“ಆರಂಭದ ದಿನಗಳಿಂದ ತಮ್ಮ ಕಡೆಯ ದಿನಗಳವರೆಗೂ ಬಯ್ಯಾರೆಡ್ಡಿ ಅವರು ತತ್ವಗಳಿಗೆ ಬದ್ದರಾಗಿ ಬದುಕಿದರು. ತಾವು ವಹಿಸಿಕೊಂಡ ಕೆಲಸಗಳನ್ನ ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದ ಎಡಪಂಥೀಯ ಕಾರ್ಯಕರ್ತರಾಗಿ ಆ ನಂತರ ಎಡಪಂಥೀಯ ನಾಯಕರಾಗಿ ಬೆಳೆದು ಬಂದವರು. ಆಸ್ಪತ್ರೆಯಲ್ಲಿ ಇದ್ದ ಸಮಯದಲ್ಲಿಯೂ ಕೂಡ ಹೋರಾಟಕ್ಕೆ ಜಯವಾಗಲಿ ಎನ್ನುತ್ತಿದ್ದರು. ನಾನು ಬಯ್ಯಾರೆಡ್ಡಿ ಅವರನ್ನ ಸ್ವಲ್ಪ ಸೂತ್ರ ಬದ್ಧವಾಗಿ ವಿವರಿಸುತ್ತೇನೆ. ಅವರು ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತರು” ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಹಿರಿಯ ನಾಯಕ ಕಾಂ. ಜಿ ಸಿ ಬಯ್ಯಾರೆಡ್ಡಿ ಅವರಿಗೆ ಭಾವಪೂರ್ಣ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ವೇಳೆ ‘ಜನಚಳವಳಿಗಳ ನಾಯಕ ಪ್ರೀತಿಯ ಸಂಗಾತಿ ಜಿ ಸಿ ಬಯ್ಯಾರೆಡ್ಡಿ’ ಪುಸ್ತಕವನ್ನು ಜಸ್ಟಿಸ್ ಗೋಪಾಲ್ ಗೌಡ್ ಅವರು ಬಿಡುಗಡೆ ಮಾಡಿದರು.
“ತಾವು ನಂಬಿದ ಸಿದ್ದಾಂತಕ್ಕೆ ನಿಷ್ಠವಾಗಿ ನಡೆದುಕೊಳ್ಳುವುದು ಸಹ ನೈತಿಕತೆ. ನೈತಿಕತೆಯ ಅನೇಕ ಆಯಾಮಗಳಿವೆ. ಸಾಮಾಜಿಕ ನೈತಿಕತೆ, ರಾಜಕೀಯ ನೈತಿಕತೆ, ಆರ್ಥಿಕ ನೈತಿಕತೆ, ಸಾಂಸ್ಕ್ರತಿಕ ನೈತಿಕತೆ ಇವೆ. ಜತೆಗೆ, ವ್ಯಕ್ತಿಗತವಾದ ನೈತಿಕತೆಯೂ ಇದೆ. ವ್ಯಕ್ತಿಗತವಾದ ನೈತಿಕತೆ ಮತ್ತು ಸೈದ್ದಾಂತಿಕ ನೈತಿಕತೆ ಎರಡನ್ಬೂ ಒಟ್ಟಿಗೆ ಇಟ್ಟು ಕೊಂಡಿರುವುದು ಆ ನಿಷ್ಠೆಯಲ್ಲಿಯೇ ಒಂದು ನೈತಿಕತೆ ಇತ್ತು. ಹಾಗಾಗಿ, ಬಯ್ಯಾರೆಡ್ಡಿ ಅವರಲ್ಲಿ ಇದ್ದುದು, ನೈತಿಕ ನಿಷ್ಠಾವಂತಿಕೆ. ಯಾವುದೇ ಸಿದ್ದಾಂತ ಸೃಜನಶೀಲವಾಗದೆ, ಚಲನಶೀಲವಾಗದೆ ಹೋದರೆ ಅದು ಜಡವಾಗುತ್ತದೆ. ತಾತ್ವಿಕತೆ ಮತ್ತು ಒಂದು ಸಿದ್ಧಾಂತ ಹೃದಯಸ್ತವಾಗುತ್ತದೆ. ಅದಕ್ಕೊಂದು ಮಾನವೀಯವಾದ ಮಿಡಿತ ಇರುತ್ತದೆ. ಮಿದುಳು ಮತ್ತು ಮನಸ್ಸನ್ನು ಒಂದು ಮಾಡುತ್ತದೆ. ತಾತ್ವಿಕತೆ ಮಿದುಳಿಗೆ ಸಂಬಂಧಿಸಿದ್ದು, ಹೃದಯ ಮನಸ್ಸಿಗೆ ಸಂಬಂಧಿಸಿದ್ದು. ಹಾಗಾಗಿ, ಇವರ ತಾತ್ವಿಕತೆ ಮತ್ತು ಹೃದಯಕ್ಕೂ ಇರುವ ಸಂಬಂಧ ಅವರ ಸಿದ್ಧಾಂತವನ್ನ ಹೆಚ್ಚು ಮಾನವೀಯಗೊಳಿಸಿದ ಆಯಾಮವಾಗಿದೆ. ಹಾಗಾಗಿ, ಬಯ್ಯಾರೆಡ್ಡಿ ಅವರು ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ. ಅವರು ಹೆಚ್ಚು ಕಾಣಿಸಿಕೊಂಡಿದ್ದು ಪ್ರಾಂತ ರೈತ ಸಂಘದ ನೇತೃತ್ವ ವಹಿಸಿದ್ದಾಗ. ಭೂ ಆಕ್ರಮ, ಬೆಳೆಗಳಿಗೆ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡಿದರು. ಭೂಮಿಗೆ ಸಂಬಂಧಿ ಹೋರಾಟದಲ್ಲಿ ದುಡಿದಿದ್ದಾರೆ. ಭೂಮಿಗೆ ಬದ್ದತೆಯ ಬಯ್ಯಾರೆಡ್ಡಿ. ಎಲ್ಲವನ್ನು ಒಳಗೊಂಡ ಭೂಮಿ ಸಂಬಂಧಿ ಆಗಿ ದುಡಿದಿದ್ದಾರೆ. ಇದು ಅವರ ಬದುಕಿನ ಬದ್ದತೆ. ಇವರನ್ನ ಕಳೆದುಕೊಂಡ ಎಡಪಂಥೀಯ ಹೋರಾಟ ನಷ್ಟ ಅನುಭವಿಸಿದೆ” ಎಂದು ಹೇಳಿದರು.
ಜಸ್ಟಿಸ್ ವಿ ಗೋಪಾಲಗೌಡ ಮಾತನಾಡಿ, “ತತ್ವ ಸಿದ್ದಾಂತಕ್ಕೆ ಬದ್ಧತೆಯನ್ನು ರೂಢಿಸಿಕೊಂಡು, ಎಡಪಂಥೀಯ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಾರ್ಟಿ ಸಿದ್ದಾಂತ ಒಪ್ಪಿ, ರೈತ ಸಂಘ ಸಾಮೂಹಿಕ ಸಂಘಟನೆಯಲ್ಲಿ ತೊಡಗಿ ರಾಜ್ಯದ ಉದ್ದಗಲಕ್ಕೂ ರೈತ ಪರ ಹೋರಾಟವನ್ನೂ ದಿಟ್ಟತನದಿಂದ ಮಾಡಿ, ಆರೋಗ್ಯ ಕೆಟ್ಟರೂ ಕೂಡ ನಂಬಿದ್ದ ಸಿದ್ದಾಂತಕ್ಕೆ ಮಣಿದು ಜನಪರ ಹೋರಾಟ ಮಾಡಿದ ಧೀರ ಯುವ ಮಾರ್ಕ್ಸ್ ವಾದಿ ನಾಯಕ ಜಿ ಸಿ ಬಯ್ಯಾರೆಡ್ಡಿ. ಬಯ್ಯಾರೆಡ್ಡಿ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರರು. ಅವರು ಮಾರ್ಕ್ಸ್ ವಾದಿ ಸಿದ್ದಾಂತದ ತತ್ವಕ್ಕೆ ಒಳಪಟ್ಟಿರಲಿಲ್ಲ. ನೋವು ನಲಿವಿನಿಂದ ಸಿದ್ದಾಂತಕ್ಕೆ ಕಟ್ಟುಪಾಡು ಆಗಿದ್ದರಿಂದ, ಆರೋಗ್ಯಕ್ಕಿಂತ ಸಿದ್ದಾಂತ ಮುಖ್ಯ. ಮಾರ್ಕ್ಸ್ ವಾದಿ ಸಿದ್ದಾಂತ ಜನರ ಮಧ್ಯೆ ಹೋಗಬೇಕು. ಸಮಾಜದ ಪರಿವರ್ತನೆ ಅಗತ್ಯ ಇದೆ ಎಂದು ನಂಬಿದ್ದರು. ಮಾರ್ಕ್ಸ್ ವಾದಿ ಸಿದ್ದಾಂತ ಸಮಾಜದ ಪರಿವರ್ತನೆಗೆ ಪುನರ್ಜನ ಆಗಲೇಬೇಕಿದೆ. ಬಯ್ಯಾರೆಡ್ಡಿ ಅವರ ನಮ್ಮನ್ನ ಅಗಲಿರಬಹುದು, ಅವರ ಸಿದ್ದಾಂತಗಳು, ಹೋರಾಟಗಳು ನಮ್ಮ ಹೃದಯದಲ್ಲಿ ನಾಟಿದೆ” ಎಂದು ತಿಳಿಸಿದರು.
ಬಯ್ಯಾರೆಡ್ಡಿ ಮಗಳು ನಿಲೋನಾ ಮಾತನಾಡಿ, “ನೀವೆಲ್ಲರೂ ನಮ್ಮ ಜತೆಗೆ ಇರುವುದು ತುಂಬಾ ಖುಷಿಯಾಗಿದೆ. ಅಪ್ಪ ಫ್ಯಾಮಿಲಿ ಅಥವಾ ತತ್ವ ಅಂದರೆ, ಅವರು ತತ್ವವನ್ನೇ ಆಯ್ಕೆ ಮಾಡುತ್ತಿದ್ದರು. ಇದು ನಿಜಕ್ಕೂ ನನಗೆ ಹೆಮ್ಮೆ ಇದೆ. ಎಲ್ಲರಿಗೂ ಅಪ್ಪ ಸಿಕ್ಕಿದ್ದರೇ, ನಾನು ‘ಗ್ರೇಟ್ ಹ್ಯೂಮನ್ ಬಿಯಿಂಗ್’ ಪಡೆದಿದ್ದೀನಿ ಎನ್ನುವ ಖುಷಿ ಇದೆ. ಈಗ ವಾತಾವರಣ ಸರಿ ಇಲ್ಲ. ಹಾಗಾಗಿ, ಎಲ್ಲರೂ ಆರೋಗ್ಯದ ಬಗ್ಗೆ ಗಮನ ಹರಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷಿಸಬೇಡಿ” ಎಂದು ತಿಳಿಸಿದರು.
ಕವಿ, ಮಾಜಿ ಸಂಸದ ಎಲ್ ಹನುಮಂತಯ್ಯ ಮಾತನಾಡಿ, “ಜಿ ಸಿ ಬಯ್ಯಾರೆಡ್ಡಿ ಅವರ ಸಾವು ಅಕಾಲಿಕವಾದದ್ದು, ತಮ್ಮ ಹೋರಾಟದ ಕಾರಣದಿಂದಾಗಿ ಅವರ ಆರೋಗ್ಯ ಏರುಪೇರಾಯಿತು. ನಮ್ಮ ಹೋರಾಟದ ಜತೆಗೆ ಇರಬೇಕಾದವರ ಸಾವು ನಿಜಕ್ಕೂ ದುಃಖ ತರಿಸಿದೆ. ವಿವಿಧ ಸಂಘಟನೆಗಳನ್ನ ನೇಯ್ಗೆ ಮಾಡುತ್ತಿದ್ದ ನೇಯ್ಗೆಗಾರ ಬೈಯಾರೆಡ್ಡಿ ಅವರು. ಜನಾಂದೋಲನ ಬಲಪಡಿಸಿರುವುದು ಹೇಗೆ, ಕಮ್ಯೂನಿಷ್ಟ ಪಕ್ಷ ಜನಾಂದೋಲನ ತರಬೇಕು ಎಂದು ಹಲವು ಬಾರಿ ಅವರು ನನ್ನ ಜತೆಗೆ ಚರ್ಚೆ ಮಾಡಿದ್ದರು. ಬಯ್ಯಾರೆಡ್ಡಿ ಎಲ್ಲರನ್ನ ಸಮನ್ವಯಗೊಳಿಸಿ ಜನಾಂದೋಲನ ತೆಗೆದುಕೊಂಡು ಹೋಗುವುದು ಹೇಗೆ ಎಂಬ ಬಗ್ಗೆ ಚಿಂತನೆ ಮಾಡುತ್ತಿದ್ದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚೆಕ್ ಬೌನ್ಸ್ | ಸ್ನೇಹಮಯಿ ಕೃಷ್ಣ ಮೋಸ ಸಾಬೀತು, ಕಾಂಗ್ರೆಸ್ ನಾಯಕರು ಹೇಳುವುದೇನು?
ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ, “ಬಯ್ಯಾರೆಡ್ಡಿ ಅವರ ಜತೆಗೆ ಸುಮಾರು 40 ವರ್ಷದ ಒಡನಾಟ ಇದೆ. ಕಮ್ಯೂನಿಸ್ಟ್ ಪಕ್ಷದಲ್ಲಿದ್ದರು ಕೂಡ ರೈತ ಸಂಘದಲ್ಲಿದ್ದರು. ರೈತರಿಗಾಗಿ ಹೋರಾಡಿದರು. ಚನ್ನರಾಯಪಟ್ಟಣ ಭೂಮಿ ಹೋರಾಟದಲ್ಲಿ ಭೂಮಿ ಬಿಡಬೇಕು, ರೈತರನ್ನ ಉಳಿಸಬೇಕು ಎಂದಿದ್ದರು. ಲಂಗ್ಸ್ ಸಮಸ್ಯೆ ಇದ್ದಾಗ ಆಕ್ಸಿಜನ್ ಹಾಕಿಕೊಂಡು ಸಿಎಂ ಸಭೆಗೆ ಬಂದಿದ್ದರು. ಯಾಕೆ ಎಂದು ಕೆಳಿದರೇ ಇದು ಮಹತ್ವದ ಸಭೆ ರೈತರಿಗೆ ನ್ಯಾಯ ಸಿಗಬೇಕು ಎಂದೆನ್ನುತ್ತಿದ್ದರು. ರೈತರ ಹೋರಾಟವನ್ನು ಬಹಳ ಮಹತ್ತರವಾಗಿ ಕೈಗೆತ್ತಿಕೊಂಡಿದ್ದರು. ಸಮಾಜ ಸುಧಾರಣೆಗಾಗಿ ದುಡಿದ ವ್ಯಕ್ತಿ ಇನ್ನು ಸಾಕಷ್ಟು ದಿನ ಬದುಕಬೇಕಿತ್ತು. ಆಗ ಹೋರಾಟ ಇನ್ನೂ ಮಹತ್ತರ ಎತ್ತರಕ್ಕೆ ಹೋಗುತ್ತಿತ್ತು. ಬಯ್ಯಾರೆಡ್ಡಿ ಸಾವು ಬಹಳ ದೊಡ್ಡ ಪ್ರಮಾಣದಲ್ಲಿ ರೈತ ಸಮುದಾಯಕ್ಕೆ ಕಮ್ಯೂನಿಸ್ಟ್ ಪಾರ್ಟಿಗೆ ನಷ್ಟ ಉಂಟಾಗಿದೆ. ಬಯ್ಯಾರೆಡ್ಡಿ ಅವರ ಹೋರಾಟಗಳು ಇನ್ನು ಜೀವಂತವಾಗಿದೆ. ನಾವು ಅವರ ಹೋರಾಟದ ಹಾದಿಯಲ್ಲಿ ಸಾಗಬೇಕಿದೆ” ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, “ಬಯ್ಯಾರೆಡ್ಡಿ ನನಗೆ ಕೊನೆಗೆ ಭೇಟಿ ಆಗಿದ್ದು ಚನ್ನರಾಯಪಟ್ಟಣ ಭೂಮಿ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭೇಟಿಯಾಗಿದ್ದರು. ಬಯ್ಯಾರೆಡ್ಡಿ ಅವರಿಗೆ ವೈಯಕ್ತಿಕ ಬದುಕಿಗಿಂತ ಜನ ಚಳವಳಿ ಮಾಡಬೇಕು ಎಂಬುದು ಹೆಚ್ಚಾಗಿ ಇತ್ತು. ಹೀಗಾಗಿ ಅವರು ಅವರ ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆಯಾಯಿತು. ಒಬ್ಬ ಹೋರಾಟಗಾರ ತನ್ನ ಸಾವನ್ನ ಯಾವತ್ತಿಗೂ ಬೆನ್ನಿಗೆ ಕಟ್ಟಿಕೊಂಡೇ ಕ್ರಾಂತಿ ಹೆಜ್ಜೆಗಳನ್ನ ಇಡುತ್ತಿರುತ್ತಾನೆ. ಆದರೆ, ಜನರ ಬದುಕಿನ ಬಗ್ಗೆ ಯೋಚನೆ ಮಾಡುತ್ತಿರುವಂತಹ ಚಿಂತಕರನ್ನ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿ ಇಟ್ಟಿದ್ದಾರೆ. ಪ್ರಭುತ್ವ ಪ್ರಶ್ನೆ ಮಾಡುವರರನ್ನ ಕಾರಣ ಇಲ್ಲದೇ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಕೆಂಪು, ನೀಲಿ, ಹಸಿರು ಒಂದಾಗಲೇಬೇಕು ಎಂದು ಬಯ್ಯಾರೆಡ್ಡಿ ಅವರು ಹೇಳುತ್ತಿದ್ದರು. ಬಯ್ಯಾರೆಡ್ಡಿ ಅವರು ಚಾರಿತ್ರಿಕವಾದ ಹೋರಾಟವನ್ನ ನಮ್ಮ ನಡುವೆ ಕಟ್ಟಿ ಹೋಗಿದ್ದಾರೆ. ಇಂತಹ ಅನೇಕ ಕಾಮ್ರೆಡ್ ಗಳನ್ನ ಕಳೆದುಕೊಂಡಿದ್ದೇವೆ. ನಮ್ಮ ಹೋರಾಟವನ್ನ ತಾರ್ಕಿಕವಾಗಿ ಕಟ್ಟಿದಾಗ ಮಾತ್ರ ನಮ್ಮ ಚಳವಳಿ ಕಟ್ಟಿದ ಹೋರಾಟಗಾರರಿಗೆ ಸಲ್ಲಿಸುವ ಬಹುದೊಡ್ಡ ಕಾಣಿಕೆಯಾಗುತ್ತದೆ” ಎಂದು ತಿಳಿಸಿದರು.