ಭಾಲ್ಕಿ ತಾಲ್ಲುಕಿನಲ್ಲಿ ಕೈಗೊಂಡಿರುವ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರಜಾ ಪ್ರಭುತ್ವ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಭಾಲ್ಕಿ ಪಟ್ಟಣದ ತಹಸೀಲ್ ಕಚೇರಿಯ ಎದುರು ಪ್ರಜಾ ಪ್ರಭುತ್ವ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಗಗನ ಫುಲೆ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ, ಜಿಲ್ಲಾಧಿಕಾರಿಗಳಿಗೆ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ, ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಿ, ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ಜನರಿಗೆ ಶುದ್ಧ ನೀರು ಒದಗಿಸಬೇಕುʼ ಎಂದು ಆಗ್ರಹಿಸಿದರು.

ಜೆಜೆಎಂ ಕಾಮಗಾರಿ ಪೂರ್ಣಗೊಂಡರೂ ನೀರಿನ ಸಮಸ್ಯೆ :
ʼಜೆಜೆಎಂ ಯೋಜನೆಯಡಿ ಮನೆ-ಮನೆಗೆ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆಗಳು ಕಂಡು ಬಂದ ಹಿನ್ನಲೆ ಭಾಲ್ಕಿ ತಾಲ್ಲೂಕಿನ ಮದಕಟ್ಟಿ, ಬಾಜೋಳಗಾ, ಬಾಜೋಳಗಾ(ಕೆ), ಬ್ಯಾಲಹಳ್ಳಿ(ಡಬ್ಲ್ಯೂ), ಮೊರಂಬಿ ಹಾಗೂ ರಾ.ಗೌಡಗಾಂವ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆʼ ಎಂದರು.
ಜೆಜೆಎಂ ಕಾಮಗಾರಿ ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಗೊಳ್ಳದೇ ತಾಲ್ಲೂಕಿನ ಜನತೆಗೆ ದ್ರೋಹ ಬಗೆದಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಎರಡು ವಾರದೊಳಗೆ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದೇಶದ ಶೇ. 55 ರಷ್ಟು ಟ್ರಕ್ ಚಾಲಕರಲ್ಲಿ ದೃಷ್ಟಿದೋಷ; ಅಪಘಾತಗಳಿಗೆ ಕಾರಣವಾದ ಕಣ್ಣಿನ ಸಮಸ್ಯೆ!
ಮುಖಂಡರಾದ ಮಹೇಂದ್ರ ಪ್ಯಾಗೆ, ಸಿದ್ದಾರ್ಥ ಪ್ಯಾಗೆ, ಶ್ರೀಮಂತ ಭೋಸ್ಲೆ, ರಾಜೇಂದ್ರ ಕರವಂದ, ಗೌತಮ ಹಳ್ಳಿಖೇಡೆ, ಶ್ರೀನಿವಾಸ ಫುಲೆ, ಗೌತಮ ಡಿಗಾರೆ, ಅಶೋಕ, ಅವಿನಾಶ ಪಟ್ನೆ, ಆಕಾಶ ಸಿಂದೆ, ಎಸ್.ಕೆ.ಜಯ್, ನಾಗಾರ್ಜುನ ಫುಲೆ, ಸುಶೀಲಕುಮಾರ ಕಲವಂಡೆ, ಪುಟ್ಟು ಕಣಜೆ, ಆಕಾಶ, ದಿಲೀಪಕುಮಾರ ಶೇರಿಕಾರ, ಪರಶುರಾಮ ವರ್ಮಾ, ಆಕಾಶ ಕಾಳೆ ಹಾಗೂ ದಲಿತ ಮೈನಾರಿಟಿ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.