ಮೋದಿ ಸರ್ಕಾರ ʼಬೇಟಿ ಬಚಾವೊ-ಬೇಟಿ ಪಡಾವೊʼ ಎಂದು ಹೇಳುತ್ತಾ ಮಹಿಳಾ ಸುರಕ್ಷತೆಗೆ ನೀಡಿರುವ ಪ್ರಾಮುಖ್ಯತೆ ಶೂನ್ಯ. ಶಿಕ್ಷಣಕ್ಕೆ, ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿರುವ ಆದ್ಯತೆ ಶೂನ್ಯ!
ಬಜೆಟನ್ನು “ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಕೇಂದ್ರೀಕರಿಸಬೇಕಾಗಿದೆ” ಎಂದು ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್ ಪ್ರತೀ ಬಾರಿಯಂತೆ, ಹೇಳಿದ್ದು ಒಂದು ಮಾಡಿದ್ದು ಇನ್ನೊಂದು. “ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಸದರಿ ಬಜೆಟ್ ನ ಪ್ರಮುಖ ಅಂಶವಾಗಿದೆ, ಸರ್ಕಾರವು ಆರ್ಥಿಕತೆಯಲ್ಲಿ ಮಹಿಳೆಯರಿಂದ 70%ರಷ್ಟು ಭಾಗವಹಿಸುವಿಕೆಯನ್ನು ಗುರಿಯಾಗಿಸಿಕೊಂಡಿದೆ” ಎಂದು ಹೇಳಿದ್ದಾರೆ. ಆದರೆ, ಅದಕ್ಕೆ ಸೂಕ್ತವಾದ ಯಾವುದೇ ದಾರಿಯನ್ನು ಬಜೆಟ್‌ನಲ್ಲಿ ತೋರಿಸಿಲ್ಲ. ಪ್ರತೀ ಭಾರಿಯಂತೆ ಉದ್ದುದ್ದ ಭಾಷಣ ಅಷ್ಟೇ. ಅದರ ಅನುಷ್ಠಾನಕ್ಕೆ ಪೂರಕವಾದ ಯೋಜನೆಗಳು ಶೂನ್ಯ.
ಮಹಿಳಾ ಉದ್ಯಮಶೀಲತೆ ಪ್ರೋತ್ಸಾಹಿಸಲು ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಮಹಿಳೆಯರಿಗೆ, ಮೊದಲ ಬಾರಿಗೆ ಉದ್ಯಮಿಗಳಿಗೆ (ST ಮತ್ತು SC ಸಮುದಾಯ ಒಳಗೊಂಡಂತೆ) ತಲಾ ₹2 ಕೋಟಿಯವರೆಗೆ ಸಾಲ ಒದಗಿಸಲು ಸರಕಾರ ಬದ್ಧವಾಗಿದೆ ಎಂದಿದ್ದಾರೆ. ಇದು ಮಹಿಳಾ ಉದ್ಯಮಿಗಳಿಗೆ ಇರುವ ಆರಂಭಿಕ ಸಂಪನ್ಮೂಲದ ಕೊರತೆ ನಿವಾರಿಸಲು ಮತ್ತು ಅವರ ಉದ್ಯಮಶೀಲಗೆ ಇರುವ ಅಡೆತಡೆಗಳನ್ನು ಸುಲಭಗೊಳಿಸಲು ಸಹಾಯ ಆಗಬಲ್ಲದು ಎಂಬುವುದು ಸರಕಾರದ ಆಲೋಚನೆ. ಆದರೆ ಬರಿಯ ಸಂಪನ್ಮೂಲದ ಕೊರತೆ ಒಂದೇ ಮಹಿಳಾ ಉದ್ಯಮಶೀಲತೆಗೆ ಇರುವ ಭಾದಕವೇ? ಅವರಲ್ಲಿ skillset development ಗೆ ಬೇಕಾದ ತರಬೇತಿಗಳನ್ನು ನೀಡುವ ನಿಟ್ಟಿನಲ್ಲಿ ಸರಕಾರವಿನ್ನೂ ಎಚ್ಚೆತ್ತ ಹಾಗೆ ಕಾಣುವುದಿಲ್ಲ. ಮಹಿಳಾ ವಿತ್ತ ಮಂತ್ರಿಯಾಗಿ ನಿರ್ಮಲ ಸೀತಾರಾಮನ್ 8 ಬಾರಿ ಬಜೆಟ್ ಮಂಡಿಸಿದರೂ ಈ ದಿಕ್ಕಿನಲ್ಲಿ ಏನೂ ಕ್ರಮಗಳನ್ನು ಕೈಗೊಳ್ಳದೇ ಇರುವುದು ದುಃಖಕರ.
ಮೋದಿ ಸರ್ಕಾರ ಬೇಟಿ ಬಚಾವೊ, ಬೇಟಿ ಪಡಾವೊ, ನಾರೀಶಕ್ತಿ ಅಂತ ಹೇಳುತ್ತಾ, ಮಹಿಳಾ ಸುರಕ್ಷತೆಗೆ ನೀಡಿರುವ ಪ್ರಾಮುಖ್ಯತೆ ಶೂನ್ಯ. ಶಿಕ್ಷಣಕ್ಕೆ ಕೂಡ ನೀಡಿರುವ ಆದ್ಯತೆ ನಗಣ್ಯ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿರುವ ಆದ್ಯತೆ ಶೂನ್ಯ. ಬರಿಯ 12ಲಕ್ಷ ರೂ.ವರೆಗಿನ ವೇತನಕ್ಕೆ ಆದಾಯ ತೆರಿಗೆ ರಿಯಾಯಿತಿ ಎನ್ನುತ್ತಾ ಕೆಲವೇ ಕೆಲವು ಮಧ್ಯಮ ವರ್ಗದ ಜನರಿಗೆ ಬಣ್ಣದ ಮಾತುಗಳನ್ನು ತೋರಿಸುತ್ತ, ಶಿಕ್ಷಣ, ಮಹಿಳಾ ಸುರಕ್ಷತೆ, ಮಹಿಳಾ ಉದ್ಯೋಗ ಖಾತರಿ, ಮಹಿಳಾ ಆರೋಗ್ಯ, ಮಹಿಳಾ ಪಿಂಚಣಿ ಬಗ್ಗೆ ನಿರ್ಲಕ್ಷ್ಯತನ ತೋರಿಸಿರುವ ಬಜೆಟ್ ಇದು.
ಬಜೆಟ್ 2025ರ ಸಕ್ಷಮ ಅಂಗನವಾಡಿ ಮತ್ತು ಪೋಷಣೆ 2.0 ಅಡಿಯಲ್ಲಿ, 8 ಕೋಟಿಗಿಂತಲೂ ಹೆಚ್ಚು ಮಕ್ಕಳು ಹಾಗೂ 1ಕೋಟಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಮತ್ತು 20ಲಕ್ಷ ಹದಿಹರೆಯದ ಹುಡುಗಿಯರಿಗೆ (ಮುಖ್ಯವಾಗಿ ಕೆಲವು ನಿಗದಿತ ಜಿಲ್ಲೆಗಳು ಮತ್ತು ಈಶಾನ್ಯ ಭಾರತ) ಪ್ರಮುಖ ಪೌಷ್ಟಿಕಾಂಶದ ಬೆಂಬಲವನ್ನು ನೀಡುತ್ತವೆ ಎಂದು ಸೀತಾರಾಮನ್ ಹೇಳಿದ್ದಾರೆ. ಅದೇ ಮೋದಿಯವರು “ದೇಶ ಬೊಜ್ಜುತನದಿಂದ (obesity) ಬಳಲುತ್ತಿದೆ” ಅಂತ ಒಂದೆಡೆ ಹೇಳುತ್ತಾ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡುತ್ತಿರುವ ಮೊಟ್ಟೆ ವಿತರಣೆಯನ್ನು ಕೂಡ ನಿಲ್ಲಿಸಿದ್ದಾರೆ.
ಇತ್ತೀಚೆಗೆ, ಭಾರತವು ವಿಶ್ವ ಹಸಿವು ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್ -ಜಿಹೆಚ್ಐ) 2024ರಲ್ಲಿ 127 ದೇಶಗಳಲ್ಲಿ 105ನೇ ಸ್ಥಾನದಲ್ಲಿದೆ. ಇದು ಇಂದು ನಮ್ಮ ದೇಶದಲ್ಲಿ ಇರುವ ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯ ಸವಾಲೊಡ್ಡಿರುವ ಗಂಭೀರ ಹಸಿವಿನ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ ಎಂದು ಪ್ರಕಟಿಸಿದೆ. ಭಾರತದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸರಿ ಸುಮಾರು 44% ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ. 72% ಶಿಶುಗಳು ಮತ್ತು 52% ವಿವಾಹಿತ ಮಹಿಳೆಯರಲ್ಲಿ ರಕ್ತಹೀನತೆ ಇದೆ ಎಂದು ವರದಿಗಳು ಹೇಳುತ್ತಿವೆ. ಹಾಗಿದ್ದೂ ಪೌಷ್ಟಿಕತೆಯ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ನಿಜಕ್ಕೂ ಅಚ್ಚರಿ ತರುವಂತದ್ದು.
ಇದನ್ನೂ ಓದಿ ಬಜೆಟ್ ವಿಶ್ಲೇಷಣೆ | ಗ್ರಾಮೀಣ ಸಂಕಟ ತೀವ್ರಗೊಂಡರೂ ಮನರೇಗ ಹಂಚಿಕೆ ಮೂಲೆಗುಂಪು
ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಬಜೆಟ್ ವ್ಯಾಖ್ಯಾನಿಸಿದರೂ, ಯಾವ ರೀತಿಯಲ್ಲಿ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಲ್ಲ. ಇನ್ನು ದಿನನಿತ್ಯ ದಿನಸಿ, ಔಷಧಿ ಇತ್ಯಾದಿ ದೈನಂದಿನ ಖರ್ಚು ವೆಚ್ಚಗಳು ದಿನೇದಿನೇ ಹೆಚ್ಚಾಗುತ್ತಿರುವ, ಅತ್ಯಧಿಕ ಆರ್ಥಿಕ ಹಣದುಬ್ಬರ ಎದುರಿಸುತ್ತಿರುವ ಸಾಮಾನ್ಯ, ಮಾಧ್ಯಮ ವರ್ಗದ ಮಹಿಳೆಯರಿಗೆ ಈ ಬಜೆಟ್‌ನಲ್ಲಿ ಅಂತಹ ಪರಿಹಾರ ಏನೂ ದಕ್ಕಿದಂತಿಲ್ಲ.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.