ಹಾಸನ ನಗರದ ವಿವೇಕಾನಗರ ಬಳಿ ಯುಜಿಡಿ ಕಾಮಗಾರಿಗಾಗಿ ರಸ್ತೆ ಅಗೆದು ಸರಿಯಾಗಿ ಮುಚ್ಚದಿರುವ ಹಿನ್ನೆಲೆಯಲ್ಲಿ ಗುಂಡಿಗಳಾಗಿದ್ದು, ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿದ್ದ ಶಾಲಾ ಬಸ್ ಚಕ್ರ ಗುಂಡಿಗೆ ವಾಲಿದೆ. ಒಂದು ವೇಳೆ ಬಸ್ ಕೆಳಗೆ ಬಿದ್ದಿದ್ದರೆ ಅನಾಹುತ ಸಂಭವಿಸುತಿತ್ತು. ಅದೃಷ್ಠವಶಾತ್ ಇದೀಗ ಭಾರೀ ಅಪಾಯ ತಪ್ಪಿದೆ.
ನಗರದ ಮೈಲ್ ಸ್ಟೋನ್ ಆಕಾಡೆಮಿ ಶಾಲೆಯ ಬಸ್ ಇದಾಗಿದ್ದು, ಶಾಲೆ ಮುಗಿದ ಬಳಿಕ ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಲು ಶಾಲೆಯಿಂದ ರಿಂಗ್ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
“ಯುಜಿಡಿ ಕಾಮಗಾರಿಗಾಗಿ ನಡು ರಸ್ತೆಯುದ್ದಕ್ಕೂ ಅಗೆದು ಗುಂಡಿ ಮಾಡಿದ್ದು, ಸರಿಯಾಗಿ ಮುಚ್ಚದೇ ಇರುವ ಹಿನ್ನೆಲೆಯಲ್ಲಿ, ಯುಜಿಸಿ ಸರ್ಕೆಯಾಗಿ ಗುಂಡಿಯಲ್ಲಿನ ಮಣ್ಣು ತೇವವಾಗಿತ್ತು. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಶಾಲಾ ಬಸ್ ಗುಂಡಿಗೆ ಜಾರಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಏನಾದರೂ ಅನಾಹುತವಾದರೇ ಇದಕ್ಕೆ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಗುಂಡಿ ತೋಡಿದ ಮೇಲೆ ಕಾಮಗಾರಿ ಬೇಗ ಮುಗಿಸಬೇಕು. ಮುಗಿಸಿದ ಮೇಲೆ ಗುಂಡಿಯನ್ನು ಸರಿಯಾಗಿ ಮುಚ್ಚುವ ಕೆಲಸ ಮಾಡಬೇಕು” ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಾಡುಹಂದಿ ಬೇಟೆಗೆ ಹೊಂಚು ಹಾಕಿದ್ದ ಮೂವರ ಬಂಧನ
ಈ ಬಗ್ಗೆ ಸ್ಥಳೀಯ ನಿವಾಸಿ ವೈಭವ್ ಮಾತನಾಡಿ, “ವಿವೇಕನಗರದ ಮುಖ್ಯ ರಸ್ತೆಯುದ್ದಕ್ಕೂ ಹತ್ತಾರು ಶಾಲೆ ಕಾಲೇಜುಗಳಿವೆ. ದಿನಕ್ಕೆ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚಾರ ಮಾಡುವ ಪ್ರಮುಖ ರಸ್ತೆ ಇದಾಗಿದೆ. ಇಂತಹ ರಸ್ತೆಯಲ್ಲೇ ಗುಂಡಿ ತೆಗೆದು ಸರಿಯಾಗಿ ಮುಚ್ಚದಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ” ಎಂದರು.
“ಈಗಾಗಲೇ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕಾಮಗಾರಿ ಮಾಡುವಾಗ ಸಮರ್ಪಕವಾಗಿ ಮಾಡಬೇಕು. ಕೂಡಲೇ ಸಂಬಂಧಿದಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶೀಘ್ರವಾಗಿ ರಸ್ತೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.