‘ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ದವಾಗಿದೆ’ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಶಾಂಭವಿ ಪೀಠಾಧೀಶ್ವರ ಆನಂದ ಸ್ವರೂಪ ಸ್ವಾಮೀಜಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ನಾಟೇಕರ್ ಆಗ್ರಹಿಸಿದ್ದಾರೆ.
ʼಭಾರತ ದೇಶ ಬಹು ಸಂಸ್ಕೃತಿ, ಭಾಷೆಗಳಿಂದ ಕೂಡಿದೆ. ಇಲ್ಲಿ ಹಲವಾರು ಜಾತಿ, ಧರ್ಮ, ವರ್ಗಗಳಿವೆ. ಪ್ರಸ್ತುತ ಇರುವ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ನೀಡಲಾಗಿದೆ. ಇಂತಹ ಶ್ರೇಷ್ಠ ಸಂವಿಧಾನ ಬದಲಾಯಿಸಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾದ ಸಂವಿಧಾನ ತರುವುದಕ್ಕೆ ಹುನ್ನಾರ ನಡೆಸುತ್ತಿರುವುದು ಖಂಡನೀಯʼ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಸಮಾನತೆ ಸಮಾಜ ಒಪ್ಪದ ಕೆಲವು ಮನುವಾದಿಗಳು ಡಾ.ಅಂಬೇಡ್ಕರ್ ಅವರ ರಚಿತ ಸಂವಿಧಾನ ಬದಲಿಸುವ ಹುನ್ನಾರ ನಡೆಸುತ್ತಿದ್ದಾರೆ. ಒಂದು ವೇಳೆ ಭಾರತೀಯ ಸಂವಿಧಾನಕ್ಕೆ ಧಕ್ಕೆ ಬಂದರೆ ಇಡೀ ರಾಷ್ಟ್ರಮಟ್ಟದಲ್ಲಿ ರಕ್ತದ ಕಾಲುವೆ ಹರಿಯುತ್ತದೆ. ದೇಶದಲ್ಲಿ ಹಿಂದೂ ಧರ್ಮದ ಸಂವಿಧಾನ ಹೇರಲು ಮುಂದಾದರೆ ಮತ್ತೊಮ್ಮೆ ಭೀಮಾಕೋರೆಗಾವ್ ಮರುಕಳಿಸುತ್ತದೆʼ ಎಂದು ಎಚ್ಚರಿಕೆ ನೀಡಿದರು.
ʼಮನುವಾದಿಗಳ ಮೂಲ ಉದ್ದೇಶವೇನೆಂದರೆ, ಮೇಲ್ಜಾತಿಯಲ್ಲಿ ಹುಟ್ಟಿ, ವೇದ ಉಪನಿಷತ್ ಗಳನ್ನು ಅಧ್ಯಯನ ಮಾಡಿದವರು ಮಾತ್ರ ಅಧಿಕಾರದಲ್ಲಿರಬೇಕು. ಇನ್ನುಳಿದ ಎಲ್ಲಾ ಜಾತಿ ಜನಾಂಗದವರಿಗೆ ಅಧಿಕಾರದಿಂದ ದೂರ ತಳ್ಳಬೇಕು ಎಂಬುದಾಗಿದೆ. ಆರ್‌ಎಸ್‌ಎಸ್ ತನ್ನ ಶತಮಾನೋತ್ಸವ ಸಂಭ್ರಮದಲ್ಲಿ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹೊರಟಿದ್ದಾರೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕೇಂದ್ರ ಬಜೆಟ್ 2025 : ಯಾರು ಏನಂದ್ರು?
ಹಿಂದೂ ಸಂವಿಧಾನದ ಹೇಳಿಕೆ ನೀಡಿದ ಸ್ವಾಮೀಜಿಯ ವಿರುದ್ಧ ಕೂಡಲೇ ದೇಶದ್ರೋಹ ಪ್ರಕರಣ ದಾಖಲಿಸಿ, ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಪ್ರದೀಪ ನಾಟೇಕರ್ ಒತ್ತಾಯಿಸಿದ್ದಾರೆ