ಪ್ರಕೃತಿ ಸೌಂದರ್ಯ ಪ್ರವಾಸಿ ತಾಣವಾಗಿರುವ ಮಲೆನಾಡಿನ ಚಿಕ್ಕಮಗಳೂರು ಭಾಗದಲ್ಲಿ ವಾಸ ಮಾಡುತ್ತಿರುವ ಜನರು ಅದೆಷ್ಟೋ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನಾವು ಪ್ರತಿದಿನ ನೋಡಬಹುದು.

ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲೂಕಿನ ಅಗಲಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗಲಗಂಚಿ ಗ್ರಾಮದ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲೂ ನಿತ್ಯ ಓಡಾಡಲು ಹಾಗೂ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯಲು ಸೂಕ್ತವಾದ ರಸ್ತೆ ಎನ್ನುವುದನ್ನೇ ಇಲ್ಲಿನ ನಿವಾಸಿಗಳು ಕಂಡಿಲ್ಲ.

“ಹಾಗಲಗಂಚಿ ಗ್ರಾಮದಲ್ಲಿ ಸುಮಾರು 70ಕ್ಕೂ ಅಧಿಕ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಎಂಟರಿಂದ ಹತ್ತು ಗ್ರಾಮಗಳ ಜನರು ಹಾಗಲಗಂಚಿ ಗ್ರಾಮದ ಮಾರ್ಗವಾಗಿಯೇ ಸಾಗಬೇಕು. ಹಾಗೆಯೇ ಶೃಂಗೇರಿ ಮತ್ತು ಕೊಪ್ಪ ತಾಲೂಕಿಗೆ ಹಾದು ಹೋಗುವ ಸಂಪರ್ಕ ರಸ್ತೆಯಾಗಿದೆ. ಸಾವಿರಾರು ಸಂಖ್ಯೆಯ ಜನರು ಈ ಜಾಗದಲ್ಲಿ ಓಡಾಡುತ್ತಾರೆ. ನೂರಾರು ಜನರು ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಆದರೆ ನಮಗೆ ಈವರೆಗೂ ಯಾವುದೇ ಸರ್ಕಾರದಿಂದ ಸವಲತ್ತು ಸಿಕ್ಕಿಲ್ಲ. ಅದರಲ್ಲೂ ರಸ್ತೆಗಳು ಹಳ್ಳ, ದಿಣ್ಣೆಗಳಿಂದ ಕೂಡಿವೆ. ಮಳೆಗಾಲ ಬಂತೆಂದರೆ ಇಲ್ಲಿ ಪರಿಸ್ಥಿತಿ ನೋಡಲಾಗುವುದೇ ಇಲ್ಲ. ಏಕೆಂದರೆ ಮಕ್ಕಳ ಪಠ್ಯ ಪುಸ್ತಕಗಳಿಗೆ ಕೆಸರು ಅಂಟಿರುತ್ತದೆ, ರಸ್ತೆಯ ಅವ್ಯವಸ್ಥೆ ಕಂಡು ಆಟೋದವರು ನಮ್ಮ ಗ್ರಾಮಕ್ಕೆ ಬರುವುದಿಲ್ಲ” ಎಂದು ಗ್ರಾಮಸ್ಥರು ಈ ದಿನ.ಕಾಮ್ನೊಂದಿಗೆ ತಮ್ಮ ನೋವನ್ನು ಹಂಚಿಕೊಂಡರು.

“ಆಟೋದವರಿಗೆ, ನಾವು ನಮ್ಮ ಗ್ರಾಮಕ್ಕೆ ಏಕೆ ಬರುವುದಿಲ್ಲವೆಂದರೆ. ʼನಿಮ್ಮ ಗ್ರಾಮಕ್ಕೆ ಬಾಡಿಗೆ ಬಂದರೆ ₹100ರಿಂದ ₹300 ಬಾಡಿಗೆ ಪಡೆಯುತ್ತೇವೆ. ಗಾಡಿ ಕೆಟ್ಟು ನಿಂತರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆʼ ಎನ್ನುತ್ತಾರೆ. ಸದ್ಯದ ಮಟ್ಟಿಗಿನ ಸಾರಿಗೆ ವ್ಯವಸ್ಥೆಗೆ ನಮ್ಮ ಊರಿನ ಕಾರ್ತಿಕ್ ಎಂಬುವವರು ಆಟೋ ತೆಗೆದುಕೊಂಡಿದ್ದಾರೆ. ಅವರ ಹೊಸ ಗಾಡಿಗೂ ಸಮಸ್ಯೆಯಾಗಿದೆ. ನಮ್ಮೂರಿಂದ ಬಸ್ ಬರುವ ಜಾಗಕ್ಕೆ ಹೋಗಬೇಕಂದ್ರೆ 5 ನಿಮಿಷ ಸಾಕು. ಆದರೆ ಈ ರಸ್ತೆಯಿಲ್ಲಿ ತಲುಪಲು 30-40 ನಿಮಿಷ ಬೇಕಾಗುತ್ತದೆ” ಎಂದು ಗ್ರಾಮದ ಜನರು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮುಖ್ಯವಾಹಿನಿಗೆ 6 ಜನ ನಕ್ಸಲ್: ಶ್ರಮಿಸಿದ ಪ್ರತಿಯೊಬ್ಬರಿಗೆ ಅಭಿನಂದನೆ ಸಲ್ಲಿಸಿದ ಶಾಂತಿಗಾಗಿ ನಾಗರಿಕ ವೇದಿಕೆ
“ವೃದ್ಧರು ಈ ರಸ್ತೆಯಿಲ್ಲಿ ತುಂಬಾ ಸಲ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹಾಗೆಯೇ ನಮ್ಮ ಗ್ರಾಮದ ಅನಾರೋಗ್ಯ ಪೀಡಿತರನ್ನು ಈ ರಸ್ತೆಯ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಿಲ್ಲ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅದೆಷ್ಟೋ ಮಂದಿ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ” ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಇನ್ನು ಮುಂದೆಯಾದರೂ, ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರು ಗಮನವಹಿಸಿ ಹಾಗಲಗಂಚಿ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ” ಎಂದರು.