ಮಂಗಳೂರು ಹೊರವಲಯದ ಕೋಟೆಕಾರು ಸಹಕಾರಿ ಬ್ಯಾಂಕಲ್ಲಿ ಚಿನ್ನಾಭರಣ, ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೋರ್ವ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಮುರುಗಂಡಿ ತೇವರ್ ಮತ್ತು ಯೋಸುವಾ ರಾಜೇಂದ್ರನ್ ಅವರನ್ನು ಹೆಚ್ಚಿನ ತನಿಖೆಗಾಗಿ ಫೆಬ್ರವರಿ 3 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.
ಕಸ್ಟಡಿ ವಿಚಾರಣೆಯ ಸಮಯದಲ್ಲಿ ಆರೋಪಿ ಮುರುಗಂಡಿ ಥೇವರ್ ಅಪರಾಧದ ಯೋಜನೆಯ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದಾನೆ. 2024ರ ನವೆಂಬರ್ ನಲ್ಲಿ ಯಸುವಾ ರಾಜೇಂದ್ರನ್ ಹಾಗೂ ಸ್ಥಳೀಯ ಸಹಚರ ಶಶಿ ಥೇವರ್ ಜತೆಗೂಡಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಂಕ್ ಬಳಿಯ ಅಜ್ಜಿನಡ್ಕದಲ್ಲಿ ಭೇಟಿಯಾಗಿದ್ದ. ಇದೇ ವೇಳೆ ಶಶಿ ಥೇವರ್ ಬಂದೂಕನ್ನು ತಂದು ಭದ್ರತಾ ಲೋಪಗಳ ಬಗ್ಗೆ ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದ. ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಆಯುಧವನ್ನು ಈ ಸ್ಥಳದಲ್ಲಿ ಬಚ್ಚಿಟ್ಟಿದ್ದ.

ಈ ಮಾಹಿತಿಯ ಆಧಾರದ ಮೇಲೆ ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್, ಓರ್ವ ಸಬ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್ಸ್ ಟೇಬಲ್‌ಗಳನ್ನು ಒಳಗೊಂಡ ಪೊಲೀಸ್ ತಂಡವು ಆರೋಪಿ ಮುರುಗಂಡಿ ಥೇವರ್ ನೊಂದಿಗೆ ಸ್ಥಳ ಮಹಜರಿಗೆ ಇಂದು ಅಜ್ಜಿನಡ್ಕಕ್ಕೆ ತೆರಳಿತ್ತು. ಸ್ಥಳಕ್ಕೆ ತಲುಪಿದಾಗ ಆರೋಪಿ ಮುರುಗಂಡಿ ತನ್ನ ಸರಪಳಿ ಹಿಡಿದಿದ್ದ ಕಾನ್ಸ್ ಟೇಬಲ್ ಮಂಜುನಾಥ್ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ನಡೆಸಿದ್ದಾನೆ. ಬಳಿಕ ಪೊಲೀಸ್ ಸಿಬ್ಬಂದಿಯ ಖಾಸಗಿ ಭಾಗಗಳಿಗೆ ಹೊಡೆದು ಸ್ಥಳದಿಂದ ಪರಾರಿಯಾಗಲು ಸರಪಳಿಯಿಂದ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಉಳ್ಳಾಲ ಇನ್ಸ್‌ಪೆಕ್ಟರ್ ಮೊದಲು ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದ್ದಾರೆ. ಈ ಎಚ್ಚರಿಕೆಯ ಹೊರತಾಗಿಯೂ ಆರೋಪಿ ಮುರುಗಂಡಿ ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ಮೊಣಕಾಲಿನ ಕೆಳಗೆ ಎರಡನೇ ಸುತ್ತು ಗುಂಡು ಹಾರಿಸಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ ಗಲಭೆ | ಕೊಲೆಯಾದ ಮಾಜಿ ಕಾಂಗ್ರೆಸ್ ಸಂಸದರ ಪತ್ನಿ ಝಕಿಯಾ ಜಾಫ್ರಿ ನಿಧನ
ಘಟನೆಯ ನಂತರ ಕಾನ್ಸ್ ಟೇಬಲ್ ಮಂಜುನಾಥ್ ಮತ್ತು ಆರೋಪಿ ಮುರುಗಂಡಿ ಇಬ್ಬರನ್ನೂ ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಯೇನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸದ್ಯ ಅಪಾಯದಿಂದ ಪಾರಾಗಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
