ಖಾಸಗಿ ಶಿಕ್ಷಣ ಸಂಸ್ಥೆಗಳು ಕೆರೆಗಳನ್ನು ಅತಿಕ್ರಮಿಸಿಕೊಂಡಿವೆ ಎಂಬ ಆಪಾದನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆರೆಗಳ ಸರ್ವೇಕಾರ್ಯ ಆರಂಭಿಸಲಾಗಿದೆ ಎಂದು ಮುಧೋಳ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಎರಡು ಕೆರೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಆಕ್ರಮಿಸಿಕೊಂಡಿದ್ದು, ಈ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆಯೆಂದು ನಗರಸಭೆ ಸದಸ್ಯ ಸಂತೋಷ ಪಾಲೋಜಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಶೀಘ್ರವಾಗಿ ಕೆರೆಗಳ ಸರ್ವೇ ಕಾರ್ಯ ಕೈಗೊಂಡು ಅತಿಕ್ರಮಣ ತೆರವುಗೊಳಿಸಬೇಕೆಂದು ತೀರ್ಮಾನಿಸಲಾಗಿತ್ತು. ಅದರಂತೆ ನಗರದ ಸಿದ್ಧರಾಮೇಶ್ವರ ಕಾಲನಿಯ ಸರ್ವೇ ನಂ. 9ರಲ್ಲಿ ನಗರದ ಸಾಯಿ ನಿಕೇತನ ಶಿಕ್ಷಣ ಸಂಸ್ಥೆ ಹಾಗೂ ದತ್ತ ಮಂದಿರದ ಬಳಿಯಿರುವ ಸರ್ವೇ ನಂ. 558ರ 14 ಎಕರೆ 34 ಗುಂಟೆ ಜಾಗಗಳಲ್ಲಿ ಬಿವಿವಿ ಸಂಘದ ಶಾಲಾ ಕಾಲೇಜುಗಳು ಕೆರೆಗಳನ್ನು ಅತಿಕ್ರಮವಿಸಿಕೊಂಡಿವೆ ಎಂಬುದರ ಬಗ್ಗೆ ಭಾರೀ ವಿವಾದ ಹುಟ್ಟಿಕೊಂಡಿದ್ದು, ಇವುಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿಶೇಷಚೇತನರಿಗೆ ವೀಲ್‌ಚೇರ್, ಇತರೆ ಸಲಕರಣೆಗಳ ವಿತರಣೆ
ಈ ಸಂಬಂಧವಾಗಿ ನಡೆದ ಚರ್ಚೆಯಲ್ಲಿ ಪೌರಾಯುಕ್ತರು ಸರ್ವೇ ಕಾರ್ಯ ಪ್ರಾರಂಭವಾಗಿದೆಯೆಂದು ತಿಳಿಸಿದರೂ, ಕೆಲವು ಸದಸ್ಯರು ಇದರ ಕುರಿತು ವಿವಿಧ ರೀತಿಯಿಂದ ತೀವ್ರವಾಗಿ ಪ್ರಶ್ನಿಸಿದರು. ಪೌರಾಯುಕ್ತರು ನೀಡಿದ ಮಾಹಿತಿಯ ಪ್ರಕಾರ, ನಗರದ ಸಾಯಿ ನಿಕೇತನ ಶಿಕ್ಷಣ ಸಂಸ್ಥೆ ಮತ್ತು ಬಿವಿವಿ ಸಂಘಗಳು ಅತಿಕ್ರಮಣ ಮಾಡಿವೆಯೆಂಬ ಆಪಾದನೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಅತಿಕ್ರಮಣಗೊಂಡಿರುವ ಜಾಗವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದೆಂದು ಸದಸ್ಯರಿಗೆ ತಿಳಿಸಿದರು.
ಸರ್ವೇ ನಂ. 558ರಲ್ಲಿ 14 ಎಕರೆ 34 ಗುಂಟೆ ಜಮೀನಿನ ಪರಿಷ್ಕೃತ ವಿನ್ಯಾಸ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಕೆಲವು ಸದಸ್ಯರು ಕೆರೆಗಳ ಸರ್ವೇ ಕಾರ್ಯ ಪೂರ್ಣಗೊಳ್ಳುವವರೆಗೆ ಯಾವುದೇ ಅನುಮೋದನೆ ನೀಡದಂತೆ ಹಾಗೂ ಕೆರೆಗಳನ್ನು ಉಳಿಸುವ ಸಲುವಾಗಿ, ಕೆರೆಗಳ ಬಳಿಯ ಜಮೀನನ್ನು ಬಫರ್ ಜೋನ್ ಮಾಡಿ ತಂತಿಬೇಲಿ ಹಾಕುವಂತೆ ಕೆಲವು ಸದಸ್ಯರು ಸಲಹೆ ನೀಡಿದರು.