ಸತ್ಯ ಸಾಯಿ ಸಂಸ್ಥೆಯು ಛತ್ತೀಸ್‌ಗಡ, ಹರಿಯಾಣ, ಮುಂಬಯಿ, ಮುದ್ದೇನಹಳ್ಳಿ, ಹೈದರಾಬಾದ್ ಸೇರಿದಂತೆ ಒಟ್ಟು 5 ರಾಜ್ಯಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸಿದ್ದು, ಇದುವರೆಗೆ 33 ಸಾವಿರ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ರಘುಪತಿ ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ 55 ಲಕ್ಷ ಸರಕಾರಿ ಶಾಲಾ ಮಕ್ಕಳಿಗೆ ಸಾಯಿಸೂರ್ ಹೆಸರಲ್ಲಿ ರಾಗಿ ಹೆಲ್ತ್‌ಮಿಕ್ಸ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯೆ, ಆರೋಗ್ಯ, ಆಹಾರ ಇವುಗಳು ಮಾರಾಟದ ವಸ್ತುಗಳಾಗಬಾರದು ಎಂದು ಸತ್ಯ ಸಾಯಿ ಬಾಬಾ ಹೇಳಿದ್ದಾರೆ. ಹಾಗೆಯೇ, ಅದನ್ನು ಸಾಧಿಸಿ ತೋರಿಸಿದ್ದಾರೆ. ಈ ಹಿಂದಿ ಕೇವಲ 2 ಶಾಲೆಗಳಿದ್ದವು, ಪ್ರಸ್ತುತ 22 ಶಾಲೆಗಳಾಗಿವೆ. ಪ್ರತೀ ಮೂರನೇ ಭಾನುವಾರ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ, ಗರ್ಭಿಣಿಯರಿಗೆ ಅವಶ್ಯವಿರುವ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಗಿದೆ. ಇದರಿಂದ ಚಿಕ್ಕಬಳ್ಳಾಪುರದಲ್ಲಿ ತಾಯಂದಿರ ಮರಣ ಪ್ರಮಾಣ(ಎಂಎಂಆರ್ ಇಂಡೆಕ್ಸ್) ಶೇ.50ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದರು.

ಬಡವರು ಮತ್ತು ಹಿಂದುಳಿದ ವರ್ಗದ ಜನರ ಸೇವೆಗಾಗಿ ಉಚಿತ ಹೃದಯ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದೇ ಜನವರಿ 27ರಿಂದ 31ವರೆಗೆ ನಡೆದ 5ನೇ ಉಚಿತ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ವಿವಿಧ ದೇಶಗಳ ವೈದ್ಯರು ಪಾಲ್ಗೊಂಡಿದ್ದು, 5ನೇ ಶಿಬಿರದಲ್ಲಿ ಒಟ್ಟು 38 ಮಕ್ಕಳಿಗೆ ಜೀವತುಂಬಿದ್ದಾರೆ. ಸೇವಾ ಮನೋಭಾವದಿಂದ ಅವರ ಸ್ವಂತ ಖರ್ಚಿನಲ್ಲೇ ಬರುತ್ತಿರುವ ವಿದೇಶಿ ವೈದ್ಯರು ತಮ್ಮ ರಜಾ ದಿನಗಳನ್ನು ಇಂತಹ ಶಿಬಿರಗಳಿಗೆ ಮುಡುಪಾಗಿಟ್ಟು, ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 5 ತಿಂಗಳಲ್ಲಿ 22 ದೇಶಗಳ ವೈದ್ಯರು ಇಲ್ಲಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಹೃದಯ ತಜ್ಞ ಡಾ.ಸಿ.ಹಿರೇಮಠ್ ಮಾತನಾಡಿ, ಈ ಶಿಬಿರದಲ್ಲಿ ಆಫ್ರಿಕಾ ದೇಶದ ಮಗು ಸೇರಿದಂತೆ ದಿನಕ್ಕೆ 8-9ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಕ್ಕಳ ದೇಹ ತೂಕದ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಹುಟ್ಟಿದಾಗ ನೀಲಿ ಬಣ್ಣ ಹೊಂದಿರುವ ಮಕ್ಕಳು, ಹೃದಯ ಕವಾಟು ಇಲ್ಲದೇ ಇರುವ ಮಕ್ಕಳು ಹಾಗೂ ಇತರೆ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಾರ್ಟ್ ವಾಲ್ವ್ ಬ್ಯಾಂಕ್ ಸ್ಥಾಪನೆ :
ಕೆಲ ಮಕ್ಕಳು ಹುಟ್ಟಿದಾಗ ಹೃದಯ ಕವಾಟು ಇರುವುದಿಲ್ಲ. ಅಂತಹ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಯದಲ್ಲೇ ಹಾರ್ಟ್ ವಾಲ್ವ್ ಬ್ಯಾಂಕ್ ಸ್ಥಾಪನೆ ಮಾಡುತ್ತಿದ್ದೇವೆ. ಭಾರತದಲ್ಲಿ 7 ಮಾತ್ರ ಹಾರ್ಟ್ ವಾಲ್ವ್ ಬ್ಯಾಂಕ್‌ಗಳಿದ್ದು, ಜಗತ್ತಿನ ಮೊದಲ ಉಚಿತ ಹಾರ್ಟ್ ವಾಲ್ವ್ ಬ್ಯಾಂಕ್ ನಮ್ಮಲ್ಲಿ ಸ್ಥಾಪನೆಯಾಗಲಿವೆ ಎಂದು ಹೇಳಿದರು.

ಹೀಲಿಂಗ್ ಲಿಟಲ್ ಹಾರ್ಟ್ ಸಂಸ್ಥೆಯ ಅಧ್ಯಕ್ಷ ಡಾ.ಸಂಜೀವ್ ನಿಚಾನಿ ಮಾತನಾಡಿ, ಕಳೆದ 7 ತಿಂಗಳಲ್ಲಿ 5 ಬಾರಿ ಇಲ್ಲಿಗೆ ಬಂದಿದ್ದೇನೆ. 23 ದೇಶಗಳಲ್ಲಿ 80 ಸಾವಿರ ಚಿಕಿತ್ಸೆಗಳನ್ನು ನೀಡಿದ್ದೇವೆ. ಭಾರತದಲ್ಲಿ ಇದು ನಮ್ಮ 5ನೇ ಶಿಬಿರ. ಉಚಿತ ಸೇವೆ ಮಾಡುತ್ತಿರುವ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಇದಕ್ಕೆ ಸತ್ಯ ಸಾಯಿ ಸಂಸ್ಥೆ ದೊಡ್ಡ ಉದಾಹರಣೆಯಾಗಿದೆ ಎಂದು ಹೊಗಳಿದರು.
ಮಕ್ಕಳ ಹಿರಿಯ ತಜ್ಞ ರೋಮನ್ ಮಾತನಾಡಿ, ಈ ಶಿಬಿರ 12 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. 15 ಜನ ಹೃದಯ ತಜ್ಞರು, 5 ಜನ ಅನಸ್ತೇಶಿಯಾ ತಜ್ಞರು ಹಾಗು ಇತರೆ ವೈದ್ಯರ ತಂಡ ಈ ಶಿಬಿರದಲ್ಲಿ ಸೇವೆ ಸಲ್ಲಿಸಿದ್ದು, ವ್ಯವಸ್ಥಿತವಾದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಗೌರಿಬಿದನೂರು | ನಾಳೆ ಡಾ.ಎಚ್.ನರಸಿಂಹಯ್ಯ ಜನ್ಮಶತಮಾನೋತ್ಸವ; ಸಿಎಂ ಸಿದ್ದರಾಮಯ್ಯ ಚಾಲನೆ
ಮಕ್ಕಳ ತಜ್ಞರಾದ ಡಾ.ಬಿ.ಆರ್.ಜಗನ್ನಾಥ್, ಡಾ.ಇವಾರಿಸ್, ಡಾ.ಪೀಟರ್, ಡಾ.ಮಿಹಾ, ಡಾ.ಲೆಸ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಸತೀಶ್ ಬಾಬು, ಡಾ.ಸಂಜಯ್, ಸಾರ್ವಜನಿಕ ಸಂಪರ್ಕಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಇತರರಿದ್ದರು.