ಪಕ್ಷದ ರಾಜ್ಯಾಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ. ಆದರೂ ಸಂಸದ ಡಾ ಕೆ ಸುಧಾಕರ್ ಅವರು ನನ್ನ ವಿರುದ್ಧ ಮಾತನಾಡಿದ್ದಾರೆ. ಅವರಿಗೆ ಅನುಭವ ಮತ್ತು ಮಾಹಿತಿ ಕೊರತೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಸಂಸದ ಸುಧಾಕರ್ ಅವರು ನಿಮ್ಮನ್ನು ಬದಲಾಯಿಸಬೇಕೆಂದು ಆಗ್ರಹಿಸಿ ಹೈಕಮಾಂಡ್‌ಗೆ ದೂರು ಕೊಟ್ಟಿರುವ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿ, “ಚುನಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವುದನ್ನು ಗೌರವಾನ್ವಿತ ಎಲ್ಲ ಹಿರಿಯರು ತಿಳಿದುಕೊಳ್ಳಬೇಕು. ನಾನು ರಾಜ್ಯದ ಅಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಚುನಾವಣೆ ಸಂಬಂಧ ಅಭಿಪ್ರಾಯ ಕೊಟ್ಟಿಲ್ಲ, ಕೊಡುವುದಕ್ಕೆ ಅವಕಾಶವೂ ಇಲ್ಲ. ಕೇಂದ್ರದಿಂದ ನಮ್ಮ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಚುನಾವಣೆಯ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. 13 ಜನ ವೀಕ್ಷಕರನ್ನು ಕೂಡ ನೇಮಕ ಮಾಡಿದ್ದರು. ಪ್ರತಿಯೊಬ್ಬ ವೀಕ್ಷಕರಿಗೂ ಕೂಡ ಮೂರು-ಮೂರು ಜಿಲ್ಲೆಗಳ ಜವಾಬ್ದಾರಿ ಕೂಡ ನೀಡಲಾಗಿತ್ತು” ಎಂದು ವಿಜಯೇಂದ್ರ ಹೇಳಿದರು.
“ಪ್ರತಿ ಜಿಲ್ಲೆಗೂ ಚುನಾವಣಾಧಿಕಾರಿ, ರಿಟರ್ನಿಂಗ್ ಆಫೀಸರ್, ಕೋರಿಟರ್ನಿಂಗ್ ಆಫೀಸರ್ ಕೂಡ ನೇಮಕಾತಿ ಆಗಿದೆ. ಅವರ ಸಮಕ್ಷಮದಲ್ಲಿ ಆಯಾ ಜಿಲ್ಲೆಗಳಲ್ಲಿ ಎಲ್ಲ ಪ್ರಮುಖರ ವಿಶ್ವಾಸಕ್ಕೆ ತೆಗೆದುಕೊಂಡು ಮೂರು ಹೆಸರುಗಳನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜಿಲ್ಲೆಯ ತಂಡದಿಂದ ಕಳುಹಿಸಿದ 3 ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟು ಅಲ್ಲಿಂದ ಅಂತಿಮ ತೀರ್ಮಾನವಾದ ಬಳಿಕ ಚುನಾವಣಾ ಪ್ರಕ್ರಿಯೆ ನಡೆದಿದೆ. ಅಧ್ಯಕ್ಷರ ಹೆಸರುಗಳ ಘೋಷಣೆಯಾಗಿದೆ. ಈ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಪಾತ್ರ ಶೂನ್ಯ” ಎಂದರು.
“ನಾನು ಸುಧಾಕರ್ ಸೇರಿದಂತೆ ಯಾರನ್ನೂ ದೂಷಿಸುವುದಿಲ್ಲ. ಈ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅವರಿಗೆ ಗೊಂದಲವಿದೆ. ಇಡೀ ದೇಶದಲ್ಲಿ ಪಕ್ಷದ ಸಂಘಟನಾತ್ಮಕ ಚುನಾವಣೆ ಇದೇ ರೀತಿಯಲ್ಲಿ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹಾಗೆಯೇ ನಡೆದಿದೆ. ಹೊಸದಾಗಿ ಯಾವುದೇ ಪ್ರಕ್ರಿಯೆ ಮಾಡಲು ನನಗೆ ಅಧಿಕಾರವಿಲ್ಲ. ಕೇಂದ್ರ ಎಲ್ಲವನ್ನೂ ಗಮನಿಸುತ್ತಿದೆ. ಸುಧಾಕರ್ ಅವರ ಆಕ್ರೋಶಭರಿತ ಮಾತುಗಳನ್ನು ನಾನು ಕೇಳಿದ್ದೇನೆ. ವಿಜಯೇಂದ್ರ ಅವರು ನಮ್ಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಅನ್ನುವ ಮಾತನ್ನು ಹೇಳಿದ್ದಾರೆ. ಈ ರೀತಿ ಹೇಳಿಕೆಗಳನ್ನು ದಯವಿಟ್ಟು ಕೊಡಬೇಡಿ. ಅದು ನಿಮಗೂ, ನನಗೂ ಗೌರವ ತರುವುದಿಲ್ಲ” ಎಂದು ಹೇಳಿದರು.
“ಚಿಕ್ಕಬಳ್ಳಾಪುರದಲ್ಲಿ ಆಯ್ಕೆಯಾದವರು ಕೂಡ ಪಕ್ಷದ ಒಬ್ಬ ಕಾರ್ಯಕರ್ತ ಮತ್ತೆ ಸುಧಾಕರ್ ಅವರ ಸಂಬಂಧಿ ಕೂಡ ಹೌದು. ಚುನಾವಣಾ ಪ್ರಕ್ರಿಯೆಯನ್ನು ಅವರು ಅರ್ಥ ಮಾಡಿಕೊಳ್ಳಲಿ. ಅವರು ಏನೇ ಟೀಕೆ ಮಾಡಿದರೂ ನಾನು ಟೀಕಿಸಲು ಹೋಗುವುದಿಲ್ಲ. ಮಾಜಿ ಸಚಿವರಾಗಿ ಅವರಿಗೂ ಸಹ ಜವಾಬ್ದಾರಿಗಳಿವೆ. ಪಕ್ಷ ಏನು ತೀರ್ಮಾನ ಮಾಡಿದೆಯೋ ಅದಕ್ಕೆ ಕೇಂದ್ರದ ಸಮ್ಮತಿ ಕೂಡ ಇದೆ. ಅದರಲ್ಲಿ ಯಾರೂ ಮೂಗು ತೂರಿಸುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
ತಪ್ಪುಗಳಿದ್ದರೆ ತಿದ್ದಿಕೊಳ್ಳುವೆ
“ಈ ರೀತಿ ಹೇಳಿಕೆ ಕೊಡುವುದು ಪಕ್ಷಕ್ಕೂ ಗೌರವ ತರುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನನ್ನ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದ್ದಾರೆ. ತಪ್ಪುಗಳಿದ್ದರೆ ತಿದ್ದಿಕೊಳ್ಳಲು ನಾನು ಸಿದ್ಧ. ಸುಧಾಕರ್ ಅವರನ್ನು ಭೇಟಿ ಮಾಡುತ್ತೇನೆ. ನಾನೂ ಸಹ ತಿದ್ದಿಕೊಳ್ಳುತ್ತೇನೆ. ನಾನೊಬ್ಬ ರಾಜ್ಯದ ಅಧ್ಯಕ್ಷ. ಇದು ಮಂತ್ರಿಸ್ಥಾನ ಅಲ್ಲ. ಮನೆ ಮಠ ಬಿಟ್ಟು ಕೆಲಸ ಮಾಡುತ್ತಿದ್ದೇನೆ. ಪಕ್ಷ ಅವರ ಸ್ವತ್ತೂ ಅಲ್ಲ, ನನ್ನ ಸ್ವತ್ತೂ ಅಲ್ಲ. ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹಾಗಾಗಿ ಪಕ್ಷ ನನ್ನ ಸ್ವತ್ತು, ನಾನು ಮುಂದೆ ಮುಖ್ಯಮಂತ್ರಿ ಆಗಬೇಕು ಎನ್ನುವ ಯೋಚನೆ ತಲೆಯಲ್ಲಿಟ್ಟುಕೊಂಡು ನಾನು ಪಕ್ಷ ಸಂಘಟನೆ ಮಾಡುತ್ತಿಲ್ಲ. ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಖಂಡಿತ ಆ ರೀತಿ ಮಾತನಾಡಬಾರದು ಎಂದು ನಾನು ಮನವಿ ಮಾಡುತ್ತೇನೆ” ಎಂದರು.
“ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಚಿಕ್ಕಬಳ್ಳಾಪುರದಲ್ಲಿ ರಾಮಚಂದ್ರ ಅವರು ಸಹ ಅಪೇಕ್ಷಿತರಿದ್ದರು. ಆದರೆ ಚುನಾವಣೆ ಪ್ರಕ್ರಿಯೆಯನ್ನು ಅವರು ಗೌರವಿಸಿದ್ದಾರೆ. ಸುಧಾಕರ್ ಅವರು ತಪ್ಪು ತಿಳಿದುಕೊಳ್ಳಬಾರದು. ಒಬ್ಬ ಕಾರ್ಯಕರ್ತನಾಗಿ ಅವರಿಗೂ ಅಧಿಕಾರವಿದೆ. ಜಿಲ್ಲೆಯಲ್ಲಿ ಯಾರ್ಯಾರನ್ನು ಪದಾಧಿಕಾರಿಗಳನ್ನು ಮಾಡಬೇಕು ಎಂಬ ಬಗ್ಗೆ ಅವರು ಸಲಹೆ ಕೊಡಲಿ. ಸಚಿವರಾಗಿ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಕೋರ್ ಕಮಿಟಿ ಸಭೆಯ ನಂತರ ಅವರ ಹತ್ತಿರ ಮಾತನಾಡಿದ್ದೇನೆ. ಮಾಧ್ಯಮಗಳಲ್ಲಿ ವರದಿ ಬಂದಾಗ ರಾಜ್ಯದ ಅಧ್ಯಕ್ಷನಾಗಿ ಅವರ ಜತೆಗೆ ಮಾತನಾಡುವುದು ನನ್ನ ಕರ್ತವ್ಯ. ಮಾಧ್ಯಮದ ಮುಂದೆ ಅವರು ಚರ್ಚೆ ಮಾಡಬಾರದಿತ್ತು. ಏನೇ ಭಿನ್ನಾಭಿಪ್ರಾಯ ಇದ್ದರೂ ಹಿರಿಯರ ಜತೆಗೆ ಕೂತು ಬಗೆಹರಿಸಿಕೊಳ್ಳೋಣ ಎಂದು ಅವರಿಗೆ ತಿಳಿಸಿದ್ದೇನೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.