ಮಂಗಳೂರು ನಗರದ ಬೆಂಗ್ರೆಯಲ್ಲಿರುವ ಎಆರ್‌ಕೆ ಶಾಲೆಯ ವಿದ್ಯಾರ್ಥಿಗಳು ಕಾನೂನು ಜಾಗೃತಿ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ನೇರ ಅನುಭವ ಪಡೆಯುವ ಉದ್ದೇಶದಿಂದ ಪಣಂಬೂರು ಪೊಲೀಸ್ ಠಾಣೆಗೆ ಶೈಕ್ಷಣಿಕ ಭೇಟಿ ನೀಡಿದರು.
ಈ ಸಂದರ್ಭದಲ್ಲಿ, ಕಾನೂನು ವ್ಯವಸ್ಥೆ, ಪೊಲೀಸ್ ಇಲಾಖೆ ನಡೆಸುವ ಕಾರ್ಯಗಳು, ನಾಗರಿಕರ ಹಕ್ಕುಗಳು ಹಾಗೂ ಕಾನೂನು ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳೊಂದಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಭೇಟಿಯ ವೇಳೆ ವಿದ್ಯಾರ್ಥಿಗಳಿಗೆ ಪ್ರಮುಖ ಕಾನೂನು ಸಂಬಂಧಿತ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಾಯಿತು.

ಎಫ್‌ಐಆರ್ ದಾಖಲಿಸುವ ವಿಧಾನ, ದೂರು ದಾಖಲಿಸುವ ಪ್ರಕ್ರಿಯೆ, ಅದರ ಪ್ರಾಮುಖ್ಯತೆ ಹಾಗೂ ಕಾನೂನು ತಂತ್ರಜ್ಞಾನ, ಪೋಕ್ಸೋ ಕಾಯ್ದೆ, ಮಕ್ಕಳ ಭದ್ರತೆ ಮತ್ತು ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು, ಡ್ರಗ್ಸ್ ಜಾಲ ಮತ್ತು ಅಪಾಯಗಳು. ಮಾದಕ ವಸ್ತುಗಳ ದುಷ್ಪರಿಣಾಮಗಳು ಮತ್ತು ಕಾನೂನು ಬಾಹಿರ ಕ್ರಿಯಾಕಲಾಪಗಳು, ಸೈಬರ್ ಅಪರಾಧಗಳು, ಡಿಜಿಟಲ್ ಜಗತ್ತಿನ ಅಪಾಯಗಳು, ಸಾಮಾಜಿಕ ಮಾಧ್ಯಮದ ಸೂಕ್ತ ಬಳಕೆ ಹಾಗೂ ಹ್ಯಾಕಿಂಗ್, ಆನ್‌ಲೈನ್ ಮೋಸಗಳ ವಿರುದ್ಧ ಜಾಗೃತಿ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಮಹಿಳಾ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ಕಾನೂನಿನ ಸಹಾಯ, ತುರ್ತು ಸಂಪರ್ಕ ಸಂಖ್ಯೆಗಳ ಬಳಕೆ, ಪೊಲೀಸರ ಕಾರ್ಯವೈಖರಿ, ಕಾನೂನು ಜಾರಿಗೊಳಿಸುವಲ್ಲಿ ಪೊಲೀಸರ ಪಾತ್ರ, ಅವರ ತುರ್ತು ಪ್ರತಿಕ್ರಿಯೆಗಳ ಪ್ರಕ್ರಿಯೆ ಮತ್ತು ಕರ್ತವ್ಯವನ್ನು ಅನುಭವದ ಮೂಲಕ, ಕಾನೂನು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ನೇರ ಅರಿವು ಮೂಡಿಸಲಾಯಿತು.
ಇನ್ಸ್‌ಪೆಕ್ಟರ್ ಸಲೀಮ್ ಅಬ್ಬಾಸ್ ವಳಾಲ್ ಅವರೊಂದಿಗೆ ಸಂವಾದ
ಪಣಂಬೂರು ಠಾಣೆಯ ಇನ್ಸ್‌ಪೆಕ್ಟರ್ ಸಲೀಮ್ ಅಬ್ಬಾಸ್ ವಳಾಲ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕಾನೂನಿನ ಪ್ರಾಮುಖ್ಯತೆಯನ್ನು ವಿವರಿಸಿದರು.
“ಪೋಲಿಸರು ನಿಮ್ಮ ಮಿತ್ರರು. ಅವರು ನಿಮ್ಮ ರಕ್ಷಣೆಗಾಗಿ ಇರುವವರು. ನಮ್ಮ ನಿತ್ಯ ಜೀವನದಲ್ಲಿ ಕಾನೂನಿನ ಅರಿವು ಮತ್ತು ಜಾಗೃತಿ ಅತ್ಯಗತ್ಯ. ವಿದ್ಯಾರ್ಥಿ- ಯುವಕರು ಕಾನೂನು ಬಗ್ಗೆ ಮಾಹಿತಿ ಹೊಂದಿದರೆ, ಅವರು ಸಮಾಜದ ಪ್ರಗತಿಯೊಂದಿಗೆ ಸುಸಂಘಟಿತ ಜೀವನವನ್ನು ನಡೆಸಬಹುದು. ಡ್ರಗ್ಸ್, ಸೈಬರ್ ಅಪರಾಧಗಳು ಮತ್ತು ಮಹಿಳಾ ಸುರಕ್ಷತೆ ಈ ದಿನಗಳಲ್ಲಿ ಮುಖ್ಯ ವಿಷಯಗಳಾಗಿದ್ದು, ಇವುಗಳ ಬಗ್ಗೆ ಜಾಗೃತಿಯಿಲ್ಲದಿದ್ದರೆ ಅಪಾಯಗಳು ಎದುರಾಗಬಹುದು. ಕಾನೂನು ನಮ್ಮ ರಕ್ಷಣೆಗೆ, ಆದರೆ ಅದನ್ನು ಸರಿಯಾಗಿ ಅರ್ಥೈಸಿ ಅನುಸರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ” ಎಂದು ಹೇಳಿದರು.

ಈ ಮಾತುಗಳು ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿಯ ಮಹತ್ವವನ್ನು ಬೇರೂರಿಸಿದವು. ಈ ಭೇಟಿಯು ವಿದ್ಯಾರ್ಥಿಗಳಲ್ಲಿ ಕಾನೂನು ಪ್ರಜ್ಞೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿತು.
ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ಕಾನೂನು ಜಾರಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ನೇರವಾಗಿ ನೋಡಿದ ವಿದ್ಯಾರ್ಥಿಗಳು, ಕಾನೂನು ವ್ಯವಸ್ಥೆಯ ಬಗ್ಗೆ ಒಳ್ಳೆಯ ಅರಿವು ಹೊಂದಿದರು. ಮಾತ್ರವಲ್ಲದೆ ತಮ್ಮ ಮನದಲ್ಲಿದ್ದ ಪ್ರಶ್ನೆಗಳನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಂಡರು.
“ಪೊಲೀಸರು ಕೇವಲ ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಮಾತ್ರವಲ್ಲ, ನಮ್ಮ ಸಮಾಜವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಪ್ರಮುಖ ಕೆಲಸ ಮಾಡುತ್ತಾರೆ” ಎಂಬ ವಿಷಯವನ್ನು ಶಾಲೆಯ ಕರೆಸ್ಪೋಂಡೆಂಟ್ ಶೌಕತ್ ಅಲಿ ವಿದ್ಯಾರ್ಥಿಗಳಿಗೆ ಹೇಳಿದರು.
ಕಾನೂನು ಜಾಗೃತಿಯ ಮಹತ್ವವನ್ನು ಅನಾವರಣಗೊಳಿಸುವ ಈ ಕಾರ್ಯಕ್ರಮದಿಂದ, ವಿದ್ಯಾರ್ಥಿಗಳಲ್ಲಿ ಸಮಾಜದ ಕಾನೂನು ಬಾಹಿರ ಕ್ರಿಯೆಗಳ ಬಗ್ಗೆ ಹೊಸ ಅರಿವು ಮೂಡಿಸಲಾಯಿತು.

ಈ ಶೈಕ್ಷಣಿಕ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಕಾನೂನು ಪ್ರಜ್ಞೆ, ನಾಗರಿಕ ಜವಾಬ್ದಾರಿ ಹಾಗೂ ಸಾಮಾಜಿಕ ಜಾಗೃತಿಯ ಬಗ್ಗೆಯೂ ಪ್ರಭಾವಿತಗೊಂಡರು. ಈ ಸಂದರ್ಭದಲ್ಲಿ ಪಣಂಬೂರು ಠಾಣೆಯ ವತಿಯಿಂದ ಮಕ್ಕಳಿಗೆ ಲಘು ಪಾನೀಯ ವ್ಯವಸ್ಥೆ ಮಾಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಕೀನ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಿದರು. 7,8,9ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
