ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುರಿ ಹಟ್ಟಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, 55 ಮೇಕೆ, ಎರಡು ಟಗರು ಸುಟ್ಟು ಭಸ್ಮವಾಗಿವೆ.
ಗ್ರಾಮದ ಹೊರವಲಯದಲ್ಲಿ ಮಡಿವಾಳರ ಶೇಖರಪ್ಪ ಮತ್ತು ನಾಯಕರ ಗಿರಿಜಮ್ಮನವರು ಕುರಿಗಳಿಗಾಗಿ ಎರಡು ಪ್ರತ್ಯೇಕ ಹಟ್ಟಿ ಕಟ್ಟಿಕೊಂಡಿದ್ದರು. ಒಂದು ಹಟ್ಟಿಯಲ್ಲಿದ್ದ ಮಡಿವಾಳರ ಶೇಖರಪ್ಪನಿಗೆ ಸೇರಿದ 40 ಮೇಕೆ ಮರಿಗಳು ಹಾಗೂ ಮತ್ತೊಂದು ಹಟ್ಟಿಯಲ್ಲಿದ್ದ ಗಿರಿಜಮ್ಮನಿಗೆ ಸೇರಿದ 15 ಮೇಕೆಮರಿ 2 ಟಗರು ಬೆಂಕಿಯಲ್ಲಿ ಸಜೀವ ದಹನವಾಗಿವೆ ಎಂದು ಗ್ರಾಮದ ಮುಖಂಡರು ತಿಳಿಸಿದರು.
“ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆ ಇದ್ದು, ಬೆಂಕಿ ಹೊತ್ತಿಕೊಂಡಿರುವ ಕಾರಣ ತಿಳಿಯುವ ಪ್ರಯತ್ನ ನಡೆದಿದೆ” ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಪಣಂಬೂರು ಪೊಲೀಸ್ ಠಾಣೆಗೆ ಎಆರ್‌ಕೆ ಶಾಲಾ ವಿದ್ಯಾರ್ಥಿಗಳ ಭೇಟಿ: ಪೊಲೀಸ್ ವ್ಯವಸ್ಥೆ ಬಗ್ಗೆ ಪ್ರಾಯೋಗಿಕ ಪಾಠ
ಕೂಡ್ಲಿಗಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ತಹಶೀಲ್ದಾರ್ ಎಂ ರೇಣುಕಾ, ಕಾನಹೊಸಹಳ್ಳಿ ಎಎಸ್‌ಐ ಜಿಲಾನ್, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ ಲೋಹಿತ್, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ವೈಯಕ್ತಿಕ ಸಹಾಯದ ಜತೆಗೆ ಸರ್ಕಾರದಿಂದ ನೀಡುವಂತಹ ಪರಿಹಾರವನ್ನು ಕೊಡಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.