2002ರ ಗುಜರಾತ್ ಗಲಭೆಯಲ್ಲಿ ಕೊಲೆಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು ಶನಿವಾರ ಅಹಮದಾಬಾದ್‌ನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
2002ರ ಫೆಬ್ರವರಿ 28ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಮರುದಿನ ಅಹಮದಾಬಾದ್‌ನಲ್ಲಿ ಮುಸ್ಲಿಮರು ಅಧಿಕವಾಗಿ ವಾಸಿಸುವ ಪ್ರದೇಶವಾದ ಗುಲ್ಬರ್ಗ್ ಸೊಸೈಟಿಯಲ್ಲಿ 69 ಜನರ ಕೊಲೆಯಾಗಿತ್ತು. ಕೊಲೆಯಾದವರ ಪೈಕಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಕೂಡಾ ಒಬ್ಬರಾಗಿದ್ದರು. ಇದಾದ ಬಳಿಕ ರಾಜ್ಯಾದ್ಯಂತ ಭೀಕರ ಗಲಭೆ ಉಂಟಾಗಿತ್ತು.
ಇದನ್ನು ಓದಿದ್ದೀರಾ? ವಿಜಯಪುರ | ಬಾಬ್ರಿ ಮಸೀದಿ, ಗುಜರಾತ್ ಗಲಭೆಯನ್ನು ಪಠ್ಯದಿಂದ ಕೈಬಿಟ್ಟ ಎನ್‌ಸಿಇಆರ್‌ಟಿ: ಎಐಡಿಎಸ್ಒ ಆಕ್ರೋಶ
ಗೋಧ್ರಾ ರೈಲು ದಹನ ಘಟನೆಯ ಬಳಿಕ ನಡೆದ ಗಲಭೆಗೆ ಉನ್ನತ ರಾಜಕೀಯ ನಾಯಕರೇ ಹೊಣೆಗಾರರು ಎಂದು ವಾದಿಸಿದ್ದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಸುಪ್ರೀಂ ಕೋರ್ಟ್ ಮೆಟ್ಟಲೇರಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು.
ಝಕಿಯಾ ಜಾಫ್ರಿ ನಿಧನದ ಬಗ್ಗೆ ಅವರ ಪುತ್ರ ತನ್ವೀರ್ ಜಾಫ್ರಿ ಮಾಹಿತಿ ನೀಡಿದ್ದಾರೆ. “ನನ್ನ ತಾಯಿ ಅಹಮದಾಬಾದ್‌ನಲ್ಲಿರುವ ನನ್ನ ಸಹೋದರಿಯ ಮನೆಗೆ ಭೇಟಿ ನೀಡುತ್ತಿದ್ದರು. ತಮ್ಮ ದೈನಂದಿನ ದಿನಚರಿಯನ್ನು ಮುಗಿಸಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದಾಗ ದಿಡೀರ್ ಅಸ್ವಸ್ಥತೆ ಕಾಣಿಸಿಕೊಂಡಿದ್ದಾಗಿ ಕರೆ ಬಂದಿದೆ. ವೈದ್ಯರು ಬೆಳಿಗ್ಗೆ 11:30ರ ಸುಮಾರಿಗೆ ನನ್ನ ತಾಯಿ ನಿಧನರಾಗಿರುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.
Zakia Appa a compassionate leader of d human rights community passed away just 30 minutes ago!Her visionary presence will be missed by d nation family friends & worrld! Tanveernhai, Nishrin, Duraiyaappa, grandkids we are with you! Rest in Power and Peace Zakia appa! #ZakiaJafri pic.twitter.com/D6Un1cj346
— Teesta Setalvad (@TeestaSetalvad) February 1, 2025
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ, ಝಕಿಯಾ ಜೊತೆ ಸಹದೂರುದಾರೆಯಾದ ತೀಸ್ತಾ ಸೆಟಲ್‌ವಾಡ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಮಾನವ ಹಕ್ಕುಗಳ ಪರ ಹೋರಾಡಿದ ನಾಯಕಿ ಝಕಿಯಾ ಆಪಾ ಕೇವಲ 30 ನಿಮಿಷಗಳ ಹಿಂದೆ ನಿಧನರಾದರು. ಕುಟುಂಬದೊಂದಿಗೆ ನಾವಿದ್ದೇವೆ” ಎಂದು ಪೋಸ್ಟ್ ಮಾಡಿದ್ದಾರೆ.
