ಪ್ರಸ್ತುತ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮೆಣಸಿನಕಾಯಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಮೆಣಸಿನಕಾಯಿ ಬೆಳೆಗೆ ಸರಿಯಾದ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ಜಲ್ಲಾಧಿಕಾರಿಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಮನವಿ ಸಲ್ಲಿಸಿತು.
ಸದ್ಯ ಒಂದು ಕ್ವಿಂಟಲ್ ಮೆಣಸಿನಕಾಯಿ ₹8,000 ದಿಂದ ₹10,000 ವರೆಗೆ ಖರೀದಿಯಾಗುತ್ತಿದೆ. ಇಷ್ಟು ಕಡಿಮೆ ಬೆಲೆಯಿಂದ ರೈತರಿಗೆ ಲಾಭವಿರಲಿ, ಹಾಕಿದ ಬಂಡವಾಳವೂ ಬರುತ್ತಿಲ್ಲ. ಇದನ್ನು ಪರಿಗಣಿಸಿ ಕೂಡಲೇ ಮೆಣಸಿನಕಾಯಿ ಕ್ವಿಂಟಲ್‌ಗೆ ₹25,000 ಹಾಗೂ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹50,000 ಬೆಂಬಲ ಬೆಲೆ ನೀಡಬೇಕು ಎಂದು ನಗರದ ಗಾಂಧಿ ಭವನದಿಂದ ಪ್ರತಿಭಟನೆ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಮಾತನಾಡಿ, “ಕೇಂದ್ರ ಸರ್ಕಾರವು ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ನೀಡಲು ಮುಂದಾಗುತ್ತಿಲ್ಲ. ವಾಣಿಜ್ಯ ಬೆಳೆಯಾದ ಕಾರಣ ಇದು ಎಂಎಸ್‌ಪಿ ಅಡಿಯಲ್ಲಿ ಸೇರುವುದಿಲ್ಲವೆಂದು ಕಾರಣ ನೀಡಿ ಬೆಂಬಲ ಬೆಲೆ ನೀಡದೆ, ನಿರಾಕರಿಸುತ್ತಿದೆ. ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಬಳ್ಳಾರಿಯ ಭಾಗಶಃ ಮೆಣಸಿನಕಾಯಿ ಬೆಳೆಯು ಬ್ಯಾಡಗಿಯ ಮಾರುಕಟ್ಟೆಗೆ ಹೋಗಿ ಮಾರಾಟವಾಗುತ್ತಿದೆ. ಇದರಿಂದ ಪ್ರಯಾಣದ ವೆಚ್ಚವೂ ಸಹ ಹೆಚ್ಚಾಗುತ್ತಿದೆ. ಅದ್ದರಿಂದ, ಕೇಂದ್ರ, ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಬೇಕು” ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ‘ಮೆಣಸಿನಕಾಯಿ ಬೆಳೆಗೆ ತಗುಲುವ ಕಪ್ಪು ಮಚ್ಚೆ ರೋಗಕ್ಕೆ ಔಷಧ ಕಂಡುಹಿಯಬೇಕು. ಬೀಜ, ರಸಗೊಬ್ಬರ ಮತ್ತು ಕೀಟನಾಶಕದ ಬೆಲೆ ನಿಯಂತ್ರಿಸಬೇಕು. ಸರ್ಕಾರವೇ ಔಷಧ ವಿತರಣಾ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ಮಾ. 4 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ’ ಎಂದರು.
ಈ ಸುದ್ದಿ ಓದಿದ್ದೀರಾ?: ಬಳ್ಳಾರಿ | ನಾನು ಪ್ರಾಮಾಣಿಕ, ಪಕ್ಷ ಬಿಡುವ ಮಾತೇ ಇಲ್ಲ: ಮಾಜಿ ಸಚಿವ ಶ್ರೀರಾಮುಲು
ಈ ವೇಳೆ ಕೂಳೂರು ಬಸಣ್ಣ, ಸೋಮಸಮುದ್ರ ಹೊನ್ನೂರಪ್ಪ, ಜಿಲ್ಲಾ ಸಮಿತಿ ಸದಸ್ಯ ಮಂಗಪ್ಪ, ಧನರಾಜ್, ಗೋಪಾಲ್, ಕಾಸಿಂ ಸಾಬ್, ಮಲ್ಲಪ್ಪ, ರೈತ ಮುಖಂಡ ಕಲ್ಲುಕಂಬ ಪಂಪಾಪತಿ, ರೈತರಾದ ರಾಮಕೃಷ್ಣ, ವೀರೇಶ್ ಗೌಡ, ತಿಮ್ಮಪ್ಪ, ಮೋವಿಂದ್, ಗಂಗಾಧರ, ಎಂಕಾತ್, ಗಾದಿಲಿಂಗಪ್ಪ, ಮಂಜುನಾಥ ಗೌಡ, ರಾಮನ ಗೌಡ, ರಾಜಶೇಖರ್ ರೆಡ್ಡಿ ಇದ್ದರು.
