ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರುತ್ತಿರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬಹುತೇಕ ಎಲ್ಲ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬಂದಿದ್ದು, ಕರ್ನಾಟಕ ನಕ್ಸಲ್ ಹೋರಾಟ ಮುಕ್ತ ರಾಜ್ಯವೆಂದು ಘೋಷಿಸಲಾಗಿದೆ. ಇದೀಗ, ಆಂಧ್ರದಲ್ಲಿ ಸಕ್ರಿಯವಾಗಿದ್ದ, ಉಡುಪಿ ಮೂಲದ ನಕ್ಸಲ್ ಹೋರಾಟಗಾರ್ತಿ ಲಕ್ಷ್ಮಿ ತೊಂಬಟ್ಟು ಕೂಡ ಮುಖ್ಯವಾಹಿನಿಗೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಸಮೀಪದ ತೊಂಬಟ್ಟು ಗ್ರಾಮದವರಾದ ಲಕ್ಷ್ಮಿ ಅವರು ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಮುಖ್ಯವಾಹಿನಿಗೆ ಬರುವ ಸಾಧ್ಯತೆ ಇದೆ.
2006 ಮಾರ್ಚ್ 6ರಂದು ಊರು ತೊರೆದಿದ್ದರು. ಅವರು ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗುದ್ದರು. ಮಾಜಿ ನಕ್ಸಲ್ ಹೋರಾಟಗಾರ ಸಂಜೀವ ಎಂಬಾತನನ್ನು ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಸದ್ಯ, ಸಂಜೀವ ಅವರು ಈಗಾಗಲೆಡ ಮುಖ್ಯವಾಹಿನಿಗೆ ಬಂದಿದ್ದಾರೆ. ಆದರೆ, ಲಕ್ಷ್ಮಿ ಅವರು ಮುಖ್ಯವಾಹಿನಿಗೆ ಬಂದಿರಲಿಲ್ಲ. ಅವರ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಬೆದರಿಕೆ, ಕರಪತ್ರ ಹಂಚಿಕೆಗೆ ಸಂಬಂಧಪಟ್ಟಿವೆ ಎಂದು ವರದಿಯಾಗಿದೆ.
ತೊಂಬಟ್ಟುವಿನ ಪಂಜು ಪೂಜಾರಿ ಮತ್ತು ಅಬ್ಬಕ್ಕ ಪೂಜಾರಿ ದಂಪತಿಯ ಆರು ಮಕ್ಕಳ ಪೈಕಿ ಲಕ್ಷ್ಮಿ ಐದನೆಯವರು. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದ ಲಕ್ಷ್ಮಿ, ತನ್ನ ಗ್ರಾಮದ ಸಾಮಾಜಿಕ ಚಳುವಳಿಗಳಾದ ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ನಕ್ಸಲ್ ಗುಂಪಿನಲ್ಲಿ ಹಾಡುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.