ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಮುಂದಿರಿಸಿ ಉತ್ತರಿಸುವಂತೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೋಸಿನ್ ಒತ್ತಾಯಿಸಿದರು.
ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿರುವ ಅವರು, “2015ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್ ಕಾಂತರಾಜ್ ಅವರು ವೈಜ್ಞಾನಿಕವಾಗಿ ತಯಾರಿಸಿದ ಹಿಂದುಳಿದ ವರ್ಗಗಳ ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಈವರೆಗೆ ಏಕೆ ಅಂಗೀಕರಿಸಿಲ್ಲ?. ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಚರ್ಚೆಗೆ ಮಂಡಿಸಿಲ್ಲ? ರಾಹುಲ್ ಗಾಂಧಿಯವರು ಕೇಂದ್ರ ಮಟ್ಟದಲ್ಲಿ ಜಾತಿ ಜನಗಣತಿಗೆ ಒತ್ತು ನೀಡುತ್ತಿರುವಾಗ ರಾಜ್ಯದಲ್ಲಿ ಕಾಂತರಾಜ್ ಆಯೋಗದ ಶಿಫಾರಸು ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿರುವುದು ಏಕೆ?” ಎಂದು ಕೇಳಿದರು.
“2023ರ ಚುನಾವಣೆ ಪ್ರಣಾಳಿಕೆಯ ಭರವಸೆಯಂತೆ ಹಿಂದಿನ ಬಿಜೆಪಿ ಸರ್ಕಾರ ಮುಸಲ್ಮಾನರಿಂದ ಕಿತ್ತುಕೊಂಡ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವ ಬದ್ಧತೆ ಏನಾಯಿತು? ಗೆದ್ದು ಅಧಿಕಾರಕ್ಕೆ ಬಂದ ಮೊದಲನೆಯ ಮಂತ್ರಿಮಂಡಲದಲ್ಲಿ ಅನುಷ್ಠಾನಗೊಳಿಸುವ ವಾಗ್ದಾನ ಜಾರಿಗೆ ಏಕೆ ಮುಂದಾಗುತ್ತಿಲ್ಲ” ಎಂದು ಪ್ರಶ್ನಿಸಿದರು.

“ಸರ್ಕಾರದ ಭೂಮಿಯನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿರುವ ಭೂ ಹಿಡುವಳಿದಾರರಿಗೆ ಎಕರೆಗೆ ₹1000ದಂತೆ 25 ಎಕರೆವರೆಗೂ 30 ವರ್ಷಕ್ಕೆ ಗುತ್ತಿಗೆ ನೀಡಲು 2023ರ ಮೇ 18ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ಆದೇಶ ಪತ್ರವನ್ನು ರದ್ದುಗೊಳಿಸಿ, ಶತಮಾನಗಳಿಂದ ಪಾರಂಪರಿಕ ನಿವೇಶನ ಹಾಗೂ ಭೂರಹಿತ ಬಡಕುಟುಂಬಗಳ ಸಮೀಕ್ಷೆ ನಡೆಸಿ ಹಕ್ಕುಪತ್ರ, ಪಹಣಿ ನೀಡಲು ಮುಂದಾಗುವಿರಾ? ಅಥವಾ ಭೂಹಿಡುವಳಿದಾರ ಬಲಾಢ್ಯ ಸಮಾಜದ ಪರವಾಗಿ ನಿಲ್ಲುವಿರಾ?” ಎಂದು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಒಳಮೀಸಲಾತಿ ಅನುಷ್ಠಾನಕ್ಕೆ ಜನಪರ ಚಳುವಳಿಗಳ ಒಕ್ಕೂಟ ಆಗ್ರಹ
“ಸಂಸತ್ತಿನ ಜಂಟಿ ಸಮಿತಿಯು ವಕ್ಫ್(ತಿದ್ದುಪಡಿ) ಮಸೂದೆಗೆ ಬಹುತೇಕ ಬಿಜೆಪಿ ಸಂಸದರು ಸೂಚಿಸಿರುವ ಬದಲಾವಣೆಗಳನ್ನು ಎತ್ತಿ ಹಿಡಿದಿದ್ದು, ವಿರೋಧ ಪಕ್ಷದ ಸದಸ್ಯರ ಸಲಹೆಗಳಿಗೆ ಮನ್ನಣೆ ನೀಡದೆ ಮತದಾನದ ನಂತರ ಸದನಕ್ಕೆ ವರದಿ ಸಲ್ಲಿಸಲು ಮುಂದಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರ ಯಾವ ನಿಲುವನ್ನು ತೆಗೆದುಕೊಳ್ಳಲಿದೆ?. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೀಳುವ ಹಂತದಲ್ಲಿದ್ದ ಕೊಡಗು ಜಿಲ್ಲಾಧಿಕಾರಿಯವರ ಕಚೇರಿ ಮುಂಭಾಗದ ತಡೆಗೋಡೆಯ ಕಾಮಗಾರಿಯನ್ನು ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವ ಆದೇಶ ನೀಡಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳಬೇಕಾದರೆ ಇನ್ನೆಷ್ಟು ಬಾರಿ ಅಧಿಕಾರಿಗಳಿಗೆ ತಾವು ಆದೇಶ ನೀಡಬೇಕಾಗಿದೆ” ಎಂದು ಪ್ರಶ್ನಿಸಿದರು.
“ಸಿದ್ದರಾಮಯ್ಯ 1.0 ಎಂದರೆ ಧೈರ್ಯ, ಸಮರ್ಥ, ಮಾತಿಗೆ ಬದ್ಧ, ನುಡಿದಂತೆ ನಡೆಯುವ ವ್ಯಕ್ತಿತ್ವ. ಸಿದ್ದರಾಮಯ್ಯ 2.0 ಬದಲಾಗಿದ್ದಾರಾ?” ಎಂದರು.