನು ಬೆಂಗಳೂರು ಅರಮನೆ ಸ್ವಾಧೀನ ಕಾಯ್ದೆಯ ಮೂಲಕ ರಾಜ್ಯ ವಿಧಾನಮಂಡಲದಲ್ಲಿ ಅಂಗೀಕರಿಸಿ ಬೆಂಗಳೂರು ಅರಮನೆಯನ್ನು ಸ್ವಾಧೀನಕ್ಕೆ ಪಡೆದಿತ್ತು. ಅಧಿನಿಯಮ 1996ರ 8 ಮತ್ತು 9ನೇ ಪ್ರಕರಣಗಳ ಅನುಸಾರ 11 ಕೋಟಿ ರೂಪಾಯಿ ಎಂದು ನಿರ್ಧರಿಸಲಾಗಿತ್ತು. ಆಗ ಮೈಸೂರು ಮಹಾರಾಜರ ಉತ್ತರಾಧಿಕಾರಿಗಳು ಮತ್ತು ಬೆಂಗಳೂರು ಅರಮನೆ ಮತ್ತು ಜಮೀನಿನಲ್ಲಿ ತಮಗೂ ಪಾಲಿದೆಯೆಂದು ಹೇಳಿಕೊಂಡಿರುವ ಇತರೆ ಅನೇಕರು ಈ ಕಾಯ್ದೆಯನ್ನು ಪ್ರಶ್ನಿಸಿದ್ದರು. ಈ ರಿಟ್ ಅರ್ಜಿಗಳನ್ನು 1997ರ ಮಾರ್ಚ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ವಜಾ ಮಾಡಿ ಸ್ವಾಧೀನ ಕಾಯ್ದೆಯನ್ನು ಎತ್ತಿ ಹಿಡಿದಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. 1997ರ ಏಪ್ರಿಲ್ 30ರಂದು ನೀಡಿದ್ದ ತೀರ್ಪಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ರಸ್ತೆ ಅಗಲೀಕರಣ ಸಂಬಂಧ ಇತ್ತೀಚಿಗೆ ಮತ್ತೊಂದು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಮೇಖ್ರಿ ವೃತ್ತದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಅರಮನೆ ಜಮೀನನ್ನು ಬಳಸಿಕೊಳ್ಳಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿತ್ತು.
ಟಿಡಿಆರ್ ಕಾಯ್ದೆ ಹಾಗೂ ಕಾಣದ ಕೈಗಳ ಕೈವಾಡ
ಈ ನಡುವೆ 2005ರಲ್ಲಿ ವಶಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ(ಟಿಡಿಆರ್) ನಿಯಮವನ್ನು ಜಾರಿಗೆ ತರಲಾಯಿತು. ಸಾರ್ವಜನಿಕ ಪ್ರಾಧಿಕಾರಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಜಮೀನಿನ ಮಾಲೀಕರುಗಳಿಗೆ ಹಣದ ರೂಪದ ಪರಿಹಾರದ ಬದಲಾಗಿ ಅಭಿವೃದ್ಧಿ ಹಕ್ಕುಗಳನ್ನು ವಿತರಿಸಲಾಗುತ್ತಿದೆ. ಈ ಸಂಬಂಧ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಮತ್ತು ಬಳಕೆ ಪ್ರಮಾಣ ಪತ್ರಗಳನ್ನು ಕೂಡ ವಿತರಿಸಲಾಗುತ್ತಿದೆ. ಭೂಮಾಲೀಕರು ಒಂದು ನಿರ್ದಿಷ್ಟ ಮೊತ್ತಕ್ಕೆ ಹೆಚ್ಚುವರಿ ಅಭಿವೃದ್ಧಿ ಹೊಂದಿದ ಜಾಗವನ್ನು ಮತ್ತೊಂದು ಸ್ಥಳಕ್ಕೆ ಅಥವಾ ಹೆಚ್ಚಿನ ಅಭಿವೃದ್ಧಿ ಹೊಂದಿದ ಜಾಗದ ಅಗತ್ಯವಿರುವ ಇತರ ಉದ್ದೇಶಕ್ಕೆ ಬಳಸಬಹುದು ಅಥವಾ ವರ್ಗಾಯಿಸಬಹುದು.
ಮಾಲೀಕರು ಒಂದು ಪ್ರದೇಶದಲ್ಲಿ ತಮ್ಮ ಅಭಿವೃದ್ಧಿ ಹಕ್ಕುಗಳನ್ನು ಬಿಟ್ಟು ಕೊಟ್ಟರೆ ಮಾತ್ರ ಈ ವರ್ಗಾವಣೆ ಸಾಧ್ಯ. ತಮಗೆ ಹಣ ಬೇಡ ಟಿಡಿಆರ್ ಹಕ್ಕುಗಳನ್ನು ನೀಡಿ ಎನ್ನುತ್ತಿರುವ ಮೈಸೂರಿನ ರಾಜ ವಂಶಸ್ಥರು ಉದ್ದೇಶ ಅಷ್ಟೆ ಮೊತ್ತದ ಹಣಗಳಿಕೆಯಾಗಿದೆ. ಕೆಲವೊಂದು ಮೂಲಗಳ ಪ್ರಕಾರ ಆಡಳಿತ ಹಾಗೂ ವಿರೋಧ ಪಕ್ಷಗಳ ಪ್ರಮುಖರು ಬೆಂಗಳೂರು ಅರಮನೆಯ ಜಾಗವನ್ನು ಬೇನಾಮಿ ಹೆಸರಿನಲ್ಲಿ ಮೈಸೂರು ಅರಸರ ಮೂಲಕ ದೊಡ್ಡ ಮೊತ್ತಕ್ಕೆ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯನ್ನು ಅವರಿಗೆ ಕೊಡಬೇಕಿರುವ ಕಾರಣ ಸರ್ಕಾರದಿಂದ ಟಿಡಿಆರ್ ಕೇಳುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿರುವುದು ನಾಡಿನ ಹಾಗೂ ಜನತೆಯ ಹಿತದೃಷ್ಟಿಯಿಂದ ಒಳ್ಳೆಯ ಕ್ರಮವಾಗಿದೆ.
ಏನಿದು ಯೋಜನೆ?
ಅರಮನೆ ರಸ್ತೆಯ ಬಳಿ ವಿಪರೀತ ಸಂಚಾರ ದಟ್ಟಣೆಯುಂಟಾಗುವ ಕಾರಣ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್‌ಸೇತುವೆವರೆಗೂ ಉಕ್ಕಿನ ಸೇತುವೆ ನಿರ್ಮಿಸಬೇಕೆಂದು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಉಕ್ಕಿನ ಸೇತುವೆಯಿಂದ ಪರಿಸರ ಹಾಳಾಗುತ್ತದೆ ಎಂದು ಬಿಜೆಪಿ ಬೆಂಬಲಿಗರು ಮತ್ತು ಪರಿಸರಾಸಕ್ತರು ನಡೆಸಿದ ಪ್ರತಿಭಟನೆಯ ಕಾರಣಕ್ಕೆ ಅದನ್ನು ಹಿಂತೆಗೆದುಕೊಳ್ಳಬೇಕಾಯಿತು. ನಂತರದಲ್ಲಿ ಅರಮನೆ ಮೈದಾನದ ಪೂರ್ವ ಭಾಗಕ್ಕಿರುವ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಮೇಖ್ರಿ ವೃತ್ತದ ತನಕ 2.8 ಕಿ.ಮೀ. ರಸ್ತೆಯನ್ನು ಅಗಲೀಕರಣ ಮಾಡುವ ಯೋಜನೆಯೂ ಮುನ್ನೆಲೆಗೆ ಬಂದಿತು. ಇದಲ್ಲದೇ ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್ ತನಕ 1.8 ಕಿ.ಮೀ. ಜಯಮಹಲ್ ರಸ್ತೆ ಸೇರಿದೆ. 50 ರಿಂದ 60 ಅಡಿ ಇರುವ ರಸ್ತೆಯನ್ನು 150 ಅಡಿಗಳಾಗಿ ವಿಸ್ತರಣೆ ಮಾಡಲಾಗುತ್ತದೆ. ಈ ಯೋಜನೆಗೆ ಸುಮಾರು 38 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಸ್ತೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇದೆ. ಆದರೆ ಅಗಲೀಕರಣಗೊಳಿಸುವ ಖಾಲಿ ಜಾಗದ ಎಡಗಡೆಯಲ್ಲಿ ಹಲವು ಖಾಸಗಿ ಸ್ವತ್ತುಗಳಿವೆ. ಬಲಗಡೆ ಅರಮನೆಗೆ ಸೇರಿದ ಖಾಲಿ ಜಾಗವಿದೆ. ಇದರಿಂದ ರಸ್ತೆ ಅಗಲೀಕರಣ ಸುಲಭವಾಗುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
ಒಟ್ಟಿನಲ್ಲಿ ಮೈಸೂರು ರಾಜವಂಶಸ್ಥರೋ ಅಥವಾ ಅವರಿಂದ ಈಗಾಗಲೇ ಬೇನಾಮಿಯಾಗಿ ಒಪ್ಪಂದ ಮಾಡಿಕೊಂಡಿರುವ ಬಲಾಢ್ಯ ರಾಜಕಾರಣಿಗಳೋ – ದುಬಾರಿ ಟಿಡಿಆರ್ ಕೇಳದಂತೆ ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಸುಗ್ರೀವಾಜ್ಙೆಗೇ ಮುಂದಾಗಿದೆ. ರಾಜ್ಯದ ಸಂಪತ್ತನ್ನು ಕಾಪಾಡುವ ದೃಷ್ಟಿಯಿಂದ ಈ ನಡೆಯನ್ನು ಶ್ಲಾಘಿಸಬೇಕಿದೆ. ಆದರೆ, ಪಟ್ಟಭದ್ರರು ಇಲ್ಲಿಗೇ ಸುಮ್ಮನಾಗುತ್ತಾರಾ, ಸರ್ಕಾರವನ್ನು ಮಣಿಸಲು ಬೇರೆ ದಾರಿ ಹುಡುಕುತ್ತಾರಾ ಕಾದು ನೋಡಬೇಕಿದೆ.
ದಡೀರ್ ಶ್ರೀಮಂತರಾದ ಅಥವಾ ರಾಜಕೀಯಕ್ಕೆ ಬಂದ ಮೇಲೆ ಸ್ಟೀಮಂತರಾದ ಅವರಿಗೂ ಈ ಕಾನೂನು ಏಕಿಲ್ಲ. ಇದ್ದರೂ execution ಇಲ್ಲ ಏಕೆ. ರಾಜರು ಆದಮೇಲೆ ಮಟ್ಟ ಮಾನ್ಯರಿಗೂ ತರಲು ಒತ್ತಡ ಉಂಟಾಗುತ್ತದೆ. ನೋಡಿ ತಾಳ್ಮೆಯಿಂದ ತೀರ್ಮಾನ ಮಾಡಿ
ಗುಲಾಮರಿಗಾಗಿ ವಿಷಯವನ್ನು ತಿರುಚುವ ಗುಲಾಮ ಮಾಧ್ಯಮ
ಮೊದಲು ಎಲ್ಲ ವಿಷಯ ತಿಳಿದು ಬರಿಯಪ್ಪ ಕಾಂಗ್ರೆಸ್ ನೋರು ಎಷ್ಟು ಕೊಟ್ಟರು ನಿನಗೆ ನಿನಗೆ ಹೇಗೆ ಬೇಕೋ ಹಾಗೆ ಬರಿದ್ದಿದ್ದಿ
ನಿನಗೆ ಬ್ರಷ್ಟ ಜನತಾ ಪಾರ್ಟಿ ಯವರು ಎಸ್ಟು ಕೊಟ್ಟಿದ್ದಾರೆ
Erstwhile Mysore state was one among the first to sign to the instrument of accession and accepted to join sovereign India.. supported throughout the processes…
Don’t manipulate people by these kind of lies.. be responsible..
Keep ur facts checked before Posting anything…