ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರ ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಪ್ರಕರಣ ಮತ್ತಷ್ಟು ಬೀಗಿಯಾಗುತ್ತಿದೆ. ಹೈಕೋರ್ಟ್ ಚಾಟಿಗೆ ಎಚ್ಚೆತ್ತ ಸರ್ಕಾರ, ತನಿಖೆಗೆ ಎಸ್‌ಐಟಿ ರಚಿಸಿದೆ.
ಕುಮಾರಸ್ವಾಮಿ ಭೂ ಕಬಳಿಕೆ ಆರೋಪದ ಕುರಿತು ತನಿಖೆಗೆ ನಡೆಸಲು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಹಾನ್ ಅದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ-1964 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಅಡಿಯಲ್ಲಿ ಈ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ, ಕಂದಾಯ ಆಯುಕ್ತಾಲಯದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ಎಸ್‌ಐಟಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಶೀತಲ್ ಅವರನ್ನು ಎಸ್‌ಐಟಿಯ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
“ಕುಮಾರಸ್ವಾಮಿ ಮತ್ತವರ ಸಂಬಂಧಿಕರು ಕೇತಗಾನಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ. ಕೋರ್ಟ್ ಸೂಚನೆ ಹೊರತಾಗಿಯೂ ಒತ್ತುವರಿ ತೆರವು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿ ಎಸ್ ಆರ್ ಹಿರೇಮಠ ಅವರ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠವು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
14 ಎಕರೆ ಸರ್ಕಾರಿ ಜಮೀನನ್ನು ಎರಡು ವಾರದಲ್ಲಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. “ಎರಡು ವಾರದಲ್ಲಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ಬುದ್ದಿ ಕಲಿಸಬೇಕಾಗುತ್ತದೆ” ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಜ.29ರಂದು ಹೈಕೋರ್ಟ್ ಕಟು ಎಚ್ಚರಿಕೆ ಕೊಟ್ಟಿತ್ತು.
ಪ್ರಕರಣದ ವಿಚಾರವಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, ” “ಆರೋಪಿಗಳು ಪ್ರಭಾವಿ ಎಂಬ ಕಾರಣಕ್ಕೆ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ರಾಜ್ಯ ಸರ್ಕಾರಕ್ಕೂ ಈ ಪ್ರಕರಣದಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಆರೋಪಿಗಳು ಬೇರೆ ಬೇರೆ ಪಕ್ಷದವರಾಗಿದ್ದರೂ ಭೂ ಅಕ್ರಮದಲ್ಲಿ ತೊಡಗಿರುವವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಅವರನ್ನು ಇವರು ರಕ್ಷಿಸುವುದು, ಇವರನ್ನು ಅವರು ರಕ್ಷಿಸುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಭೂ ಒತ್ತುವರಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಅಂತ ಯಾರಿಗೂ ಅನ್ನಿಸಿಲ್ಲ” ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ಭೂ ಕಬಳಿಕೆ | ಕುಮಾರಸ್ವಾಮಿ ಮತ್ತು ಸಂಬಂಧಿಕರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗುವುದೇ?
ಏನಿದು ಪ್ರಕರಣ?
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರು ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ ಇವರೆಲ್ಲರೂ 110.32 ಎಕರೆ ಪೈಕಿ ಸುಮಾರು 54 ಎಕರೆಯಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಸರ್ವೆ ನಂ. 7, 8, 9, 10, 16, 17 ಮತ್ತು 79ರಲ್ಲಿ ಮಂಜೂರಾಗಿರುವ ಗೋಮಾಳದ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ತನಿಖೆ ನಡೆಸಬೇಕು. ಒಂದೊಮ್ಮೆ ಆ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು. ಸರ್ಕಾರದ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿರುವವರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಕೈಗೊಳ್ಳಬೇಕು. ನಾಲ್ಕು ತಿಂಗಳಲ್ಲಿ ಈ ಕ್ರಮವಾಗಬೇಕು. ಆನಂತರ 15 ದಿನಗಳಲ್ಲಿ ರಿಜಿಸ್ಟ್ರಾರ್‌ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಲೋಕಾಯುಕ್ತರು 2014ರ ಆಗಸ್ಟ್ 4ರಂದು ಆದೇಶಿಸಿದ್ದರು.
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಲೋಕಾಯುಕ್ತ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್ ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಇದರ ವಿಚಾರಣೆ ಹಂತ ಹಂತವಾಗಿ ನಡೆಯುತ್ತ ಬರುತ್ತಿದೆ. ಅಮ್ಹಾನ್ ಅದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡ ಎರಡು ವಾರದಲ್ಲಿ ವರದಿ ನೀಡಲಿದೆ.