ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೇ ಹೈ ಪವರ್ ವಿದ್ಯುತ್ ತಂತಿಯ ಟವರ್ ಪಕ್ಕದಲ್ಲಿ ನಡೆದಿರುವ ಮಣ್ಣು ಗಣಿಗಾರಿಕೆ ಕುರಿತು ಈ ದಿನ.ಕಾಮ್ ವರದಿ ಪ್ರಕಟಿಸಿತ್ತು. ದುರುಳರಿಗೆ ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲು ಯಾವ ಜಮೀನು, ಯಾವ ಭೂಮಿಯಾದರೇನು ಎನ್ನುವಂತಾಗಿದೆ. ಅಲ್ಲದೆ ಶವಸಂಸ್ಕಾರಕ್ಕೆಂದು ಮಂಜೂರಾಗಿದ್ದ ಸ್ಮಶಾನವನ್ನೂ ಅಗೆದು ಅಕ್ರಮವಾಗಿ ಮಣ್ಣು ಸಾಗಾಣಿಕೆಗೆ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನದಿ ದಡದಲ್ಲಿ ಹಾಗೂ ಸುತ್ತಲ ಹಲವು ಗ್ರಾಮಗಳಲ್ಲಿ ನೈಸರ್ಗಿಕವಾದ ಉತ್ತಮ ಕೆಂಪು ಮತ್ತು ಕಪ್ಪು ಮಣ್ಣು ಇದೆ. ಈ ಮಣ್ಣೇ ಹಲವು ಹಳ್ಳಿಗಳ ಗೋಮಾಳ, ಖರಾಬು ಭೂಮಿ, ಸ್ಮಶಾನ ಸೇರಿದಂತೆ ಬಡ ರೈತರ ಹೊಲಗಳಿಗೆ ಕಂಟಕವಾಗಿ ಪರಿಣಮಿಸಿದೆ. ಇಲ್ಲಿನ ಮಣ್ಣನ್ನು ಅಕ್ರಮವಾಗಿ ಬಗೆದು ಇಟ್ಟಿಗೆ ಭಟ್ಟಿ, ರೋಡು ನಿರ್ಮಾಣ ಇನ್ನಿತರ ಕಾರ್ಯಗಳಿಗೆ ಕಾನೂನಾತೀತವಾಗಿ ಸಾಗಿಸಿ ಮಾರಾಟ ಮಾಡಲಾಗುತ್ತಿದ್ದು, ಮಣ್ಣು ಮಾಫಿಯಾ ಎಂದೇ ತಾಲೂಕಿನಲ್ಲಿ ಹೆಸರಾಗಿದೆ.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ಮಶಾನಕ್ಕಾಗಿ ಕಂದಾಯ ಇಲಾಖೆಯಿಂದ 4/*2ನೇ ಸರ್ವೆ ನಂಬರ್‌ನಲ್ಲಿ ಒಂದು ಎಕರೆ ಜಾಗವನ್ನು ಮಂಜೂರು ಮಾಡಲಾಗಿತ್ತು. ಈ ಜಾಗ ನದಿ ತೀರದಲ್ಲಿದ್ದು, ಇಟ್ಟಿಗೆ ಭಟ್ಟಿಗೆ ಯೋಗ್ಯ ಮಣ್ಣು ಸಿಗುವುದರಿಂದ ಮಣ್ಣು ಮಾರುವ ಮಾಫಿಯಾದವರು ಈ ಜಾಗದ ಮಣ್ಣು ಲೂಟಿ ಮಾಡಿದ್ದಾರೆಂದು ಆರೋಪಿಸಿಲಾಗುತ್ತಿದೆ. ಸ್ಮಶಾನದಲ್ಲಿ 15ರಿಂದ 20 ಅಡಿ ಆಳದ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಅಷ್ಟು ಆಳಕ್ಕೆ ಮಣ್ಣು ಗಣಿಗಾರಿಕೆ ಮಾಡಿ ಗುಂಡಿಗಳನ್ನು ಸೃಷ್ಟಿಸಿದ್ದಾರೆ. ಇಲ್ಲಿ ಹೆಣ ಹೂಳಲು ಹೋದವರೂ ಕೂಡ ಒಂಚೂರು ಆಯತಪ್ಪಿದರೂ ತಾವೇ ಹೆಣವಾಗುವ ಅಪಾಯವಿದೆ. ನದಿಯ ದಡವಾಗಿರುವ ಕಾರಣ ನೀರು ಬಸಿದು ಅಗೆದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸ್ಮಶಾನದಲ್ಲಿ ಕಾಲಿಡದ ಪರಿಸ್ಥಿತಿ ಎದುರಾಗಿದೆ.
ಇದರಿಂದ ಕಂಗೆಟ್ಟ ದಲಿತರು ಈ ಸ್ಮಶಾನದ ಉಸಾಬರಿಯೇ ಬೇಡವೆಂದು ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಜಮೀನಿಲ್ಲದ ಬಡವರು, ಕೂಲಿ ಕಾರ್ಮಿಕರಿಗೆ ನದಿ ದಡವೇ ಗತಿಯಾಗಿದೆ. ಸರ್ಕಾರವೇ ಜಾಗ ಮಂಜೂರು ಮಾಡಿದರೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಮತ್ತು ಹಣದಾಸೆಯಿಂದ ಮಣ್ಣು ಮಾಫಿಯಾ ತನ್ನ ಕರಾಮತ್ತು ತೋರಿದೆ. ಹೀಗಾಗಿ ಸರ್ಕಾರದಿಂದ ಮಂಜೂರಾದ ಸ್ಮಶಾನದ ಜಾಗವು ಮಣ್ಣು ಗಣಿಗಾರಿಕೆಗೆ ಬಲಿಯಾಗಿದ್ದು ಪರಿಶಿಷ್ಟ ಜಾತಿಯವರ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ.
ಅಕ್ರಮ ಗಣಿಗಾರಿಕೆ ದಂಧೆಕೋರರ ಕಣ್ಣಿಗೆ ಬಿದ್ದಿರುವ ಈ ಸ್ಮಶಾನದಲ್ಲಿ ಕೆಲವು ವರ್ಷಗಳಿಂದ ಅವ್ಯಾಹತವಾಗಿ ಸಾವಿರಾರು ಲೋಡು ಮಣ್ಣು ಗಣಿಗಾರಿಕೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಇದಾವುದೂ ಸ್ಥಳೀಯ ಆಡಳಿತದ ಗಮನಕ್ಕೆ ಬಂದಿಲ್ಲವೇ, ಅಥವಾ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ. ಇದರಿಂದಾಗಿ ಪರಿಶಿಷ್ಟ ಸಮುದಾಯ ಮತ್ತೆ ತೊಂದರೆಗೊಳಗಾಗಿದ್ದು, ಅಂತ್ಯಸಂಸ್ಕಾರಕ್ಕಾಗಿ ಮತ್ತೆ ನದಿ ದಡ ಅಥವಾ ರಸ್ತೆಯ ಇಕ್ಕೆಲಗಳನ್ನು ಆಶ್ರಯಿಸುವ ಅನಿವಾರ್ಯತೆ ಎದುರಾಗಿದೆ. ಅಕ್ರಮ ಮಣ್ಣು ಗಣಿಗಾರಿಕೆ ನಡೆಸುವವರ ಹಾಗೂ ಈ ಕುರಿತು ನಿರ್ಲಕ್ಷ್ಯ ತೋರಿರುವ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಗ್ರಾಮದ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಈ ಅಕ್ರಮ ಮಣ್ಣು ದಂಧೆಕೋರರ ದೌರ್ಜನ್ಯ ಮತ್ತು ಅಕ್ರಮ ಹೇಗಿದೆ ಎಂದರೆ, ಇತ್ತೀಚೆಗೆ ನಡೆಸಿರುವ ಅಕ್ರಮ ಮಣ್ಣು ಗಣಿಗಾರಿಕೆಯಲ್ಲಿ ಸ್ಮಶಾನದಲ್ಲಿ ಮತ್ತು ಇತರೆಡೆ ಹೆಣಗಳನ್ನು ಹೂಳುತ್ತಿರುವ ಜಾಗದಲ್ಲೂ ಕೂಡ ಮಣ್ಣು ಗಣಿಗಾರಿಕೆ ನಡೆಸಿದ್ದು ಸ್ಮಶಾನದಲ್ಲಿ ಹೂಳಿದ ದೇಹ, ಅಸ್ಥಿಪಂಜರಗಳನ್ನು ಕೂಡ ಮಣ್ಣಿನ ಸಮೇತವೇ ಬಗೆದು ಎತ್ತಿಕೊಂಡು ಹೋಗಿ ಅಲ್ಲಿ ದೇಹಗಳನ್ನು ಹೂಳಿದ ಗುರುತು ಇಲ್ಲದಂತೆ ನಾಶಪಡಿಸಿದ್ದಾರೆ ಎಂದರೆ ಇಲ್ಲಿನ ಅಕ್ರಮ ಮಣ್ಣು ದಂಧೆ ಕೋರರ ಪ್ರಭಾವ ಮತ್ತು ದೌರ್ಜನ್ಯದ ಪರಮಾವಧಿಯನ್ನು ಅಳೆಯಬಹುದು.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ತಾಲೂಕಿನ ದಲಿತ ಸಂಘರ್ಷ ಸಮಿತಿಯ ಮುಖಂಡ ಮಹಾಂತೇಶ್, “ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮಿತಿಮೀರಿದ್ದು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗೋಮಾಳ, ಕೆರೆ, ಸ್ಮಶಾನ ಸರ್ಕಾರಿ ಜಮೀನುಗಳನ್ನೂ ದುರುಳರು ಬಿಟ್ಟಿಲ್ಲ. ಕೆಲವೆಡೆ ಸ್ಮಶಾನದ ಗುರುತು ಇಲ್ಲದಂತೆ ಬಗೆದಿದ್ದಾರೆ. ಕೆರೆಗಳು ಸ್ಮಶಾನಗಳು ಸರ್ಕಾರಿ ಗೋಮಾಳಗಳನ್ನು ಯಾರ ಹೆದರಿಕೆಯೂ ಇಲ್ಲದೇ ಬಗೆಯುತ್ತಿದ್ದಾರೆ. ತಾಲೂಕು ಆಡಳಿತ ಮತ್ತು ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನಿಲ್ಲ. ಈ ಬಗ್ಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಂಡಿಲ್ಲ. ಇದೆಲ್ಲವನ್ನು ಗಮನಿಸಿದರೆ ತಾಲೂಕಿನ ಅಧಿಕಾರಿಗಳೂ ಕೂಡ ಇದರ ಬಗ್ಗೆ ಗಮನಹರಿಸಲು ನಿರ್ಲಕ್ಷ ತೋರುತ್ತಿದ್ದು, ಕರ್ತವ್ಯ ಲೋಪವೆಸಗಿದ್ದಾರೆ. ಈ ಕೂಡಲೇ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ತಾಲೂಕಿನ ಸ್ಮಶಾನಗಳು, ಕೆರೆ ಮತ್ತು ಸರ್ಕಾರದ ಆಸ್ತಿಗಳನ್ನು ಕಾಪಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಸರದ ಅನಾಹುತಕ್ಕೆ ಕಾರಣವಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜನಹಳ್ಳಿ ಯುವ ಮುಖಂಡ, ಎಚ್ ಎಂ ಗುಡದಯ್ಯ ಮಾತನಾಡಿ, “ಸ್ಮಶಾನಕ್ಕೆ ಮೀಸಲಾಗಿದ್ದ ಜಾಗದಲ್ಲಿ ಕಳೆದ ವರ್ಷದವರೆಗೂ ಮಣ್ಣು ಅಗೆಯಲಾಗಿದೆ. ಈಗ ಗುಂಡಿಗಳಾಗಿ ಜೌಗು, ನೀರು ತುಂಬಿ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ಗ್ರಾಮದಲ್ಲಿ ಬಡವರು ಮೃತರ ಅಂತ್ಯ ಸಂಸ್ಕಾರಕ್ಕೆ ನದಿ ದಡವನ್ನು ಆಶ್ರಯಿಸಿದ್ದಾರೆ. ಮಳೆಗಾಲದಲ್ಲಿ ಅದೂ ಸಾಧ್ಯವಾಗದೆ ರಸ್ತೆ ಬದಿ ಅಥವಾ ಎಲ್ಲೋ ಒಂದು ಕಡೆ ಕಾರ್ಯ ಮುಗಿಸುತ್ತಾರೆ. ಹೂಳಿದ ಕೆಲವು ಹೆಣಗಳನ್ನು ಮರಳುಗಾರಿಕೆ, ಮಣ್ಣು ಗಣಿಗಾರಿಕೆ ಮಾಡುವವರು ಜೆಸಿಬಿ ಮೂಲಕ ಎತ್ತಿ ಹಾಕಿಕೊಂಡು ಹೋದ ಪ್ರಕರಣಗಳೂ ನಡೆದಿವೆ. ಅಕ್ರಮ ಮಣ್ಣು ಗಣಿಗಾರಿಕೆ ಎಲ್ಲವನ್ನೂ ನುಂಗುತ್ತಿದೆ” ಎಂದು ಪರಿಸ್ಥಿತಿ ಬಗೆಗೆ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಈದಿನ ಡಾಟ್ ಕಾಮ್ ಗೆ ಹರಿಹರ ತಹಶೀಲ್ದಾರ್ ಗುರುಬಸವರಾಜು ಪ್ರತಿಕ್ರಿಯಿಸಿ, “ಹಲವು ವರ್ಷಗಳ ಹಿಂದೆ ಅಲ್ಲಿ ಮಣ್ಣು ಗಣಿಗಾರಿಕೆ ನಡೆದಿದೆ. ಕಂದಾಯ ಅಧಿಕಾರಿಗಳು ಈ ಕುರಿತು ವರದಿ ನೀಡಿದ್ದಾರೆ. ನಾವು ಸ್ಮಶಾನಕ್ಕೆ ಜಾಗವನ್ನು ಮಂಜೂರು ಮಾಡಿದ ನಂತರ ಅಲ್ಲಿ ಮಣ್ಣು ಅಗೆದಿಲ್ಲ” ಎಂದು ಹಾರಿಕೆಯ ಉತ್ತರ ನೀಡಿದರು.
“ತಹಶೀಲ್ದಾರ್ ಹೇಳುವ ಪ್ರಕಾರ 2013ರ ಮಂಜೂರಾತಿಯ ನಂತರ ಮಣ್ಣು ಅಗೆದಿಲ್ಲ ಎಂದಾದರೆ, 15-20 ಅಡಿಗಳಷ್ಟು ಗುಂಡಿಗಳಾಗಿದ್ದು ನೀರು ತುಂಬಿಕೊಳ್ಳುತ್ತಿದ್ದ ಜಾಗವನ್ನು ಪರಿಶಿಷ್ಟ ಜಾತಿಯವರ ಸ್ಮಶಾನಕ್ಕೆ ಮಂಜೂರು ಮಾಡಿದ್ದಾರೆಯೇ ಎಂದು ಪ್ರಶ್ನಿಸಬೇಕಾಗಿದೆ. ಅವರು ಸ್ಮಶಾನಕ್ಕೆ ಮಂಜೂರು ಮಾಡಿರುವ ವಿಷಯ ಗ್ರಾಮಸ್ಥರಿಗೆ ತಿಳಿದೇ ಇರಲಿಲ್ಲ. ಕಳೆದ ವರ್ಷ ಪ್ರತಿಭಟನೆಯ ನಂತರ ಸ್ಮಶಾನಕ್ಕೆ ಮಂಜೂರಾಗಿರುವ ವಿಷಯ ತಿಳಿದು ಬಂದಿದೆ. ಈಗಲೂ ಕೂಡ ಅಲ್ಲಿ ನೀರು ತುಂಬಿದ್ದರಿಂದ ಮಣ್ಣು ಬಗೆಯುವುದನ್ನು ನಿಲ್ಲಿಸಿದ್ದಾರೆ. ಇಲ್ಲದಿದ್ದರೆ ಉಳಿದ ಅಲ್ಪ ಸ್ವಲ್ಪ ಜಾಗ ಕೂಡ ಮಣ್ಣು ಮಾಫಿಯಾಕ್ಕೆ ಬಲಿಯಾಗುತ್ತಿತ್ತು” ಎಂದು ಗ್ರಾಮಸ್ಥರು ವಿವರಿಸಿದರು.
ಒಟ್ಟಿನಲ್ಲಿ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಸದ್ದು ಮಾಡುತ್ತಿದ್ದು ದಿನನಿತ್ಯ ನೂರಾರು ಲಾರಿ ಟ್ರ್ಯಾಕ್ಟರ್ ಗಳು ಮಣ್ಣನ್ನು ಅಗೆದು ಸಾಗಿಸುತ್ತಿವೆ. ಇದಕ್ಕೆ ಉತ್ತಮವಾಗಿ ಬೆಳೆಯುವ ರೈತರ ಗದ್ದೆ, ಜಮೀನುಗಳು ಕೂಡ ಬಲಿಯಾಗುತ್ತಿವೆ. ಅಲ್ಪಸ್ವಲ್ಪ ಹಣದಾಸೆಗೆ, ಸಾಲಸೋಲಕ್ಕೆ ಬಡರೈತರು ಕೂಡ ಕೃಷಿ ಯೋಗ್ಯ ಮಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಇವೆಲ್ಲವನ್ನು ನಿಯಂತ್ರಿಸುವ ಮತ್ತು ಅಕ್ರಮಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ತಾಲ್ಲೂಕು ಮತ್ತು ಜಿಲ್ಲಾಡಳಿತದ್ದಾಗಿದೆ. ಪರಿಸರ ನಾಶ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವರೇ ಎಂದು ಕಾದು ನೋಡಬೇಕಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು