2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಗ್ರಾಮೀಣ) ಬೀದರ್ ಲೋಕಸಭಾ ಕ್ಷೇತ್ರಕ್ಕೆ 50,380 ಪರಿಷ್ಕೃತ ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದೆ. ಆದ್ಯತ್ಯಾ ಪಟ್ಟಿಯಲ್ಲಿರುವ ಫಲಾನುಭವಿಗಳು ಫೆ.15ರೊಳಗೆ ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದ್ದಾರೆ.
ʼಕ್ಷೇತ್ರದ 50,380 ಪರಿಷ್ಕೃತ ಮನೆಗಳ ವರ್ಗವಾರು ಮತ್ತು ಜಾತಿವಾರು ಆದ್ಯತಾ ಪಟ್ಟಿ ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿದ್ದು, ಇದನ್ನು ಖಾತ್ರಿಪಡಿಸಿಕೊಂಡು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ ಸಂಖ್ಯೆ, ಪಡಿತರ ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿ ಕಚೇರಿಗೆ ಸಲ್ಲಿಸುವುದು ಕಡ್ಡಾಯವಾಗಿದೆʼ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಪಿಡಿಓ ಮತ್ತು ಡಿಇಓ ಅವರು ಅರ್ಹ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಆಧಾರ ಕಾರ್ಡ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆಗಳನ್ನು ಪಡೆದು ನೋಂದಾಯಿಸಿಕೊಂಡು, ಜಿಯೋಟ್ಯಾಗ್ ಮಾಡಿದ ಫೋಟೊಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಅಪಲೋಡ್ ಮಾಡಿ ಫೆ.15ರೊಳಗೆ ಜಿಲ್ಲಾ ಪಂಚಾಯಿತಿಯಿಂದ ಅನಮೋದನೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಡಿಡಿಪಿಐ, ಬಿಇಒ ನಿರ್ಲಕ್ಷ್ಯದಿಂದ ಔರಾದ್ ತಾಲ್ಲೂಕಿನ ಶಿಕ್ಷಣದ ಗುಣಮಟ್ಟ ಕುಸಿತ : ಶಾಸಕ ಪ್ರಭು ಚವ್ಹಾಣ
ಸಾಮಾನ್ಯ, ಅಲ್ಪಸಂಖ್ಯಾತರ ವರ್ಗದ ಫಲಾನುಭವಿಗಳಿಗೆ ₹1.20 ಲಕ್ಷ ಹಾಗೂ ಎಸ್ಸಿ,ಎಸ್ಟಿ ವರ್ಗದವರಿಗೆ ₹1.75 ಲಕ್ಷ ಅನುದಾನ ಮಂಜೂರಾಗುತ್ತದೆ. ನನ್ನ ಲೋಕಸಭಾ ಕ್ಷೇತ್ರವನ್ನು ಹಂತ-ಹಂತವಾಗಿ ಗುಡಿಸಲು ಮುಕ್ತ ಮಾಡುವ ಗುರಿ ಹೊಂದಿದ್ದೇನೆ. ಈ ಸಂಬಂಧ ಫಲಾನುಭವಿಗಳಿಂದ ಏನೇ ದೂರು, ಆಕ್ಷೇಪಣೆಗಳಿದ್ದಲ್ಲಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದ್ದಾರೆ.