ಮನುಷ್ಯನ ಸಣ್ಣ ತಪ್ಪುಗಳಿಂದಲೇ ದೊಡ್ಡ ಅನಾಹುತಗಳಾಗುತ್ತವೆ. ಹಾಗಾಗಿ ವಾಹನ ಚಲಿಸುವಾಗ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್ ಹೇಳಿದರು.
ಬಾಗೇಪಲ್ಲಿ ಪಟ್ಟಣದಲ್ಲಿ ಗುರುವಾರ ಶಿಕ್ಷಣ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಚಾರಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಾಲಕರು ವಾಹನದಲ್ಲಿ ಕುಳಿತಾಗ ತಮ್ಮ ಕುಟುಂಬದವರನ್ನು ಮತ್ತು ತಮ್ಮ ಜವಾಬ್ದಾರಿಯನ್ನು ಅರಿತು ವಾಹನ ಚಲಿಸಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮದ್ಯಸೇವಿಸಿ ವಾಹನ ಚಾಲನೆ ಮಾಡುವುದು, ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುವುದು ಅಪಘಾತಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಇದೇ ವೇಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಡಿ.ವಿ.ಜಿ. ಮುಖ್ಯ ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಎಂದು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ವಾಹನ ಸವಾರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ವರ್ಗ ಮತ್ತು ಪೊಲೀಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.